ದ.ಕ. ಕರೊನಾ 12ರಿಂದ 8ಕ್ಕೆ ಇಳಿಕೆ

Corona
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಕರೊನಾ ಪ್ರಕರಣವಾಗಿ ಆಸ್ಪತ್ರೆಗೆ ದಾಖಲಾಗಿದ್ದ ಭಟ್ಕಳ ಮೂಲದ 22ರ ಯುವಕನೂ ಸೇರಿದಂತೆ ಒಟ್ಟು ನಾಲ್ವರು ಪೂರ್ಣ ಗುಣಮುಖರಾಗಿ ಸೋಮವಾರ ಬೆಳಗ್ಗೆ ತಮ್ಮ ಊರಿಗೆ ತೆರಳಿದ್ದಾರೆ.

ಇತರ ಮೂವರು ಕೇರಳದ ಕಾಸರಗೋಡು ಜಿಲ್ಲೆಯವರು. ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಪಾಸಿಟಿವ್ ಕೇಸ್‌ಗಳು 12ರಿಂದ 8ಕ್ಕೆ ಇಳಿಕೆಯಾಗಿವೆ. ಆಸ್ಪತ್ರೆಯಿಂದ ಬಿಡುಗಡೆಗೊಂಡ ನಾಲ್ವರೂ ತಮ್ಮ ಮನೆಗಳಲ್ಲಿ ಪ್ರತ್ಯೇಕವಾಗಿ 14 ದಿನ ಕ್ವಾರಂಟೈನ್ ಆಗಿರಬೇಕು ಎಂದು ಸೂಚಿಸಲಾಗಿದೆ.

ದ.ಕ. ಜಿಲ್ಲೆಯಲ್ಲಿ ಪ್ರಥಮ ಪಾಸಿಟಿವ್ ಪ್ರಕರಣವಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಯುವಕ ದುಬೈನಲ್ಲಿ ಉದ್ಯೋಗದಲ್ಲಿದ್ದವರು. ಮಾ.19ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಅಲ್ಲಿ ಸ್ಕ್ರೀನಿಂಗ್ ಸಂದರ್ಭ ರೋಗ ಲಕ್ಷಣಗಳಿರುವುದರಿಂದ ಅಲ್ಲಿಂದಲೇ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಯುವಕನ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಿ ಮಾ.22ರಂದು ಕರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಪ್ರತ್ಯೇಕ ವಾರ್ಡ್‌ನಲ್ಲಿ ಯುವಕನನ್ನು ಇರಿಸಿ ಚಿಕಿತ್ಸೆ ನೀಡಲಾಗಿದ್ದು, ದಿನದಿಂದ ದಿನಕ್ಕೆ ಆರೋಗ್ಯದಲ್ಲಿ ಚೇತರಿಸಿಕೊಂಡು ಸಂಪೂರ್ಣ ಗುಣಮುಖರಾಗಿ ತೆರಳಿದ್ದಾರೆ.

ಮೊದಲ ಪ್ರಕರಣ: ಜಿಲ್ಲೆಯ ಪ್ರಥಮ ಪ್ರಕರಣ ಇದಾಗಿದ್ದರಿಂದ ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತಕ್ಷಣದಿಂದಲೇ ಕೈಗೊಂಡಿತ್ತು. ವೆನ್ಲಾಕ್ ಆಸ್ಪತ್ರೆಗೆ ಇದೊಂದು ಸವಾಲಿನ ಪ್ರಕರಣವಾಗಿತ್ತು. ರೋಗಿಯನ್ನು ಸಂಪೂರ್ಣ ಪ್ರತ್ಯೇಕವಾಗಿ ಇರಿಸುವುದರೊಂದಿಗೆ ರೋಗಕ್ಕೆ ಚಿಕಿತ್ಸೆ ನೀಡುವುದೂ ಮಹತ್ವದ್ದಾಗಿತ್ತು.

ಈ ನಿಟ್ಟಿನಲ್ಲಿ ಆಸ್ಪತ್ರೆ ಅಧೀಕ್ಷಕರು, ವೈದ್ಯರು, ನರ್ಸ್ ಹಾಗೂ ಸಿಬ್ಬಂದಿ ತಮ್ಮ ಪೂರ್ಣ ಸೇವೆಯನ್ನು ಮೀಸಲಿಟ್ಟು, ರೋಗಿಯನ್ನು ಗುಣಮುಖಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಭಾವುಕನಾದ ಭಟ್ಕಳ ಯುವಕ ಜಿಲ್ಲಾಡಳಿತ, ಆಸ್ಪತ್ರೆಗೆ ಕೃತಜ್ಞತೆ

ದುಬೈಯಲ್ಲಿ 2 ವರ್ಷಗಳಿಂದ ಬ್ರಾಂಡೆಡ್ ವಾಚ್ ವ್ಯಾಪಾರ ಮಾಡುತ್ತಿದ್ದ ಭಟ್ಕಳದ ಯುವಕ ಕರೊನಾದಿಂದ ಗುಣಮುಖಗೊಂಡು ಸೋಮವಾರ ಮುಂಜಾನೆ ಹೊರಡುವ ವೇಳೆ, ಇಷ್ಟು ದಿನ ವೆನ್ಲಾಕ್‌ನಲ್ಲಿ ತನಗೆ ಚಿಕಿತ್ಸೆ ನೀಡಿ, ಎಲ್ಲ ಅಗತ್ಯ ಸೌಲಭ್ಯಗಳನ್ನು ಒದಗಿಸಿದ ವೈದ್ಯರು, ಸಿಬ್ಬಂದಿಯನ್ನು ಗೌರವಿಸಿ ಭಾವುಕರಾದರು.

ಆಸ್ಪತ್ರೆಯಲ್ಲಿ ನನಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲಾಗಿದೆ. ನನ್ನನ್ನು ಪ್ರೀತಿಯಿಂದ ಕಾಣಲಾಯಿತು. ಯಾವುದೇ ಸಮಸ್ಯೆಯಾಗದಂತೆ ಇಷ್ಟು ದಿನ ನೋಡಿಕೊಳ್ಳಲಾಗಿದೆ. ಉತ್ತಮ ಆಹಾರವನ್ನೂ ನೀಡಲಾಗಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ.

ನನಗೆ ಈ ರೋಗ ಹೇಗೆ ಬಂತು ಎಂಬ ನಿಖರ ಕಾರಣ ತಿಳಿದಿಲ್ಲ, ಪಾಸಿಟಿವ್ ದೃಢಪಟ್ಟ ನಂತರ, ನಾನೇ ಎಲ್ಲರಿಂದಲೂ ಸಂಪೂರ್ಣ ಅಂತರ ಕಾಯ್ದುಕೊಂಡೆ, ಕರೊನಾ ವೈರಸ್ ನಮ್ಮ ದೇಹ ಪ್ರವೇಶಿಸುವುದು ಗೊತ್ತಾಗುವಾಗ ಹಲವು ದಿನ ಕಳೆದಿರುತ್ತದೆ. ನಮ್ಮ ಓಡಾಟ ನಿಯಂತ್ರಿಸುವುದು ಮಹತ್ವದ್ದು. ಈ ನಿಟ್ಟಿನಲ್ಲಿ ಲಾಕ್‌ಡೌನ್ ಸರ್ಕಾರದ ದಿಟ್ಟ ಹೆಜ್ಜೆಯಾಗಿದ್ದು, ಸರ್ಕಾರದ ನಿರ್ದೇಶನದಂತೆ ಎಲ್ಲರೂ ಮನೆಯೊಳಗೆ ಇರುವುದು ಅಗತ್ಯ. ನಾನು ವಿಮಾನ ನಿಲ್ದಾಣದಿಂದಲೇ ನೇರವಾಗಿ ಆಸ್ಪತ್ರೆಗೆ ದಾಖಲಾಗಿದ್ದರಿಂದ, ಊರಿಗೆ ತೆರಳಿ ಬಳಿಕ ಕುಟುಂಬಸ್ಥರಿಗೆ, ಊರಿನವರಿಗೆ ರೋಗ ಹರಡುವುದು ತಪ್ಪಿತು. ಇದಕ್ಕಾಗಿ ಜಿಲ್ಲಾಡಳಿತಕ್ಕೆ ತಾನು ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು ಎಂದು ಯುವಕ ತಿಳಿಸಿದ್ದಾರೆ.

ಕರೊನಾ ರೋಗಕ್ಕೆ ಹೆದರುವ ಅಗತ್ಯವಿಲ್ಲ. ಆತ್ಮವಿಶ್ವಾಸ ಮುಖ್ಯವಾಗಿದೆ. ರೋಗಿಯು ಪ್ರತ್ಯೇಕವಾಗಿರುವುದು ಅಗತ್ಯ. ಒಬ್ಬಂಟಿಯಾಗಿರುವುದಕ್ಕೆ ಹೆದರಬೇಕಾಗಿಲ್ಲ. ಯಾವುದೇ ಕಾರಣಕ್ಕೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು, ಸೋಂಕಿನ ವಿರುದ್ಧ ಹೋರಾಡಲು ನಮ್ಮಲ್ಲಿಧೈರ್ಯ ಮುಖ್ಯವಾಗಿದೆ ಎಂದರು.

ಕಾಸರಗೋಡಿನ ಮೂವರು:

ದುಬೈನಿಂದ ಮಾ.20ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ನೇರವಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಾದ 32 ವರ್ಷದ ಕಾಸರಗೋಡು ಜಿಲ್ಲೆ ನಿವಾಸಿಗೆ 23ರಂದು ಸೋಂಕು ದೃಢಪಟ್ಟಿತ್ತು. ಏ.4ರಂದು ಕಳುಹಿಸಲಾದ ಮಾದರಿಯಲ್ಲಿ ನೆಗೆಟಿವ್ ಬಂದಿದೆ.

ಮಾ.19ರಂದು 47 ವರ್ಷದ ಕಾಸರಗೋಡು ಮೂಲದ ವ್ಯಕ್ತಿ ದುಬೈನಿಂದ ವಿಮಾನ ಮೂಲಕ ಮಂಗಳೂರಿಗೆ ಆಗಮಿಸಿದ್ದು, ರೋಗ ಲಕ್ಷಣಗಳೊಂದಿಗೆ ನೇರವಾಗಿ ವೆನ್ಲಾಕ್‌ಗೆ ದಾಖಲಾಗಿದ್ದರು. 23ರಂದು ಸೋಂಕು ದೃಢಪಟ್ಟಿತ್ತು. ಏ.4ರಂದು ನಡೆಸಲಾದ ಮರು ಪರೀಕ್ಷೆಯಲ್ಲಿ ವರದಿ ನೆಗೆಟಿವ್ ಬಂದಿದೆ.

ಇನ್ನೋರ್ವ ಕಾಸರಗೋಡು ಮೂಲದ 24 ವರ್ಷದ ಯುವಕ ಕೂಡ ದುಬೈನಿಂದ ಮಾ.20ರಂದು ವಿಮಾನ ಮೂಲಕ ಮಂಗಳೂರಿಗೆ ಆಗಮಿಸಿದ್ದು, ರೋಗಲಕ್ಷಣಗಳೊಂದಿಗೆ ನೇರವಾಗಿ ವೆನ್ಲಾಕ್ ದಾಖಲಾಗಿದ್ದರು. 24ರಂದು ವರದಿ ಪಾಸಿಟಿವ್ ಬಂದಿತ್ತು. ಏ.4ರಂದು ನಡೆಸಿದ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ. ಪಾಸಿಟಿವ್ ಬಂದಿರುವ ಕಾಸರಗೋಡು ಮೂಲದ ಇನ್ನೋರ್ವ ವೃದ್ಧೆ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎಲ್ಲ 21 ವರದಿ ನೆಗೆಟಿವ್:

ದ.ಕ. ಜಿಲ್ಲೆಯಲ್ಲಿ ಸೋಮವಾರ ಸಿಕ್ಕಿರುವ ಎಲ್ಲ 21 ಲ್ಯಾಬ್ ಪರೀಕ್ಷಾ ವರದಿಗಳೂ ನೆಗೆಟಿವ್ ಬಂದಿದ್ದು, ಯಾವುದೇ ಪಾಸಿಟಿವ್ ಪ್ರಕರಣ ಇಲ್ಲದಿರುವುದು ಗಮನಾರ್ಹ ಅಂಶ. ಒಟ್ಟು 21 ಮಂದಿಯನ್ನು ಸ್ಕ್ರೀನಿಂಗ್‌ಗೊಳಪಡಿಸಿದ್ದು ಪ್ರಸ್ತುತ 4237 ಮಂದಿ ಮನೆಯಲ್ಲಿ ಕ್ವಾರಂಟೈನ್ ಆಗಿದ್ದಾರೆ. 10 ಮಂದಿ ಇಎಸ್‌ಐ ಆಸ್ಪತ್ರೆಯಲ್ಲಿದ್ದಾರೆ. 1709 ಮಂದಿ 28 ದಿನಗಳ ಕ್ವಾರಂಟೈನ್ ಪೂರ್ತಿಗೊಳಿಸಿದ್ದಾರೆ. ಸೋಮವಾರ ಕಳುಹಿಸಲಾದ 10 ಮಾದರಿಗಳ ವರದಿ ನಿರೀಕ್ಷಿಸಲಾಗಿದೆ.

ತಬ್ಲಿಘಿಗೆ ತೆರಳಿದ್ದ 44ರಲ್ಲಿ 40 ನೆಗೆಟಿವ್:

ದಕ್ಷಿಣ ಕನ್ನಡ ಜಿಲ್ಲೆಯಿಂದ ದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಜಮಾತ್‌ಗೆ ತೆರಳಿದವರ ಸಂಖ್ಯೆ 44. ಅದರಲ್ಲಿ ಇಬ್ಬರು ಈಗಾಗಲೇ ಪಾಸಿಟಿವ್ ಆಗಿದ್ದಾರೆ. ಅದೃಷ್ಟವಷಾತ್ 40 ಮಂದಿಯ ವರದಿಗಳು ನೆಗೆಟಿವ್ ಆಗಿವೆ. ಎರಡು ವರದಿಗಳಷ್ಟೇ ಬರುವುದು ಬಾಕಿ ಉಳಿದಿವೆ ಎಂದು ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ವೈದ್ಯರು, ದಾದಿಯರಲ್ಲಿ ಸಂಭ್ರಮ

ಜಗತ್ತಿನಾದ್ಯಂತ ಕರೊನಾ ರಣಕೇಕೆ ಹಾಕುತ್ತಿರುವಾಗ ಮಂಗಳೂರಿನಲ್ಲೂ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಸಹಜವಾಗಿಯೇ ವೈದ್ಯರು, ದಾದಿಯರಲ್ಲೂ ಆತಂಕ ಸೃಷ್ಟಿಸಿತ್ತು. ಪರಿಸ್ಥಿತಿ ಕೈಮೀರಿದರೆ ಏನಾಗುವುದೋ ಎಂಬ ಭೀತಿ ಇತ್ತು. ಆದರೆ ಬಾಧಿತರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿರುವುದು ಸಂತಸದ ವಿಚಾರವಾಗಿತ್ತು. ಆರಂಭದಲ್ಲಿ ಓರ್ವನ ವರದಿ ಬಂದು ಬಿಡುಗಡೆ ಖಚಿತವೆಂಬುದು ಗೊತ್ತಾದ ನಂತರ ಮತ್ತೆ ಮೂವರು ಗುಣಮುಖರಾಗಿರುವುದು ಚಿಕಿತ್ಸೆ ನೀಡಿದ ಆರೋಗ್ಯ ಯೋಧರ ಆತ್ಮವಿಶ್ವಾಸ ಹೆಚ್ಚಿಸಿದೆ. ಬಾಧಿತರು ಗುಣಮುಖರಾಗಿ ಬಿಡುಗಡೆಯಾದಾಗ ರೋಗಿಗಳಂತೆ ವೈದ್ಯರು, ದಾದಿಯರೂ ಸಂಭ್ರಮಿಸಿದ್ದಾರೆ. ರೋಗಿಗಳೂ ಖುಷಿಯಿಂದ ಬೀಳ್ಕೊಂಡು ಚಿಕಿತ್ಸೆ ನೀಡಿದವರ ಜತೆ ಫೋಟೋ ತೆಗೆಸಿಕೊಂಡೇ ಮನೆ ಹಾದಿ ಹಿಡಿದಿದ್ದಾರೆ.

ಈ ಬಗ್ಗೆ ‘ವಿಜಯವಾಣಿ’ ಜತೆ ಮಾತನಾಡಿದ ಜಿಲ್ಲಾ ವೈದ್ಯಾಧಿಕಾರಿ ಡಾ.ಸದಾಶಿವ, ‘ಕರೊನಾ ಚಿಕಿತ್ಸೆ ಸವಾಲಿನದ್ದಾದರೂ, ದ.ಕ. ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳಿದ್ದರೂ ಯಾವುದೂ ಗಂಭೀರವಾಗಿರಲಿಲ್ಲ. ಎಲ್ಲ ಬಾಧಿತರೂ ನಾರ್ಮಲ್ ಆಗಿದ್ದರು. ಜ್ವರ ಬಂದಾಗ ಆರೈಕೆ ಮಾಡುವ ರೀತಿಯಲ್ಲೇ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಗುಣಮುಖರಾದ ನಾಲ್ವರ ಗಂಟಲಿನ ಸ್ರಾವ ಮರು ಪರೀಕ್ಷೆ ನಡೆಸಿ ನೆಗೆಟಿವ್ ಖಚಿತವಾದ ನಂತರ ಬಿಡುಗಡೆಗೆ ನಿರ್ಧರಿಸಲಾಗಿದೆ’ ಎಂದಿದ್ದಾರೆ.

ಲ್ಯಾಬ್‌ಗೆ ಐಸಿಎಂಆರ್ ಅನುಮತಿ: ಕೆಲದಿನಗಳ ಹಿಂದೆಯಷ್ಟೇ ವೆನ್ಲಾಕ್‌ನಲ್ಲಿ ಪ್ರಾರಂಭಗೊಂಡಿರುವ ವೈರಾಲಜಿ ಪ್ರಯೋಗಾಲಯಕ್ಕೆ ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಅನುಮತಿ ಲಭಿಸಿದೆ. ಸದ್ಯ ‘ಕಂಟ್ರೋಲ್ ಟೆಸ್ಟಿಂಗ್’ ನಡೆಸಲಾಗುತ್ತಿದ್ದು, ಟೆಸ್ಟ್ ನಡೆಸಿದ ಸ್ಯಾಂಪಲ್‌ಗಳನ್ನು ಮರುಪರಿಶೀಲನೆಗಾಗಿ ಪುಣೆಯ ವೈರಾಲಜಿ ಇನ್‌ಸ್ಟಿಟ್ಯೂಟ್‌ಗೆ ಕಳುಹಿಸಲಾಗುತ್ತಿದೆ. ಅಲ್ಲಿ ದೃಢಪಟ್ಟ ಬಳಿಕ ಒಂದೆರಡು ದಿನದಲ್ಲಿ ಈ ಲ್ಯಾಬ್ ಅಧಿಕೃತವಾಗಿ ಕಾರ್ಯಾಚರಣೆ ಶುರು ಮಾಡಲಿದೆ.

ಜಿಲ್ಲೆಯಲ್ಲಿದ್ದ 12 ಕರೊನಾ ಪಾಸಿಟಿವ್ ಪ್ರಕರಣಗಳ ಪೈಕಿ 4 ಜನ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿದ್ದಾರೆ. ಇದು ಜಿಲ್ಲೆಯ ಜನರಿಗೆ ಸಂತಸ ವಿಚಾರವಾಗಿದೆ. ಸೋಂಕಿತರನ್ನು ಗುಣಪಡಿಸಲು ಹಗಲಿರುಳು ದುಡಿದ ವೈದ್ಯರು, ನರ್ಸ್, ಅರೆ ವೈದ್ಯಕೀಯ ಸಿಬ್ಬಂದಿ ಅಭಿನಂದನಾರ್ಹರು. ಲಾಕ್‌ಡೌನ್ ಅವಧಿಯಲ್ಲಿ ಜಿಲ್ಲಾಡಳಿತದಿಂದ ಹಲವು ಸಲಹೆ ಸೂಚನೆಗಳನ್ನು ನೀಡಲಾಗಿದ್ದು, ಸಾರ್ವಜನಿಕರಿಂದ ಸಹಕಾರ ಸಿಗುತ್ತಿದೆ. ಅವಧಿ ಪೂರ್ಣಗೊಳ್ಳುವವರೆಗೆ ಜಿಲ್ಲಾಡಳಿತಕ್ಕೆ ಸಂಪೂರ್ಣ ಸಹಕಾರದ ನೀಡಬೇಕಿದೆ. - ಸಿಂಧೂ ಬಿ.ರೂಪೇಶ್, ದ.ಕ ಜಿಲ್ಲಾಧಿಕಾರಿ ಕರೊನಾ ಚಿಕಿತ್ಸೆ ಸವಾಲಿನದ್ದಾದರೂ, ದ.ಕ. ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳಿದ್ದರೂ ಯಾವುದೂ ಗಂಭೀರವಾಗಿರಲಿಲ್ಲ. ಎಲ್ಲ ಬಾಧಿತರೂ ನಾರ್ಮಲ್ ಆಗಿದ್ದರು. ಜ್ವರ ಬಂದಾಗ ಆರೈಕೆ ಮಾಡುವ ರೀತಿಯಲ್ಲೇ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಗುಣಮುಖರಾದ ನಾಲ್ವರ ಗಂಟಲಿನ ಸ್ರಾವ ಮರು ಪರೀಕ್ಷೆ ನಡೆಸಿ ನೆಗೆಟಿವ್ ಖಚಿತವಾದ ನಂತರ ಬಿಡುಗಡೆಗೆ ನಿರ್ಧರಿಸಲಾಗಿದೆ. - ಡಾ.ಸದಾಶಿವ, ಜಿಲ್ಲಾ ವೈದ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net