

ಮಂಗಳೂರು: ಕುಡಿತದಿಂದಾಗುವ ಪಿತ್ತಕೋಶದ ತೀವ್ರ ಸಮಸ್ಯೆ ಹಾಗೂ ಮೂತ್ರಜನಕಾಂಗದ ತೀವ್ರ ತೊಂದರೆಗಳಿಂದ ಎರಡು ದಿನಗಳ ಹಿಂದೆ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಗಂಟಲ ದ್ರವ ವರದಿ ಸೋಮವಾರ ಲಭಿಸಿದ್ದು, ಕೋವಿಡ್ ಸೋಂಕು ದೃಢಪಟ್ಟಿದೆ. ಈ ಮೂಲಕ ದ.ಕ ಜಿಲ್ಲೆಯಲ್ಲಿ ಕೋವಿಡ್ ಸಂಬಂಧಿಸಿ 7ನೇ ಸಾವಿನ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕು ವೇಣೂರು ಗ್ರಾಮದ 43 ವರ್ಷದ ವ್ಯಕ್ತಿ ಸೆಪ್ಸಿಸ್, ಬಲಗಾಲಿನ ಸೆಲ್ಯುಲೈಟಿಸ್ ಸೋಂಕು, ಲಿವರ್ ಸಮಸ್ಯೆ, ಮೂತ್ರಜನಕಾಂಗ ತೊಂದರೆಗಳಿಂದ ಬಳಲುತ್ತಿದ್ದರು. 23ರಂದು ಅವರ ದೇಹದ ಗ್ಲುಕೋಸ್ ಪ್ರಮಾಣ ಕುಸಿದಿದ್ದು, ಉಜಿರೆಯ ಆಸ್ಪತ್ರೆಯೊಂದಕ್ಕೆ ಹೋಗಿ ಅಲ್ಲಿಂದ ಗ್ಲುಕೋಸ್ ನೀಡಿ ಬಳಿಕ ವೆನ್ಲಾಕ್ ಆಸ್ಪತ್ರೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಕರೆತರಲಾಗಿತ್ತು. ಅಲ್ಲಿ ಅವರು ಮೃತಪಟ್ಟಿದ್ದು ಗಂಟಲು ದ್ರವ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಸೋಮವಾರ ಅವರಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ.
ಮೃತರ ಕುಟುಂಬದವರು ಶೋಕದಲ್ಲಿದ್ದಾರೆ. ಹಾಗಾಗಿ ಇನ್ನೂ ಸೋಂಕು ತಗಲಿದ್ದು ಎಲ್ಲಿಂದ ಎನ್ನುವುದನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ. ಮೃತರೂ ಸೇರಿದಂತೆ ದ.ಕ ಜಿಲ್ಲೆಯಲ್ಲಿ ಸೋಮವಾರ ನಾಲ್ಕು ಪ್ರಕರಣಗಳು ಸೇರ್ಪಡೆಯಾಗಿವೆ.
ಮಹಾರಾಷ್ಟ್ರದ ಪುಣೆಯಿಂದ ಆಗಮಿಸಿದ 30 ವರ್ಷದ ಗಂಡಸು, ಮೇ 20ರಂದು ಮುಂಬೈ ಕುರ್ಲಾದಿಂದ ಆಗಮಿಸಿದ 25 ವರ್ಷದ ಯುವಕ ಹಾಗೂ ಮೇ.18ರಂದು ಮುಂಬೈ ಡೊಂಬಿವಿಲಿ ಥಾಣೆಯಿಂದ ಆಗಮಿಸಿದ 55 ವರ್ಷದ ಗಂಡಸಿಗೂ ಸೋಂಕು ದೃಢಪಟ್ಟಿದ್ದು ಅವರೆಲ್ಲರನ್ನೂ ವೆನ್ಲಾಕ್‌ಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೂಡುಬಿದಿರೆಯ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವವರಲ್ಲಿ ಕರೊನಾ ಪಾಸಿಟಿವ್ ಬಂದಿದ್ದರೂ ಅದನ್ನು ನಾನ್ ಕೋವಿಡ್ ಸಾವು ಎಂದು ಗುರುತಿಸಲಾಗಿತ್ತು. ವೇಣೂರಿನ ವ್ಯಕ್ತಿ ಕೂಡಾ ಹಲವು ಗಂಭೀರ ಆರೋಗ್ಯ ಸಮಸ್ಯೆಗಳಿಂದ ಮೃತಪಟ್ಟಿದ್ದಾರೆ. ಆದರೆ ಅವರಿಗೆ ಕೋವಿಡ್ ಸೋಂಕಿತ್ತು.
ಮೃತ ವ್ಯಕ್ತಿಯ ಮನೆ ಸೀಲ್‌ಡೌನ್
ಬೆಳ್ತಂಗಡಿ: ವೇಣೂರಿನ ಮೃತ ವ್ಯಕ್ತಿಯ ಮನೆ ಸೀಲ್‌ಡೌನ್ ಮಾಡಲಾಗಿದೆ. ಮನೆ ಸುತ್ತಮುತ್ತ ಓಡಾಡದಂತೆ ಮತ್ತು ಆರೋಗ್ಯ ತಪಾಸಣೆಗೆ ಒಳಪಡುವಂತೆ ವೇಣೂರು ಗ್ರಾಪಂ ಸ್ಥಳೀಯರಿಗೆ ಸೂಚನೆ ನೀಡಿದೆ. ವೇಣೂರಿನ ವ್ಯಕ್ತಿ ಮೃತಪಟ್ಟ ಬಳಿಕ ಪರಿಸರ ಪ್ರದೇಶದ ಜನರು ಆತಂಕಗೊಂಡಿದ್ದಾರೆ. ಈ ವ್ಯಕ್ತಿ ನೂರಾರು ಮಂದಿಯ ಸಂಪರ್ಕ ಹೊಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಸಾವಿನ ಬಳಿಕ ಪಾಸಿಟಿವ್ ಪತ್ತೆಯಾಗಿರುವ ಕಾರಣ, ಮೃತ ವ್ಯಕ್ತಿಯ ಸಂಪರ್ಕ ಪತ್ತೆ ಜಿಲ್ಲಾಡಳಿತಕ್ಕೆ ತಲೆನೋವಾಗಿದೆ.
ಕಾಸರಗೋಡಲ್ಲಿ 14 ಮಂದಿಗೆ ಸೋಂಕು
ಕಾಸರಗೋಡು: ಜಿಲ್ಲೆಯ 14 ಮಂದಿಯಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ.
13 ಮಂದಿ ಮಹಾರಾಷ್ಟ್ರದಿಂದ, ಒಬ್ಬರು ಕೊಲ್ಲಿ ರಾಷ್ಟ್ರದಿಂದ ಬಂದವರು. ಕೊಲ್ಲಿ ರಾಷ್ಟ್ರದಿಂದ ಆಗಮಿಸಿದ 38 ವರ್ಷ ಪ್ರಾಯದ ಉದುಮಾ ನಿವಾಸಿಗೆ ಸೋಂಕು ದೃಢಪಟ್ಟಿದೆ. ಮಹಾರಾಷ್ಟ್ರದಿಂದ ಆಗಮಿಸಿದವರಲ್ಲಿ 8 ಮಂದಿ ಕುಂಬಳೆ ನಿವಾಸಿಗಳು, ಇಬ್ಬರು ವರ್ಕಾಡಿ ನಿವಾಸಿಗಳು. ಮೀಂಜ, ಉದುಮಾ, ಕುಂಬ್ಡಾಜೆ ನಿವಾಸಿಗಳಾದ ತಲಾ ಒಬ್ಬರು ಒಳಗೊಂಡಿದ್ದಾರೆ. ಜಿಲ್ಲೆಯಲ್ಲಿ ಸೋಮವಾರ 6 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ.
ಗಂಟಲು ದ್ರವ ಮಾದರಿ ಸಂಗ್ರಹ
ವಿಟ್ಲ: ಇಲ್ಲಿನ ಠಾಣೆಯ ಸಿಬ್ಬಂದಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ 35 ಮಂದಿಯ ಗಂಟಲು ದ್ರವ ಮಾದರಿಗಳನ್ನು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು ನೇತೃತ್ವದಲ್ಲಿ ಸೋಮವಾರ ಸಂಗ್ರಹಿಸಲಾಯಿತು. ವಿಟ್ಲ ಸಿಪಿಸಿಆರ್‌ಐ ಅತಿಥಿ ಗೃಹದಲ್ಲಿ 11, ವಿಟ್ಲ ಪೊಲೀಸ್ ಠಾಣೆಯಲ್ಲಿ ಎರಡು, ವಿಟ್ಲ ಆಸ್ಪತ್ರೆಯಲ್ಲಿ 7 ಮಂದಿಯನ್ನು ದಿಗ್ಬಂಧನಗೊಳಿಸಲಾಗಿದೆ.
ಮಂಜೇಶ್ವರ ಮೂಲಕ 567 ಮಂದಿ ಕೇರಳಕ್ಕೆ
ಮಂಜೇಶ್ವರ: ಇತರ ರಾಜ್ಯಗಳಿಂದ ಮಂಜೇಶ್ವರ ಚೆಕ್‌ಪೋಸ್ಟ್ ಮೂಲಕ ಸೋಮವಾರ 567 ಮಂದಿ ಕೇರಳ ಪ್ರವೇಶ ಮಾಡಿದ್ದಾರೆ. 37,810 ಮಂದಿಗೆ ಪಾಸ್ ಮಂಜೂರು ಮಾಡಲಾಗಿದೆ. ಈವರೆಗೆ ಮಂಜೇಶ್ವರ ಚೆಕ್‌ಪೋಸ್ಟ್ ಮೂಲಕ 19,238 ಮಂದಿ ಕೇರಳಕ್ಕೆ ಆಗಮಿಸಿದ್ದಾರೆ. ಕಾಸರಗೋಡು ಜಿಲ್ಲೆಯವರಾದ 4,367 ಮಂದಿ ಮಂಜೇಶ್ವರ ಚೆಕ್‌ಪೋಸ್ಟ್ ಮೂಲಕ ಊರಿಗೆ ಆಗಮಿಸಿದ್ದಾರೆ. ಜಿಲ್ಲೆಯ 9,120 ಮಂದಿಗೆ ಪಾಸ್ ಮಂಜೂರು ಮಾಡಲಾಗಿ
ಅಬುಧಾಬಿಯಲ್ಲಿ ಹೆಜಮಾಡಿ ಯುವಕನ ಬದುಕು ಕಸಿದ ವೈರಸ್
ಪಡುಬಿದ್ರಿ: 8 ವರ್ಷಗಳಿಂದ ಅಬುಧಾಬಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದ ಹೆಜಮಾಡಿಯ 44ರ ಹರೆಯದ ಯುವಕ ಕರೊನಾ ಕಾಯಿಲೆ ಉಲ್ಬಣಿಸಿ ಭಾನುವಾರ ಮೃತಪಟ್ಟಿದ್ದಾರೆ.
ಹೆಜಮಾಡಿ ಬ್ರಹ್ಮಸ್ಥಾನ ಬಳಿಯ ಯುವಕ ಅಬುಧಾಬಿಯಲ್ಲಿದ್ದು, ದೇಶಾದ್ಯಂತ ಕರೊನಾ ಉಲ್ಬಣಿಸಿದ್ದ ಸಂದರ್ಭ ಊರಿಗೆ ಬರಲಾಗದೆ ಅಬುಧಾಬಿಯಲ್ಲೇ ಉಳಿದಿದ್ದರು. ಎರಡು ಬಾರಿ ಕರೊನಾ ಪರೀಕ್ಷೆ ನಡೆಸಿ ನೆಗೆಟಿವ್ ವರದಿ ಬಂದಿತ್ತು. ಮೂರನೇ ಬಾರಿಯ ಪರೀಕ್ಷೆಯಲ್ಲಿ ಅವರಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರಿ ಸ್ವಾಮ್ಯದ ಶೇಖ್ ಖಲೀಫಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದೆರಡು ದಿನಗಳಿಂದ ಕಾಯಿಲೆ ಉಲ್ಬಣಿಸಿದ್ದು, ಐಸಿಯುಗೆ ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು. ಮೃತರ ಪತ್ನಿ ಹಾಗೂ ಪುತ್ರಿ ಪುಣೆಯಲ್ಲಿದ್ದು, ಮೃತದೇಹ ತರಲು ಸಾಧ್ಯವಾಗದೆ, ಗೆಳೆಯರು ಮತ್ತು ಸಹೋದ್ಯೋಗಿಗಳ ಸಮ್ಮುಖ ಅಬುಧಾಬಿಯಲ್ಲೇ ಮಂಗಳವಾರ ಅಂತ್ಯಕ್ರಿಯೆ ನಡೆಯಲಿದೆ.