ದ.ಕ.ದಲ್ಲಿ ಒಂದು ಕರೊನಾ ಪಾಸಿಟಿವ್

Corona Test
Published on

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಬುಧವಾರ ಒಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಬೆಂಗಳೂರಿನಿಂದ ಮೇ 10ರಂದು ಕಾರಿನಲ್ಲಿ ಮಂಗಳೂರಿಗೆ ಆಗಮಿಸಿದ್ದ 40 ವರ್ಷದ ಮಹಿಳೆಗೆ (ಪಿ-1437) ಕರೊನಾ ಸೋಂಕು ಬುಧವಾರ ದೃಢಪಟ್ಟಿದೆ.

ಇವರು ಮಂಗಳೂರಿನ ನೀರುಮಾರ್ಗ ಮೂಲದವರಾಗಿದ್ದು ಬೆಂಗಳೂರಿನಲ್ಲಿ ಕೆಲಸದಲ್ಲಿದ್ದರು. ತಮ್ಮ ಮಗನೊಂದಿಗೆ ಬೆಂಗಳೂರಿನ ರಾಜಾಜಿ ನಗರದಿಂದ ಮೇ 10ರಂದು ಆಗಮಿಸಿದ್ದು, ಆ ವೇಳೆಗೆ ರಾಜ್ಯದೊಳಗೆ ಓಡಾಡುವಾಗ ಆರೋಗ್ಯವಂತರಿಗೆ ಕ್ವಾರಂಟೈನ್ ಬೇಕಿಲ್ಲ ಎಂಬ ನಿಯಮ ಇತ್ತು. ಹಾಗಾಗಿ ಅವರು ತಮ್ಮ ಸೋದರರ ಮನೆಯಲ್ಲಿ ತಲಾ ನಾಲ್ಕು ದಿನ ವಾಸ್ತವ್ಯದಲ್ಲಿದ್ದರು.

ಮಹಿಳೆಗೆ ಅಸ್ತಮಾ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡ ಬಳಿಕ ವೆನ್ಲಾಕ್ ಆಸ್ಪತ್ರೆಗೆ ಮೇ 17ರಂದು ಆಗಮಿಸಿದ್ದು, ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಬುಧವಾರದ ವರದಿಯಲ್ಲಿ ಅವರ ಸ್ಯಾಂಪಲ್ ಪಾಸಿಟಿವ್ ಬಂದಿದೆ.

ಬೆಂಗಳೂರಿನಲ್ಲಿ ಕೊರಿಯರ್ ಸಂಸ್ಥೆಯಲ್ಲಿ ಈ ಮಹಿಳೆ ಕೆಲಸ ಮಾಡುತ್ತಿದ್ದ ಮಾಹಿತಿ ಇದ್ದು, ಅಲ್ಲಿ ಹಲವರೊಂದಿಗೆ ಸಂಪರ್ಕಕ್ಕೆ ಬಂದಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಗಮನ ಹರಿಸಲಾಗುತ್ತಿದೆ.

2 ಮನೆ ಸೀಲ್‌ಡೌನ್: ಮೂಲತಃ ನೀರುಮಾರ್ಗ ಕುಟ್ಟಿಕಲ ನಿವಾಸಿಯಾದ ಮಹಿಳೆ ಬೆಂಗಳೂರಿನಿಂದ ಆಗಮಿಸಿ, ಒಬ್ಬ ಸೋದರನೊಂದಿಗೆ ನೀರುಮಾರ್ಗ ಕುಟ್ಟಿಕಲದಲ್ಲಿ ನಾಲ್ಕು ದಿನ ಬಳಿಕ ಕುಡುಪು ಗ್ರಾಮದ ನಡುಮನೆಯ ಇನ್ನೋರ್ವ ಸೋದರನ ಮನೆಯಲ್ಲಿ ನಾಲ್ಕು ದಿನ ವಾಸಿಸಿದ್ದರು. ಹಾಗಾಗಿ ಈ ಎರಡೂ ಮನೆಯ ಒಟ್ಟು 18 ಮಂದಿ ಸದಸ್ಯರಿಗೆ ಸಂಪರ್ಕ ಏರ್ಪಟ್ಟಿರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಎರಡೂ ಮನೆಯಿರುವ ಜಾಗಗಳನ್ನು ಕಂಟೈನ್ಮೆಂಟ್ ವಲಯವಾಗಿ ಘೋಷಿಸಲಾಗಿದೆ.

ನಡುಮನೆ ಕುಡುಪು ಗ್ರಾಮದ ಕಂಟೈನ್ಮೆಂಟ್ ವಲಯಕ್ಕೆ ಮನಪಾ ಉಪಾಯುಕ್ತರು(ಅಭಿವೃದ್ಧಿ) ಹಾಗೂ ನೀರುಮಾರ್ಗಕ್ಕೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಘಟನಾ ಕಮಾಂಡರ್ ಆಗಿರುತ್ತಾರೆ.

ಮೂವರು ಐಸಿಯುನಲ್ಲಿ: ಪಿ-1437 ಮಹಿಳೆ ಮಧುಮೇಹ, ಮೂತ್ರದ ಸೋಂಕು ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ದುಬೈನಿಂದ ಹಿಂದಿರುಗಿದ್ದ ಪಿ-1008 ಪುರುಷ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ತೊಂದರೆ ಹಾಗೂ ಕಾಲಿನ ಸೋಂಕಿನಿಂದ ಬಳಲುತ್ತಿದ್ದಾರೆ. ಸುರತ್ಕಲ್ ಗುಡ್ಡಕೊಪ್ಲ ನಿವಾಸಿ ಪಿ-1009 ಮಹಿಳೆ ಹೃದಯ ಸಂಬಂಧಿ ಕಾಯಿಲೆ, ಶ್ವಾಸಕೋಶ ಕಾಯಿಲೆ, ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದು, ಮೂವರಿಗೂ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬುಧವಾರ ಒಟ್ಟು 45 ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದ್ದು, ಎನ್‌ಐಟಿಕೆಯಲ್ಲಿ 14 ಹೊಸ ಸೇರ್ಪಡೆಯೊಂದಿಗೆ 32 ಮಂದಿ ಹಾಗೂ ಇಎಸ್‌ಐ ಆಸ್ಪತ್ರೆಯಲ್ಲಿ 14 ಮಂದಿ ಕ್ವಾರಂಟೈನ್ ಮಾಡಲಾಗಿದೆ. 302 ಸ್ಯಾಂಪಲ್ ಕಳುಹಿಸಲಾಗಿದ್ದು ಸಿಕ್ಕಿರುವ 181ರಲ್ಲಿ ಒಂದು ಪಾಸಿಟಿವ್, 180 ನೆಗೆಟಿವ್. ಇನ್ನೂ 428 ಸ್ಯಾಂಪಲ್ ವರದಿ ಬರಲು ಬಾಕಿ ಇದೆ.

ಒಂದೇ ದಿನ ಮೂವರು ಬಿಡುಗಡೆ

ಬೋಳೂರಿನ ವೃದ್ಧ, ಮೊಮ್ಮಗಳು, ಬಂಟ್ವಾಳದ ಯುವತಿ

ದಕ್ಷಿಣ ಕನ್ನಡದಲ್ಲಿ ಬುಧವಾರ ಮೂವರು ಕರೊನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆ ಸೇರಿದ್ದಾರೆ.

ಇತ್ತೀಚೆಗೆ ಕರೊನಾ ಸೋಂಕಿನಿಂದ ಮೃತಪಟ್ಟಿದ್ದ ಬೋಳೂರಿನ ಮಹಿಳೆ(ಪಿ-536)ಯ ಪತಿ 62 ವರ್ಷದ ವೃದ್ಧ(ಪಿ-579), ಅವರ ಮೊಮ್ಮಗಳು 11 ವರ್ಷದ ಬಾಲಕಿ(ಪಿ-674) ಹಾಗೂ ಬಂಟ್ವಾಳದಲ್ಲಿ ಮೃತರಾಗಿದ್ದ ಮಹಿಳೆಯ 16 ವರ್ಷದ ಪುತ್ರಿ(ಪಿ-676)ಆಸ್ಪತ್ರೆಯಿಂದ ಬಿಡುಗಡೆಯಾದವರು.

ಬೋಳೂರಿನ ಮಹಿಳೆ ತಮ್ಮ ಮಿದುಳಿನ ಕ್ಷಯರೋಗದ ಚಿಕಿತ್ಸೆಗೆ ಫಸ್ಟ್ ನ್ಯೂರೊ ಆಸ್ಪತ್ರೆಗೆ ತೆರಳುತ್ತಿದ್ದು, ಅಲ್ಲಿ ಆಯಾ (ಬಂಟ್ವಾಳದವರು) ಸಂಪರ್ಕದಿಂದ ಸೋಂಕು ತಗುಲಿತ್ತು. ಬಳಿಕ ಅವರ ಪತಿ, ಮಗಳು, ಅಳಿಯ ಹಾಗೂ ಮೊಮ್ಮಗಳು ಇಡೀ ಕುಟುಂಬವೇ ಸೋಂಕಿಗೊಳಗಾಗಿ ಆಸ್ಪತ್ರೆಯಲ್ಲಿತ್ತು. ಮೇ 13ರಂದು ಮಹಿಳೆ ಮೃತರಾಗಿದ್ದರು. ಪ್ರಸ್ತುತ ಮಗಳು ಹಾಗೂ ಅಳಿಯ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಜ್ಜ-ಮೊಮ್ಮಗಳಿಗೆ ಸ್ವಾಗತ: ಬೋಳೂರಿನ ಅಜ್ಜ ಮತ್ತು ಮೊಮ್ಮಗಳು ಗುಣಮುಖರಾಗಿ ಮನೆಗೆ ಬರುವುದನ್ನು ಸ್ಥಳೀಯರು ಮನಪಾ ಸದಸ್ಯ ಜಗದೀಶ್ ಶೆಟ್ಟಿ ನೇತೃತ್ವದಲ್ಲಿ ಚಪ್ಪಾಳೆಯೊಂದಿಗೆ ಸ್ವಾಗತಿಸಿ ಸಾಂತ್ವನ ಹೇಳಿ ಧೈರ್ಯ ತುಂಬಿದ್ದು, ಭಾವುಕರಾಗಿ ಅಲ್ಲಿದ್ದವರ ಕಣ್ಣಂಚಿನಲ್ಲಿ ನೀರು ಜಿನುಗುವಂತೆ ಮಾಡಿತು.

ಸೋಂಕಿನಿಂದ ಪತ್ನಿಯ ಮೃತದೇಹವನ್ನು ನೋಡಲು ವೃದ್ಧರಿಗೆ ಸಾಧ್ಯವಾಗಿರಲಿಲ್ಲ. ಪುತ್ರಿ, ಅಳಿಯ ಇನ್ನೂ ಆಸ್ಪತ್ರೆಯಲ್ಲೇ ಇದ್ದಾರೆ. ಈ ನೋವುಗಳ ನಡುವೆ ಸ್ಥಳೀಯರು ಯಾವ ರೀತಿಯಲ್ಲಿ ತಮ್ಮನ್ನು ನೋಡಬಹುದು ಎನ್ನುವ ಆತಂಕದಲ್ಲಿ ಅವರು ಮನೆಯತ್ತ ಬಂದಿದ್ದರು. ಆದರೆ ಅಲ್ಲಿ ಸಿಕ್ಕಿದ ಹೃದಯಸ್ಪರ್ಶಿ ಸ್ವಾಗತ, ಸಾಂತ್ವನದ ಮಾತುಗಳು ಅವರಲ್ಲಿ ಧೈರ್ಯ ತುಂಬಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net