ವಸತಿ ಯೋಜನೆಯಡಿ ಸಾಲ ಸೌಲಭ್ಯ ಬ್ಯಾಂಕ್‌ಗಳಿಗೆ ಜಿಪಂ ಸಿಇಒ ಡಾ. ಕುಮಾರ್ ತಾಕೀತು

lead bank
Published on


ಮಂಗಳೂರು: ಪ್ರಧಾನ ಮಂತ್ರಿ ಆವಾಸ್ ಯೋಜನೆ, ಬಸವ ಹಾಗೂ ಅಂಬೇಡ್ಕರ್ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ಜಿಲ್ಲೆಯ ಅರ್ಹ 8 ಸಾವಿರ ಫಲಾನುಭವಿಗಳಿಗೆ ನಿಗದಿ ಪಡಿಸಿದ ಕಾಲಮಿತಿಯೊಳಗೆ ಸಾಲಸೌಲಭ್ಯ ಒದಗಿಸುವಂತೆ ಜಿಪಂ ಸಿಇಒ ಡಾ. ಕುಮಾರ್ ಅವರು ಬ್ಯಾಂಕುಗಳ ವ್ಯವಸ್ಥಾಪಕರಿಗೆ ಕಟ್ಟುನಿಟ್ಟಾಗಿ ತಿಳಿಸಿದರು.


ನಗರದ ಜಿಪಂ. ನೇತ್ರಾವತಿ ಸಭಾಂಗಣದಲ್ಲಿ ಗುರುವಾರ ಜರುಗಿದ ಜಿಲ್ಲಾ ಸಲಹಾ ಸಮಿತಿ(ಡಿಸಿಸಿ) ಹಾಗೂ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಭೆ(ಡಿಸಿಎಲ್‌ಆರ್)ಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಫಲಾನುಭವಿಗಳು ನಿರ್ಮಿಸಿಕೊಳ್ಳುವ ಮನೆಯ ಹಂತಗಳಿಗೆ ಅನುಸಾರ ಬ್ಯಾಂಕುಗಳು ಕಾಲಮಿತಿಯಲ್ಲಿ ಸಾಲ ಸೌಲಭ್ಯ ನೀಡಬೇಕು. ಪಿಎಂಎವೈ, ಬಸವ ಹಾಗೂ ಅಂಬೇಡ್ಕರ್ ವಸತಿ ಯೋಜನೆಯಡಿ ಕಳೆದ ಒಂದು ವರ್ಷದಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಸಾಲ ಒದಗಿಸದಿರುವುದು ಕಂಡು ಬಂದಿದ್ದು,ಆದ್ಯತೆ ಮೇರೆಗೆ ಫಲಾನುಭವಿಗಳಿಗೆ ಸಾಲದ ನೆರವು ನೀಡುವಂತೆ ಅವರು ನಿದರ್ಶನ ನೀಡಿದರು.


ಜಿಲ್ಲೆಯಲ್ಲಿ ಸೀ ಸಾಮರ್ಥ್ಯ ಅಭಿವೃದ್ಧಿ ಯೋಜನೆಯಡಿ ಸ್ವೀಕರಿಸಿದ ಅರ್ಜಿಗಳನ್ನು ಬಾಕಿ ಇಡಬಾರದು. ವಿಶೇಷ ಪ್ರಕರಣವೆಂದು ಪರಿಗಣಿಸಿ ಕೂಡಲೇ ಇತ್ಯರ್ಥ ಪಡಿಸಬೇಕು ಎಂದು ತಿಳಿಸಿದ ಜಿ.ಪಂ. ಸಿಇಒ, ಈ ತಿಂಗಳ ಕೊನೆ ಅಥವಾ ಮುಂದಿನ ತಿಂಗಳ ಪ್ರಾರಂಭದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದ್ದು, ಎಲ್ಲ ಬ್ಯಾಂಕುಗಳ ಹಿರಿಯ ಮ್ಯಾನೇಜರ್‌ಗಳು ಎಸ್‌ಒಪಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.


ಭಾರತೀಯ ರಿಸರ್ವ್ ಬ್ಯಾಂಕ್‌ನ ಎಫ್‌ಐಡಿಡಿ ಗುರುರಾಜ ಆಚಾರ್ಯ, ನಬಾರ್ಡ್‌ನ ದಕ್ಷಿಣ ಕನ್ನಡ-ಉಡುಪಿ ಜಿಲ್ಲಾ ಅಭಿವೃದ್ಧಿ ಮ್ಯಾನೇಜರ್ ಸಂಗೀತ ಕರ್ತ, ಕೆನರಾ ಬ್ಯಾಂಕ್‌ನ ಉಪ ಮಹಾ ಪ್ರಬಂಧಕ ಶ್ರೀಕಾಂತ್ ವಿ.ಕೆ. ಹಾಗೂ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರವೀಣ್ ಎಂ.ಪಿ. ಉಪಸ್ಥಿತರಿದ್ದರು.

((( ಬಾಕ್ಸ್
22,718 ಕೋಟಿ ರೂ.ಸಾಲ ಯೋಜನೆ
ಸಭೆಯಲ್ಲಿ 2023-24ರ ಜಿಲ್ಲಾ ಸಾಲ ಯೋಜನೆಯನ್ನು ವೇದಿಕೆಯಲ್ಲಿದ್ದ ಅತಿಥಿಗಳು ಬಿಡುಗಡೆ ಮಾಡಿದರು. ಜಿಲ್ಲೆಯ 2023-24ರ ಒಟ್ಟು ಸಾಲ ಯೋಜನೆ 22,718 ಕೋಟಿ ರೂ.ಗಳು ಮತ್ತು ಆದ್ಯತಾ ವಲಯಕ್ಕೆ 15,374 ಕೋಟಿ ರೂ. ನಿಗದಿ ಮಾಡಲಾಗಿದೆ.
ಆದ್ಯತಾ ವಲಯದ ಪ್ರಮುಖ ಕ್ಷೇತ್ರಗಳ ಗುರಿ ಇಂತಿದೆ: ವ್ಯವಸಾಯ ಕ್ಷೇತ್ರಕ್ಕೆ 7,640 ಕೋಟಿ ರೂ., ಎಂಎಸ್‌ಎಂಇಗೆ 5,893 ಕೋಟಿ ರೂ., ವಸತಿಗೆ 1,463 ಕೋಟಿ ರೂ. ಹಾಗೂ ಶಿಕ್ಷಣಕ್ಕೆ 117 ಕೋಟಿ ರೂ. ಈ ಗುರಿಯನ್ನು ಜಿಲ್ಲೆಯ ಎಲ್ಲ ರಾಷ್ಟ್ರೀಕೃತ, ಖಾಸಗಿ, ವಾಣಿಜ್ಯ, ಸಹಕಾರಿ ಬ್ಯಾಂಕುಗಳು ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ನಿರ್ವಹಣೆ ಮತ್ತು ಸಂಭಾವ್ಯತೆ ಆಧಾರದ ಮೇಲೆ ಹಂಚಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net