ದ.ಕ. ನಿಲ್ಲದ ಸಾವಿನ ಸರಣಿ, ಮತ್ತೆ ಮೂವರು ಕರೊನಾಕ್ಕೆ ಬಲಿ, 75 ಪಾಸಿಟಿವ್

corona
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೊನಾ ಮರಣಮೃದಂಗ ಮುಂದುವರಿದಿದ್ದು, ಮೂವರು ಬಲಿಯಾಗಿದ್ದಾರೆ. ಇದರೊಂದಿಗೆ ಮೃತಪಟ್ಟವರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.

ಮಂಗಳೂರು ನಿವಾಸಿ 65 ವರ್ಷದ ವೃದ್ಧೆ ಅಧಿಕ ರಕ್ತದೊತ್ತಡ, ಮಧುಮೇಹ, ನ್ಯುಮೋನಿಯಾದಿಂದ ಬಳಲುತ್ತಿದ್ದರು.

ಅವರನ್ನು ಖಾಸಗಿ ಆಸ್ಪತ್ರೆಯಿಂದ ಶುಕ್ರವಾರ ವೆನ್ಲಾಕ್ ಐಸಿಯುಗೆ ದಾಖಲಿಸಲಾಗಿದ್ದು, ಮಧ್ಯಾಹ್ನ ಮೃತಪಟ್ಟಿದ್ದಾರೆ. ಮಂಗಳೂರು ನಿವಾಸಿ 67 ವರ್ಷದ ಗಂಡಸು ಅಧಿಕ ರಕ್ತದೊತ್ತಡ, ಮಧುಮೇಹ, ನ್ಯುಮೋನಿಯಾದಿಂದ ಬಳಲುತ್ತಿದ್ದರು. ಖಾಸಗಿ ಆಸ್ಪತ್ರೆಯಿಂದ ಅವರನ್ನು ಗುರುವಾರ ವೆನ್ಲಾಕ್‌ಗೆ ದಾಖಲಿಸಲಾಗಿದ್ದು, ರಾತ್ರಿ ಮೃತಪಟ್ಟಿದ್ದಾರೆ. ಸುಳ್ಯದ 60 ವರ್ಷದ ಮಹಿಳೆ ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯರೋಗ, ನ್ಯುಮೋನಿಯಾದಿಂದ ಬಳಲುತ್ತಿದ್ದು, ಗುರುವಾರ ವೆನ್ಲಾಕ್‌ಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮೃತಪಟ್ಟಿದ್ದಾರೆ. ಈ ಮೂವರ ಗಂಟಲುದ್ರವ ಮಾದರಿ ಪರೀಕ್ಷೆ ನಡೆಸಲಾಗಿದ್ದು, ಕರೊನಾ ದೃಢಪಟ್ಟಿದೆ.

ಶನಿವಾರ ಸ್ವೀಕೃತವಾದ ವರದಿಯನ್ವಯ 75 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಇದರಲ್ಲಿ 11 ಮಂದಿ ಗಲ್ಫ್ ರಾಷ್ಟ್ರಗಳಿಂದ ಮರಳಿದವರು. 29 ಮಂದಿ ಇನ್‌ಫ್ಲುಯೆಂಜಾ ಮಾದರಿ ಕಾಯಿಲೆ, 6 ಮಂದಿ ತೀವ್ರ ಉಸಿರಾಟ ತೊಂದರೆಯೊಂದಿಗೆ ಪಾಸಿಟಿವ್ ಆದವರು. 24 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕವಾದರೆ ಒಬ್ಬರು ರ‌್ಯಾಂಡಮ್ ಸ್ಯಾಂಪ್ಲಿಂಗ್ ವೇಳೆ ಪಾಸಿಟಿವ್ ಆದವರು.

ಕೋವಿಡ್ ಚಿಕಿತ್ಸೆ ಪಡೆದು ಗುಣವಾದ 13 ಮಂದಿ ಬಿಡುಗಡೆಗೊಂಡಿದ್ದಾರೆ. ಇನ್ನೂ 954 ಸ್ಯಾಂಪಲ್‌ಗಳ ವರದಿ ಬರುವುದು ಬಾಕಿ ಇದ್ದು ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಪಾಸಿಟಿವ್ ಪ್ರಕರಣಗಳು ಬರುವ ನಿರೀಕ್ಷೆ ಇದೆ. ಪ್ರಸ್ತುತ ಜಿಲ್ಲೆಯಲ್ಲಿ ಐವರು ರೋಗಿಗಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಮೂವರಿಗೆ ವೆಂಟಿಲೇಟರ್ ಅಳವಡಿಸಲಾಗಿದೆ.

ಯುವಮೋರ್ಚಾ ಮುಖಂಡ: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಸೂರಜ್ ಜೈನ್ ಮಾರ್ನಾಡ್ ಅವರಿಗೂ ಕರೊನಾ ಪಾಸಿಟಿವ್ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಅವರೇ ಬಹಿರಂಗಪಡಿಸಿದ್ದಾರೆ.

ಇಂದು ಪೂರ್ಣ ಲಾಕ್‌ಡೌನ್: ಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರದ ನಿರ್ದೇಶನದಂತೆ ಜುಲೈ 5ರಿಂದ ಆ.2ರವರೆಗೆ ಪ್ರತಿ ಭಾನುವಾರ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಪೂರ್ಣ ಲಾಕ್‌ಡೌನ್ ಇರಲಿದೆ. ಅಗತ್ಯವಸ್ತುಗಳಾದ ದಿನಪತ್ರಿಕೆ, ಹಾಲು, ಔಷಧಾಲಯ, ಆಸ್ಪತ್ರೆ ಹೊರತುಪಡಿಸಿ ಉಳಿದ ಸೇವೆಗಳು ಇರುವುದಿಲ್ಲ. ದಿನಸಿ ತರಕಾರಿ, ಮೀನು, ಮಾಂಸ ಮಾರಾಟಕ್ಕೂ ಅವಕಾಶವಿಲ್ಲ.

ಭಯಬೇಡ, ಅಂತರ ಪಾಲಿಸಿ: ಇದುವರೆಗೆ ದ.ಕ. ಜಿಲ್ಲೆಯಲ್ಲಿ 1095 ಕೋವಿಡ್ ಪ್ರಕರಣ ಪತ್ತೆಯಾಗಿದ್ದು, ಜನಸಂಖ್ಯೆಗೆ ಹೋಲಿಸಿದರೆ ಶೇ.0.054 ಆಗಿದೆ. ದೃಢಪಟ್ಟ ಪ್ರಕರಣಗಳಲ್ಲಿ ಶೇ.50ರಷ್ಟು ಮಂದಿ ಹೊರರಾಜ್ಯ ಮತ್ತು ಹೊರದೇಶಗಳಿಂದ ಆಗಮಿಸಿದವರು. ಸೋಂಕಿತ ವ್ಯಕ್ತಿಗಳೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ 210 ಮಂದಿಗೆ ಹಾಗೂ 2ನೇ ಸಂಪರ್ಕದ ಐವರಿಗೆ ಮಾತ್ರವೇ ಸೋಂಕು ಇದೆ. ಚಿಕಿತ್ಸೆಗೆ ಒಳಪಟ್ಟವರಲ್ಲಿ ಶೇ.98 ಮಂದಿ ಗುಣವಾಗಿದ್ದಾರೆ. ವೆಂಟಿಲೇಟರ್ ಮತ್ತು ಆಮ್ಲಜನಕ ನೀಡಿ ಚಿಕಿತ್ಸೆ ಪಡೆಯುವ ಅವಶ್ಯಕತೆ ಬಿದ್ದವರು 25 ಮಂದಿ ಮಾತ್ರ. ಜನರು ಯಾವುದೇ ಆತಂಕಕ್ಕೆ ಒಳಗಾಗದೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಆಯುರ್ವೇದ ವೈದ್ಯರ ನಿಯೋಜನೆ: ದ.ಕ. ಜಿಲ್ಲೆಯ ಕೋವಿಡ್ ಆಸ್ಪತ್ರೆ ವೈದ್ಯರನೇಕರಿಗೆ ಕರೊನಾ ಸೋಂಕು ಹಿನ್ನೆಲೆಯಲ್ಲಿ ಕೋವಿಡ್ ಕೇರ್ ಸೆಂಟರ್‌ಗಳಿಗೆ ಖಾಸಗಿ ಆಯುರ್ವೇದ ಆಸ್ಪತ್ರೆಗಳ ವೈದ್ಯರನ್ನು ನೇಮಿಸುವಂತೆ ಸೂಚನೆ ನೀಡಲಾಗಿದೆ. 13 ಖಾಸಗಿ ಆಯುರ್ವೇದ ಆಸ್ಪತ್ರೆಗಳ ತಲಾ ಐವರು ವೈದ್ಯರನ್ನು ನಿಯೋಜಿಸಲು ಸೂಚಿಸಿದ್ದು, ಈ ಕುರಿತು ದ.ಕ ಜಿಲ್ಲಾ ಆಯುಷ್ ಇಲಾಖೆಯಿಂದ ತಕ್ಷಣ ವೈದ್ಯರ ಮಾಹಿತಿ ಒದಗಿಸಲು ಆದೇಶ ನೀಡಲಾಗಿದೆ.

ಸದ್ಯ ಆರೋಗ್ಯ ಇಲಾಖೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಸೇರಿದಂತೆ ಒಟ್ಟು ಐವರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಅನೇಕರನ್ನು ಕ್ವಾರಂಟೈನ್ ಮಾಡಲಾಗಿದೆ. ಅವರನ್ನು ಐದು ದಿನ ಕಳೆದು ಮತ್ತೆ ಪರೀಕ್ಷೆ ಮಾಡಲಾಗುವುದು. ಒಂದು ವೇಳೆ ನೆಗೆಟಿವ್ ಬಂದರೆ ಮತ್ತೆ ಸೇವೆಗೆ ಸ್ವೀಕರಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.

ಡೈಲಿ ಪಾಸ್ ಒಂದು ವಾರ ವಿಸ್ತರಣೆ: ಕಾಸರಗೋಡು ಜಿಲ್ಲೆಯ ಜನರು ಉದ್ಯೋಗ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ತೆರಳಲು ಜಿಲ್ಲಾಡಳಿತ ನೀಡಿರುವ ಡೈಲಿ ಪಾಸ್ ಅವಧಿಯನ್ನು ಜುಲೈ 11ರ ರಾತ್ರಿ 10 ಗಂಟೆ ತನಕ ವಿಸ್ತರಿಸಲಾಗಿದೆ. ಹಳೇ ಪಾಸ್ ಇರುವವರು ನವೀಕರಣಕ್ಕಾಗಿ ಮತ್ತೆ ಅರ್ಜಿ ಸಲ್ಲಿಸಬೇಕಾಗಿಲ್ಲ. ಪಾಸ್ ಬಳಸಿ ತಲಪಾಡಿ ಚೆಕ್‌ಪೋಸ್ಟ್ ಮೂಲಕ ಮಾತ್ರ ಗಡಿ ದಾಟಲು ಅವಕಾಶವಿದೆ ಎಂದು ಮಂಗಳೂರು ಉಪ ವಿಭಾಗ ಸಹಾಯಕ ಆಯುಕ್ತರು ತಿಳಿಸಿದ್ದಾರೆ.

ಮಾಸ್ಕ್ ಧರಿಸದವರಿಗೆ ದಂಡ: ಮಾಸ್ಕ್ ಧರಿಸದೆ ಓಡಾಡುತ್ತಿರುವವರ ವಿರುದ್ಧ ಕಾರ್ಯಾಚರಣೆ ಆರಂಭವಾಗಿದ್ದು, ಶನಿವಾರ 25 ಮಂದಿಗೆ ದಂಡ ವಿಧಿಸಲಾಗಿದೆ. ಒಬ್ಬರಿಗೆ ತಲಾ 200 ರೂ.ನಂತೆ ದಂಡ ವಿಧಿಸಲಾಗಿದ್ದು, ಒಟ್ಟು 5 ಸಾವಿರ ರೂ. ವಸೂಲಿ ಮಾಡಲಾಗಿದೆ. ಯುವಕನೊಬ್ಬ ದಂಡ ಕಟ್ಟಲು ನಿರಾಕರಿಸಿದ್ದರಿಂದ ಆರೋಗ್ಯ ಇಲಾಖೆ ಅಧಿಕಾರಿಗಳು ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಯುವಕ ಠಾಣೆಯಲ್ಲಿ ದಂಡ ಪಾವತಿಸಿದ್ದಾನೆ.

ಕ್ವಾರಂಟೈನ್ ಉಲ್ಲಂಘನೆ 51 ಕೇಸು: ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಟ ನಡೆಸಿದ 51 ಮಂದಿ (ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ 5, ನಗರ 1, ವಿಟ್ಲ 1 ಸಹಿತ) ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೋಂ ಕ್ವಾರಂಟೈನ್‌ನಲ್ಲಿರುವವರ ಮೇಲೆ ಮೊಬೈಲ್ ಆ್ಯಪ್ ಮೂಲಕ ತಂತ್ರಜ್ಞಾನದೊಂದಿಗೆ ಬೆಂಗಳೂರಿನಲ್ಲಿರುವ ರಾಜ್ಯ ಕೋವಿಡ್ -19 ವಾರ್ ರೂಂನಲ್ಲಿ ನಿಗಾ ಇರಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net