15ರ ರಾತ್ರಿಯಿಂದ ಒಂದು ವಾರ ವರೆಗೆ ದ.ಕ.ಜಿಲ್ಲೆ ಲಾಕ್‌ಡೌನ್

lockdown new
Published on

ಮಂಗಳೂರು: ರಾಜ್ಯದಲ್ಲಿ ಸದ್ಯ ಕೋವಿಡ್ ಪ್ರಕರಣಗಳಲ್ಲಿ ಎರಡನೇ ಸ್ಥಾನದಲ್ಲಿರುವ ದ.ಕ ಜಿಲ್ಲೆಯಲ್ಲಿ ಕರೊನಾ ಮೇಲೆ ನಿಯಂತ್ರಣ ಸಾಧಿಸುವ ನಿಟ್ಟಿನಲ್ಲಿ ಜು.15ರ ರಾತ್ರಿಯಿಂದ 7 ದಿನಗಳ ಲಾಕ್‌ಡೌನ್ ಹೇರಲು ನಿರ್ಧರಿಸಲಾಗಿದೆ.

ಸಿಎಂ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಸೋಮವಾರ ಬೆಳಗ್ಗೆ ವಿಡಿಯೋ ಕಾನ್ಫರೆನ್ಸ್ ವೇಳೆ ದ.ಕ. ಜಿಲ್ಲೆಯ ಜನಪ್ರತಿನಿಧಿಗಳು ಲಾಕ್‌ಡೌನ್ ಬೇಕು ಎನ್ನುವ ಅಹವಾಲು ವ್ಯಕ್ತಪಡಿಸಿದರು. ಅಂತಿಮ ನಿರ್ಧಾರದ ಹೊಣೆಯನ್ನು ಸಿಎಂ ಜಿಲ್ಲಾಧಿಕಾರಿಗೇ ನೀಡಿದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರೊಂದಿಗೆ ಸಭೆ ನಡೆಸಿದ ದ.ಕ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅಂತಿಮವಾಗಿ ಲಾಕ್‌ಡೌನ್ ನಿರ್ಧಾರ ಕೈಗೊಂಡರು. ನಂತರ ವಿಡಿಯೋ ಸಂದೇಶ ನೀಡಿದ ಸಚಿವ ಕೋಟ, ಬುಧವಾರ ರಾತ್ರಿಯಿಂದಲೇ ಲಾಕ್‌ಡೌನ್ ಮಾಡಲು ತೀರ್ಮಾನಿಸಲಾಗಿದೆ. ಒಂದು ವಾರಕ್ಕೆ ಬೇಕಾದ ಸಾಮಗ್ರಿ ಖರೀದಿಸಿಕೊಳ್ಳಿ. ಬುಧವಾರ ರಾತ್ರಿ ವರೆಗೂ ಅದಕ್ಕೆ ಅವಕಾಶ ಇದೆ ಎಂದು ಸಾರ್ವಜನಿಕರಿಗೆ ತಿಳಿಸಿದರು.

ವ್ಯಾಪಾರ, ವಹಿವಾಟು ಜೋರು

ಮಂಗಳೂರು: ಜಿಲ್ಲೆಯಲ್ಲಿ ಲಾಕ್‌ಡೌನ್ ಘೋಷಣೆಗೂ ಮುನ್ನ, ಸೋಮವಾರ ಬೆಳಗ್ಗಿನಿಂದಲೇ ಮಂಗಳೂರಿನಲ್ಲಿ ವ್ಯಾಪಾರ ವಹಿವಾಟು ಜೋರಾಗಿತ್ತು. ಬೆಂಗಳೂರು ರೀತಿ ಮಂಗಳೂರಿನಲ್ಲೂ ಲಾಕ್‌ಡೌನ್ ಆಗಬಹುದು ಎಂದು ಭಾವಿಸಿದ ಹೆಚ್ಚಿನ ಜನರು ದಿನಬಳಕೆಯ ವಸ್ತುಗಳ ಖರೀದಿಗೆ ಮಾರುಕಟ್ಟೆಗೆ ಧಾವಿಸಿದ್ದರು.

ಮಧ್ಯಾಹ್ನ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಲಾಕ್‌ಡೌನ್ ಘೋಷಣೆ ಮಾಡಿದ ಬೆನ್ನಲ್ಲೇ ಸಾಯಂಕಾಲ ವೇಳೆ ಅಂಗಡಿ-ಮಳಿಗೆಗಳಲ್ಲಿ ಗ್ರಾಹಕರ ಸಂಖ್ಯೆ ಮತ್ತಷ್ಟು ಹೆಚ್ಚಾಯಿತು. ಮಂಗಳವಾರ, ಬುಧವಾರವೂ ಮಾರುಕಟ್ಟೆಯಲ್ಲಿ ಇದೇ ಸನ್ನಿವೇಶ ಎದುರಾಗುವ ಸಾಧ್ಯತೆಯಿದೆ.

ಮಂಗಳೂರಿನ ಹಳೇ ಕೇಂದ್ರ ಮಾರುಕಟ್ಟೆ ಸೇರಿದಂತೆ ಕೆಲವು ಭಾಗಗಳಲ್ಲಿ, ವಾಹನ ದಟ್ಟಣೆ ಉಂಟಾಗಿತ್ತು. ದಿನಸಿ ಮತ್ತು ತರಕಾರಿ ಕೊಳ್ಳಲು ಜನರು ಮುಗಿಬಿದ್ದಿದ್ದರು. ಸೂಪರ್ ಮಾರ್ಕೆಟ್‌ಗಳಲ್ಲಿ ಜನ ಜನಜಂಗುಳಿಯಿತ್ತು. ನಗರದ ಇತರ ಮಾರುಕಟ್ಟೆಗಳಾದ ಕದ್ರಿ ಮಲ್ಲಿಕಟ್ಟೆ, ಕಂಕನಾಡಿ, ಉರ್ವ ಮಾರುಕಟ್ಟೆಯಲ್ಲಿಯೂ ಗ್ರಾಹಕರ ಸಂಖ್ಯೆ ಹೆಚ್ಚಿತ್ತು. ಕೆಲವು ದಿನಗಳಲ್ಲಿ ಕಡಿಮೆಯಾಗಿದ್ದ ಗ್ರಾಹಕರ ಸಂಖ್ಯೆ ಸೋಮವಾರ ಏಕಾಏಕಿ ಜಾಸ್ತಿಯಾಗಿತ್ತು.

ದಿನಸಿ, ತರಕಾರಿ ಭಾಗಶಃ ಖಾಲಿ, ದರ ಏರಿಕೆ ಒಂದು ವಾರಕ್ಕೆ ಬೇಕಾದ ಸಾಮಗ್ರಿಗಳನ್ನು ಏಕಾಏಕಿ ಖರೀದಿಸಲು ಜನರು ಮುಂದಾಗಿದ್ದರಿಂದ ದ.ಕ.ಜಿಲ್ಲೆಯ ಸಣ್ಣ ಕಿರಾಣಿ ಅಂಗಡಿಗಳಲ್ಲಿ ಸೋಮವಾರವೇ ದಿನಸಿ ವಸ್ತುಗಳು ಭಾಗಶಃ ಖಾಲಿಯಾಗಿವೆ. ಮಂಗಳವಾರಕ್ಕೆ ಹೊಸ ಸ್ಟಾಕ್ ಬರಬೇಕಿದ್ದು, ಲಾಕ್‌ಡೌನ್ ಘೋಷಣೆಯಾಗಿರುವುದರಿಂದ ಅಗತ್ಯಕ್ಕೆ ತಕ್ಕಷ್ಟು ಸಿಗುವ ಖಾತರಿಯಿಲ್ಲ. ಇನ್ನೂ ಎರಡು ದಿನ ವ್ಯಾಪಾರಕ್ಕೆ ಅವಕಾಶವಿದ್ದು, ಗ್ರಾಹಕರಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಪ್ರಯತ್ನ ಮಾಡಲಾಗುವುದು ಎನ್ನುತ್ತಾರೆ ವ್ಯಾಪಾರಿಗಳು. ಇದೇ ವೇಳೆ ತರಕಾರಿ ಅಂಗಡಿಗಳಲ್ಲೂ ವಹಿವಾಟು ಹೆಚ್ಚಾಗಿ ತರಕಾರಿ ಖಾಲಿಯಾಗಿವೆ, ದರದಲ್ಲೂ ಏರಿಕೆ ಕಂಡುಬಂದಿದೆ. ಉಡುಪಿಯಲ್ಲಿ ಇಂತಹ ಸ್ಥಿತಿ ಇರಲಿಲ್ಲ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್‌ಡೌನ್ ಅನಿವಾರ್ಯ. ಉಡುಪಿ ಜಿಲ್ಲೆಯ ಮಟ್ಟಿಗೆ ಸದ್ಯಕ್ಕೆ ಲಾಕ್‌ಡೌನ್ ಅಗತ್ಯವಿಲ್ಲ ಅನ್ನಿಸುತ್ತದೆ. ಉಡುಪಿ-ದಕ್ಷಿಣ ಕನ್ನಡ ಗಡಿ ಮುಚ್ಚುವ ಅಥವಾ ತೆರೆಯುವ ಬಗ್ಗೆ ಮುಂದಿನ ದಿನದಲ್ಲಿ ಕ್ರಮ ಕೈಗೊಳ್ಳಲಾಗುವುದು. - ಕೋಟ ಶ್ರೀನಿವಾಸ ಪೂಜಾರಿ, ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net