

ಮಂಗಳೂರು: ಕ್ವಾರಂಟೈನ್ ಮುಗಿಸಿ ಮನೆಯಲ್ಲಿದ್ದ ಯುವಕನ ಸಹಿತ ಜಿಲ್ಲೆಯಲ್ಲಿ ಬುಧವಾರ ಇಬ್ಬರಲ್ಲಿ ಕರೊನಾ ಸೋಂಕು ದೃಢಪಟ್ಟಿದೆ.
ದೆಹಲಿಯಿಂದ ರೈಲಿನಲ್ಲಿ ಪ್ರಯಾಣಿಸಿ, ಮೇ 28ರಂದು ಮಂಗಳೂರಿಗೆ ಬಂದು ಕ್ವಾರಂಟೈನ್ ಆಗಿದ್ದ 25 ವರ್ಷದ ಯುವಕ ಓರ್ವ ಸೋಂಕಿತ. ಮಹಾರಾಷ್ಟ್ರದ ಪುಣೆಯಿಂದ ಆಗಮಿಸಿ ಕಾರ್ಕಳದಲ್ಲಿ ಕ್ವಾರಂಟೈನ್ ಮುಗಿಸಿ ಕಟೀಲಿನ ಪಟ್ಟೆಜಾಲುವಿನ ತಮ್ಮ ಮನೆಯಲ್ಲಿ ವಾಸವಿದ್ದ 36ರ ಯುವಕ ಇನ್ನೋರ್ವ. ಜ್ವರದ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಮೂಲ್ಕಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಗಂಟಲು ಮಾದರಿ ಪರೀಕ್ಷೆಯಲ್ಲಿ ಕರೊನಾ ಪಾಸಿಟಿವ್ ಕಂಡುಬಂದಿದೆ. ಇಬ್ಬರನ್ನೂ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಲ್ವರು ಬಿಡುಗಡೆ: ಕರೊನಾ ಚಿಕಿತ್ಸೆ ಪಡೆದು ಗುಣವಾಗಿರುವ ನಾಲ್ವರನ್ನು ಕೋವಿಡ್ ಜಿಲ್ಲಾಸ್ಪತ್ರೆಯಿಂದ ಬುಧವಾರ ಬಿಡುಗಡೆಗೊಳಿಸಲಾಗಿದೆ. 25, 17 ಹಾಗೂ 24 ವರ್ಷದ ಗಂಡಸರು ಮತ್ತು ಓರ್ವ 33 ವರ್ಷದ ಮಹಿಳೆ ಬಿಡುಗಡೆಯಾಗಿ ಮನೆಗೆ ಮರಳಿದ್ದಾರೆ.
64 ಮಂದಿಯನ್ನು ಬುಧವಾರ ತಪಾಸಣೆಗೊಳಪಡಿಸಲಾಗಿದೆ, 75 ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದೆ. ಬಂದಿರುವ 34ರಲ್ಲಿ 2 ಪಾಸಿಟಿವ್. ಇನ್ನೂ 46 ವರದಿಗಳು ಬರುವುದು ಬಾಕಿ ಇದೆ.
ಕಾಸರಗೋಡಿನ ಮೂವರಿಗೆ ಸೋಂಕು
ಕಾಸರಗೋಡು: ಜಿಲ್ಲೆಯಲ್ಲಿ ಮೂರು ಮಂದಿಯಲ್ಲಿ ಕೋವಿಡ್-19 ವೈರಸ್ ಪತ್ತೆಯಾಗಿದೆ. ಇದೇ ಸಂದರ್ಭ ಕೋವಿಡ್ ಬಾಧಿಸಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ.