ದ.ಕ. ಲಾಕ್‌ಡೌನ್ ಕಟ್ಟುನಿಟ್ಟು

mangalore
Published on

ಮಂಗಳೂರು: ರಾಜ್ಯ ಸರ್ಕಾರದ ನಿರ್ದೇಶನದಂತೆ ದ.ಕ ಜಿಲ್ಲೆಯೂ ಭಾನುವಾರ ಸಂಪೂರ್ಣ ಲಾಕ್‌ಡೌನ್ ಆಗಲಿದೆ. ಮೇ 23ರಂದು ಸಾಯಂಕಾಲ 7 ಗಂಟೆಯಿಂದ ಆರಂಭವಾಗುವ ಸಂಪೂರ್ಣ ಲಾಕ್‌ಡೌನ್ ಮೇ 25ರಂದು ಸೋಮವಾರ ಬೆಳಗ್ಗೆ 7 ಗಂಟೆಯ ವರೆಗೆ ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.

ಲಾಕ್‌ಡೌನ್ ಅವಧಿಯಲ್ಲಿ ಅಗತ್ಯ ವಸ್ತುಗಳಾದ ದಿನಪತ್ರಿಕೆ, ತರಕಾರಿ, ಮೀನು-ಮಾಂಸ, ಹಾಲು ಮತ್ತು ಔಷಧ ಪೂರೈಕೆಗೆ ನಿರ್ಬಂಧವಿಲ್ಲ. ಆದರೆ ಇತರ ಎಲ್ಲ ಅಂಗಡಿ ಮುಂಗಟ್ಟುಗಳು, ಹೋಟೆಲ್, ಬಾರ್‌ಗಳನ್ನು ಕಡ್ಡಾಯವಾಗಿ ಬಂದ್ ಮಾಡಬೇಕು. ಖಾಸಗಿ ಹಾಗೂ ಸಾರ್ವಜನಿಕ ವಾಹನಗಳ ಸಂಚಾರಕ್ಕೂ ಅವಕಾಶವಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮದುವೆಗೆ ಅನುಮತಿ ಅವಶ್ಯ: ಭಾನುವಾರ ನಿಗದಿಯಾಗಿರುವ, ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆದ ಮದುವೆಗಳನ್ನು ಸರ್ಕಾರ ನಿಗದಿ ಪಡಿಸಿರುವ ಮಾರ್ಗಸೂಚಿಯಂತೆ ನಡೆಸಬೇಕು. ಮದುವೆ ಹಿನ್ನೆಲೆಯಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸುವ ಅವಶ್ಯಕತೆ ಇದ್ದಲ್ಲಿ ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಕಡ್ಡಾಯವಾಗಿದೆ.

ಬಂಟ್ವಾಳ ಕಂಟೇನ್ಮೆಂಟ್ ಪ್ರದೇಶ ಪರಿಷ್ಕರಣೆ

ಮಂಗಳೂರು: ಸರ್ಕಾರದ ಹೊಸ ಆದೇಶದಂತೆ ಬಂಟ್ವಾಳ ಕಸ್ಬಾ ಗ್ರಾಮದ ಕಂಟೇನ್ಮೆಂಟ್ ಪ್ರದೇಶವನ್ನು ದ.ಕ ಜಿಲ್ಲಾಡಳಿತ ಶುಕ್ರವಾರ ಪರಿಷ್ಕರಣೆಗೊಳಿಸಿದೆ. ಇನ್ನು ಪೂರ್ವದಲ್ಲಿ ಸದಾಶಿವ ಪ್ರಭು ಮನೆ, ಪಶ್ಚಿಮದಲ್ಲಿ ಸರ್ಕಾರಿ ಘಟ್ಟರ್, ಉತ್ತರದಲ್ಲಿ ರವಿಚಂದ್ರ ಮನೆ, ದಕ್ಷಿಣದಲ್ಲಿ ಸುರೇಶ್ ದಾಮೋದರ ಬಾಳಿಗಾ ಮನೆ ಕಂಟೇನ್ಮೆಂಟ್ ವ್ಯಾಪ್ತಿಯಾಗಿರುತ್ತದೆ. ಪೂರ್ವದಲ್ಲಿ ಬಂಟ್ವಾಳ ಪೇಟೆಯ ರಥಬೀದಿ ಮುಖ್ಯರಸ್ತೆ, ಪಶ್ಚಿಮದಲ್ಲಿ ಎಸ್‌ವಿಎಸ್ ಶಾಲಾ ಮೈದಾನ, ಉತ್ತರದಲ್ಲಿ ಶಶಿಕಲಾ ಮನೆ, ದಕ್ಷಿಣದಲ್ಲಿ ಬಾಲಾಜಿ ಸರ್ವೀಸ್ ಸ್ಟೇಷನ್ ಬಫರ್ ಜೋನ್‌ನಲ್ಲಿರುತ್ತದೆ. ಕಂಟೇನ್ಮೆಂಟ್ ವ್ಯಾಪ್ತಿಯಲ್ಲಿ 97 ಮನೆಗಳು, 12 ಅಂಗಡಿಗಳು, 3 ಕಚೇರಿಗಳು ಒಳಗೊಳ್ಳಲಿದ್ದು, ಒಟ್ಟು 388 ಜನಸಂಖ್ಯೆ ಇರುತ್ತದೆ. ತಹಸೀಲ್ದಾರ್ ಅವರು ಇನ್ಸಿಡೆಂಟ್ ಕಮಾಂಡರ್ ಆಗಿರುತ್ತಾರೆ ಎಂದು ಜಿಲ್ಲಾಧಿಕಾರಿ ಆದೇಶ ತಿಳಿಸಿದೆ.

ಉಪ್ಪಿನಂಗಡಿ ಲಕ್ಷ್ಮೀನಗರ ಸೀಲ್‌ಡೌನ್ ತೆರವು

ಉಪ್ಪಿನಂಗಡಿ: ದಂಪತಿಗೆ ಕರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಉಪ್ಪಿನಂಗಡಿಯ ಲಕ್ಷ್ಮೀನಗರದಲ್ಲಿ 40 ದಿನಗಳಿಂದ ಜಾರಿಯಲ್ಲಿದ್ದ ಸೀಲ್‌ಡೌನ್ ಶುಕ್ರವಾರ ತೆರವುಗೊಂಡಿದೆ. ದೆಹಲಿಗೆ ಹೋಗಿ ಬಂದಿದ್ದ ವಕೀಲನಿಗೆ ಮೊದಲು ಪಾಸಿಟಿವ್ ಬಂದ ಬಳಿಕ ಪತ್ನಿಗೂ ಸೋಂಕು ತಗುಲಿತ್ತು. ದಂಪತಿ ಗುಣಮುಖರಾಗಿ ಕೆಲ ದಿನಗಳ ಹಿಂದೆಯೇ ಮನೆಗೆ ಹಿಂತಿರುಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net