

ಮಂಗಳೂರು: ಲೋಕಸಭಾ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಲು ಪೊಲೀಸರು ಹಾಗೂ ಇತರ ಚುನಾವಣಾ ಸಿಬಂದಿಗೆ ಸಾಥ್ ನೀಡಲು ದ.ಕ ಜಿಲ್ಲೆಯ 565 ಮಂದಿ ಗೃಹರಕ್ಷಕ ದಳ (ಹೋಂ ಗಾರ್ಡ್) ಸಿಬಂದಿ ಸನ್ನದ್ಧಗೊಂಡಿದ್ದಾರೆ.
ಪೊಲೀಸ್ ಇಲಾಖೆ ಗೃಹರಕ್ಷಕ ದಳದ ಸಿಬಂದಿಯ ಸೇವೆಯನ್ನು ಹೆಚ್ಚಾಗಿ ಚುನಾವಣಾ ಕರ್ತವ್ಯಕ್ಕೆ ಬಳಕೆ ಮಾಡಿಕೊಳ್ಳುತ್ತಿದೆ. ಗರಿಷ್ಠ ಸಂಖ್ಯೆಯ ಗೃಹ ರಕ್ಷಕರಿಗೆ ಇಲಾಖೆಯಿಂದ ಕೋರಿಕೆ ಬಂದಿದೆ. ದ.ಕ ಜಿಲ್ಲೆಯಲ್ಲಿ ಸದ್ಯ 738 ಮಂದಿ ಗೃಹರಕ್ಷಕರಿದ್ದಾರೆ. ಇದರಲ್ಲಿ ಸಕ್ರಿಯರಲ್ಲದವರು, ಸಣ್ಣ ಮಕ್ಕಳನ್ನು ಹೊಂದಿರುವ ಮಹಿಳೆಯರು ಮೊದಲಾದವರನ್ನು ಹೊರತುಪಡಿಸಿದರೆ 565 ಮಂದಿ ಚುನಾವಣಾ ಕರ್ತವ್ಯಕ್ಕೆ ಲಭ್ಯರಿದ್ದಾರೆ.
ಮೊದಲನೇ ಹಂತದ ಮತದಾನ ಸಂದರ್ಭದಲ್ಲಿ ದ.ಕ ಜಿಲ್ಲೆಯಲ್ಲಿ, ಎರಡನೇ ಹಂತದಲ್ಲಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಹಾಗೂ ಮೂರನೇ ಹಂತದಲ್ಲಿ ಹೊರ ರಾಜ್ಯಗಳಲ್ಲಿ ದ.ಕ ಜಿಲ್ಲೆಯ ಗೃಹರಕ್ಷಕರು ಸೇವೆ ಸಲ್ಲಿಸಲಿದ್ದಾರೆ. ಮೊದಲನೇ ಹಂತದ ಮತದಾನದ ಸಂದರ್ಭ ಕರ್ತವ್ಯಕ್ಕೆ 565 ಮಂದಿ ಗೃಹರಕ್ಷಕರನ್ನು ಸೇವೆಗೆ ಸಿದ್ಧಗೊಳಿಸಲಾಗುತ್ತಿದ್ದು ಇದರಲ್ಲಿ 165 ಮಂದಿ ಮಹಿಳೆಯರಿದ್ದಾರೆ. ಎರಡನೇ ಹಂತದಲ್ಲಿ 400 ಹಾಗೂ ಮೂರನೆ ಹಂತದಲ್ಲಿ 300 ಮಂದಿ ಸೇವೆಗೆ ಲಭ್ಯರಾಗಲಿದ್ದಾರೆ. ಪೊಲೀಸ್ ಇಲಾಖೆಯಿಂದ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಸಂಖ್ಯೆ ಸ್ವಲ್ಪ ಹೆಚ್ಚಾಗುವ ಸಾಧ್ಯತೆಯೂ ಇದೆ.
ಗೃಹರಕ್ಷಕರಿಂದ ಜಾಗೃತ
ಗೃಹರಕ್ಷಕರು ಪೊಲೀಸರ ಜತೆ ಚುನಾವಣಾ ಕರ್ತವ್ಯದ ಜತೆಗೆ ಮತದಾರರು ಮತ ಚಲಾಯಿಸುವಂತೆ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ. ಜಿಲ್ಲೆಯ 15 ಘಟಕಗಳಿಗೆ ಭೇಟಿ ನೀಡಿ ಚುನಾವಣೆಗೆ ಸಂಬಂಧಿಸಿ ಕರ್ತವ್ಯ ನಿರ್ವಹಣೆ ಬಗ್ಗೆ ಮಾರ್ಗದರ್ಶನ ನೀಡಲಾಗಿದೆ. ಮತದಾನ ಪ್ರಜಾಪ್ರಭುತ್ವದ ಹಬ್ಬವಾಗಿದ್ದು, ಅದರಲ್ಲಿ ಪಾಲ್ಗೊಳ್ಳುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಎನ್ನುವುದನ್ನು ಅರ್ಹ ಮತದಾರರಿಗೆ ಸಾರುವ ಕೆಲಸ ಮಾಡಲಾಗುತ್ತಿದೆ.
ಮುಂಗಡ ಪಾವತಿ
ಗೃಹರಕ್ಷಕರಿಗೆ ಗೌರವಧನವನ್ನು ಮುಂಗಡವಾಗಿಯೇ ನೀಡಲಾಗುತ್ತದೆ. ಗೃಹರಕ್ಷಕರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ. ಅವರ ಮಾನಸಿಕ ದೃಢತೆಯನ್ನು ಕಾಪಾಡಿಕೊಳ್ಳುವುದಕ್ಕೆ ಕೌನ್ಸೆಲಿಂಗ್ ಕೂಡ ಮಾಡಲಾಗುತ್ತದೆ. ಪೊಲೀಸರ ಜತೆ ಗೃಹರಕ್ಷಕರ ಸೇವೆಗೂ ಹೆಚ್ಚಿನ ಬೇಡಿಕೆ ಇರುವುದರಿಂದ ಗೃಹರಕ್ಷಕರನ್ನು ಎಲ್ಲ ರೀತಿಯಲ್ಲಿಯೂ ಸಜ್ಜುಗೊಳಿಸಲಾಗುತ್ತಿದೆ ಎಂದು ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಠ ಡಾ.ಮುರಲಿ ಮೋಹನ ಚೂಂತಾರು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಗೆ 1,000 ಗೃಹರಕ್ಷಕ ಹುದ್ದೆಗಳು ಮಂಜೂರಾಗಿದ್ದು 738 ಭರ್ತಿಯಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಸಮಾದೇಷ್ಠರ ಸಭೆ ನಡೆದಿದೆ. ದ.ಕ ಜಿಲ್ಲೆಯ ಎಲ್ಲ 15 ಘಟಕಗಳ ಸಭೆ ನಡೆಸಲಾಗಿದೆ. ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಚುನಾವಣಾ ಕರ್ತವ್ಯ ಗೃಹರಕ್ಷಕರಿಗೆ ಹೆಚ್ಚು ತೃಪ್ತಿ ನೀಡುವ ಸೇವೆ ಮತ್ತು ಜವಾಬ್ದಾರಿಯಾಗಿದೆ. ಗೃಹರಕ್ಷಕರಿಗೆ ಅಂಚೆ ಮತದಾನಕ್ಕೆ ವ್ಯವಸ್ಥೆ ಇದೆ.
ಡಾ.ಮುರಲಿ ಮೋಹನ ಚೂಂತಾರು,
ಸಮಾದೇಷ್ಠರು, ಗೃಹರಕ್ಷಕ ದಳ ದ.ಕ ಜಿಲ್ಲೆ