ಕಾರ್ಯಕರ್ತರ ಪ್ರತಿಭಟನೆ ಎಚ್ಚರಿಕೆಯ ಕರೆಘಂಟೆ: ಬಿಜೆಪಿ ಜಿಲ್ಲಾ ವಕ್ತಾರ ಜಗದೀಶ ಶೇಣವ ಹೇಳಿಕೆ

BJP press conference
Published on

ಮಂಗಳೂರು: ಬೆಳ್ಳಾರೆಯಲ್ಲಿ ಕಾರ್ಯಕರ್ತರ ಪ್ರತಿಭಟನೆಯನ್ನು ಪಕ್ಷ ಧನಾತ್ಮಕವಾಗಿ ತೆಗೆದುಕೊಂಡಿದ್ದು, ಇದು ಎಚ್ಚರಿಕೆಯ ಕರೆಘಂಟೆಯೂ ಆಗಿದೆ. ಆದರೆ ಅಲ್ಲಿ ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವರು ನೈಜ ಕಾರ್ಯಕರ್ತರಲ್ಲ, ಬದಲಾಗಿ ಅತೃಪ್ತರು, ಅವಕಾಶ ವಂಚಿತರು, ಆಕಾಂಕ್ಷಿಗಳು ಎಂದು ಬಿಜೆಪಿ ಜಿಲ್ಲಾ ವಕ್ತಾರ ಜಗದೀಶ ಶೇಣವ ಹೇಳಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವೀಣ್ ಪಕ್ಷದ ಒಳ್ಳೆಯ ಕಾರ್ಯಕರ್ತನಾಗಿದ್ದ. ಗುಪ್ತಚರ ದಳದ ಲಿಸ್ಟ್‌ನಲ್ಲಿ ಆತನ ಹೆಸರೇ ಇರಲಿಲ್ಲ. ಇದೊಂದು ಊಹೆ ಮಾಡಲೂ ಸಾಧ್ಯವಿಲ್ಲದಂತಹ ಪ್ರಕರಣ. ಈಗಾಗಲೇ ರಾಷ್ಟ್ರ ಬಿಜೆಪಿಯೇ ಇದಕ್ಕೆ ಖೇದ ವ್ಯಕ್ತಪಡಿಸಿದೆ. ಸಂತ್ರಸ್ತ ಕುಟುಂಬಕ್ಕೆ ನ್ಯಾಯವೊದಗಿಸುವ ಕೆಲಸ ಸರ್ಕಾರ, ಪೊಲೀಸ್ ಇಲಾಖೆ ಮಾಡಲಿದೆ. ಈಗಾಗಲೇ ಪ್ರಕರಣವನ್ನು ಎನ್‌ಐಎಗೆ ವಹಿಸಲಾಗಿದ್ದು, ಶೀಘ್ರದಲ್ಲಿ ಆರೋಪಿಗಳು ಪತ್ತೆಯಾಗಲಿದ್ದಾರೆ. ಕಾರ್ಯಕರ್ತರು ಯಾರ ಮಾತಿಗೂ ಕವಿ ಕೊಡಬಾರದು. ಪಕ್ಷ, ಸಂಘಟನೆ ಇನ್ಮುಂದೆ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಲಿದೆ ಎಂದರು.

ಕಾಂಗ್ರೆಸ್ ಈ ಪ್ರಕರಣಲ್ಲಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಾಧ್ಯವಿಲ್ಲ. ಮೂಡುಬಿದಿರೆ ಪ್ರಶಾಂತ್ ಪೂಜಾರಿ ಹತ್ಯೆ ಸಂದರ್ಭ ಸ್ವತಃ ಸಚಿವರಾಗಿದ್ದ ಯು.ಟಿ. ಖಾದರ್ ಗಲಾಟೆ ಮಾಡುವವರ ಮನೆಗೆ ಹೋಗುವುದೇ ಸರ್ಕಾರ ಕೆಲಸವಲ್ಲ ಎಂದು ಹೇಳಿದ್ದರು. ಇನ್ನೊಂದೆಡೆ ಬಂಟ್ವಾಳದಲ್ಲಿ ಶರತ್ ಮಡಿವಾಳ ಹತ್ಯೆ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳೂರಿಗೆ ಸಮಾವೇಶಕ್ಕೆ ಬಂದಿದ್ದರು. ಶರತ್ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರೂ ಅವರು ಅಲ್ಲಿಗೆ ಭೇಟಿ ನೀಡಿಲ್ಲ. ವಿಮಾನದಲ್ಲಿ ಬೆಂಗಳೂರಿಗೆ ತೆರಳಿದ ಬಳಿಕ ಆತ ಮೃತಪಟ್ಟಿರುವುದಾಗಿ ಘೋಷಿಸಲಾಗಿತ್ತು. ಜಾತ್ಯತೀತವಾದಿ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರೂ, ದ್ವಂದ್ವ ನೀತಿ ಅನುಸರಿಸಿದ್ದರು. ಅಷ್ಟಕ್ಕೂ ಮಸೂದ್-ಫಾಸಿಲ್ ಹತ್ಯೆ ಪ್ರಕರಣ ಹಿಂದು ಮುಸ್ಲಿಂ ದ್ವೇಷದ ಪ್ರಕರಣವಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಕ್ತಾರರಾದ ರವಿಶಂಕರ ಮಿಜಾರು, ರಾಧಾಕೃಷ್ಣ, ಜಿಲ್ಲಾ ಮಾಧ್ಯಮ ಪ್ರಮುಖ್ ಸಂದೇಶ್ ಶೆಟ್ಟಿ, ಸಂಯೋಜಕ ರಣದೀಪ್ ಕಾಂಚನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net