ಇಂದೂ ದ.ಕ ಜಿಲ್ಲಾ ಬಂದ್

kota srinivas pujari
Published on

ಮಂಗಳೂರು: ಕರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಜಿಲ್ಲಾದ್ಯಂತ ಸಂಪೂರ್ಣ ಬಂದ್ ಮಾ.30ರಂದೂ ಮುಂದುವರಿಯಲಿದೆ.

ಆದರೆ ಮಾ.31ರಂದು ಬೆಳಗ್ಗೆ 6ರಿಂದ ಮಧ್ಯಾಹ್ನ 3 ಗಂಟೆಯವರೆಗೆ ದಿನಸಿ ಅಂಗಡಿಗಳಿಗೆ ತೆರೆಯಲು ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಾರ್ವಜನಿಕರು ಎರಡು ದಿನದ ಕಡ್ಡಾಯ ಬಂದ್‌ಗೆ ಉತ್ತಮ ಬೆಂಬಲ ನೀಡಿದ್ದಾರೆ, ಅದರಿಂದಾಗಿಯೂ ಕೊವಿಡ್ ಪ್ರಸಾರಕ್ಕೂ ನಿಯಂತ್ರಣ ಬಿದ್ದಿದ್ದು ಕಳೆದೆರಡು ದಿನಗಳಿಂದ ಯಾವುದೇ ಪಾಸಿಟಿವ್ ಪ್ರಕರಣ ಕಂಡುಬಂದಿಲ್ಲ. ಈ ರೀತಿ ಬಂದ್ ಮುಂದುವರಿಸುವುದು ಬಹಳ ಕಷ್ಟದ ನಿರ್ಧಾರ, ಆದರೆ ಕರೊನಾ ನಿಯಂತ್ರಣ ಮಾಡಲೇಬೇಕು ಎಂಬ ಕಾರಣಕ್ಕೆ ನಿರ್ವಾಹವಿಲ್ಲದೆ ಈ ಕ್ರಮ. ಜನಪ್ರತಿನಿಧಿಗಳು ಸೇರಿ ಚರ್ಚೆ ನಡೆಸಿ, 30ರಂದೂ ಇಡೀ ದಿನ ಬಂದ್ ನಡೆಸಲು ತೀರ್ಮಾನಿಸಿದ್ದೇವೆ ಎಂದರು.

ಮಂಗಳವಾರ ರಿಲೀಫ್
ಲಾಕ್‌ಡೌನ್ ಅವಧಿಯಲ್ಲಿ ಪ್ರತೀ ಮೂರು ದಿನಗಳಿಗೊಮ್ಮೆ ಪರಿಸ್ಥಿತಿ ಅವಲೋಕಿಸಿ, ದಿನಸಿ ಖರೀದಿಗೆ ಅವಕಾಶ ಮಾಡಿಕೊಡಲು ತೀರ್ಮಾನಿಸಲಾಗಿದೆ ಎಂದು ಸಚಿವರು ಹೇಳಿದರು. ಮಾ.31ರಂದು ಬೆಳಗ್ಗೆ 6ರಿಂದ ಸಂಜೆ 3 ಗಂಟೆವರೆಗೆ ದಿನಸಿ ಅಂಗಡಿಗಳನ್ನು ತೆರೆಯಬಹುದು. ಆದರೆ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ದಿನಸಿ ಸಾಮಾಗ್ರಿ ಖರೀದಿಸಬೇಕು, ಅಂಗಡಿಯವರೂ ಇದಕ್ಕೆ ಒತ್ತು ನೀಡುವುದು ಕಡ್ಡಾಯ, ಒಂದು ಕುಟುಂಬದಿಂದ ಒಬ್ಬರೇ ಬಂದು ಖರೀದಿ ಮಾಡಬೇಕು ಎಂದ ಕೋಟ, ಯಾವುದೇ ಕಾರಣಕ್ಕೂ ಅಂಗಡಿಯವರು ಬೆಲೆಯನ್ನು ಒಂದು ರೂಪಾಯಿ ಕೂಡಾ ಏರಿಸದೆ ನೀಡುವತ್ತ ಗಮನ ಹರಿಸಬೇಕು, ಅಧಿಕ ದರ ವಸೂಲಿ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಏ.2ರಿಂದ ರೇಷನ್ ವಿತರಣೆ
ಆಹಾರ ಇಲಾಖೆಯಿಂದ ಏಪ್ರಿಲ್ ಹಾಗೂ ಮೇ ಎರಡು ತಿಂಗಳ ಪಡಿತರವನ್ನು ಬಿಪಿಎಲ್ ಕಾರ್ಡ್‌ನವರು ಉಚಿತವಾಗಿ ಪಡೆದುಕೊಳ್ಳಬಹುದು, ಇದಕ್ಕೆ ಏಪ್ರಿಲ್ 2ರಿಂದ ಅವಕಾಶ ನೀಡಲಾಗಿದೆ. ಬೆಳಗ್ಗೆ 7ರಿಂದ ರಾತ್ರಿ 8ರ ಮಧ್ಯೆ ಮಧ್ಯಾಹ್ನ ಊಟದ ಅವಧಿ ಬಿಟ್ಟು ಜನರು ಬಂದು ಪಡಿತರ ಪಡೆದುಕೊಳ್ಳಬಹುದು. ಮೊಬೈಲ್‌ಗೆ ಬರುವ ಒಟಿಪಿ ಆಧಾರದಲ್ಲಿ ಪಡಿತರ ನೀಡಲಾಗುತ್ತದೆ. ಇಲ್ಲೂ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ವೈರಸ್ ಹರಡದಂತೆ ಎಚ್ಚರವಹಿಸಬೇಕು. ಪಡಿತರ ವಿತರಣೆ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿದ್ದು ಜನರಿಗೆ ತೊಂದರೆ ನೀಡದಂತೆ ಸೂಚಿಸಲಾಗಿದೆ ಎಂದು ಕೋಟ ವಿವರಿಸಿದರು.

ನಿರಾಶ್ರಿತರಿಗೆ ಸರ್ಕಾರದಿಂದಲೇ ಊಟ
ಸ್ವಯಂಸೇವಾ ಸಂಘಟನೆಗಳು ನಿರಾಶ್ರಿತರು, ಕಾರ್ಮಿಕರಿಗೆ ಊಟೋಪಚಾರದ ವ್ಯವಸ್ಥೆ ಮಾಡಿ ಉತ್ತಮ ಕೆಲಸ ಮಾಡುತ್ತಿವೆ, ಆದರೆ ಅದರಿಂದ ಕರೊನಾ ಸೋಂಕು ಹರಡುವ ಭೀತಿ ಇದೆ, ಹಾಗಾಗಿ ಯಾವುದೇ ಸಂಘ ಸಂಸ್ಥೆಗಳು ಊಟ ನೀಡುವುದನ್ನು ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ ಸರ್ಕಾರದಿಂದಲೇ ಊಟ ತಿಂಡಿ ವಿತರಿಸಲಾಗುವುದು ಎಂದು ಕೋಟ ತಿಳಿಸಿದರು. ಇಂದಿರಾ ಕ್ಯಾಂಟೀನ್‌ಗಳಲ್ಲಿ ಹಾಗೂ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಎ ಗ್ರೇಡ್ ದೇವಾಲಯಗಳಲ್ಲಿ ಸೋಮವಾರದಿಂದಲೇ ಊಟ ಪೂರೈಸಲಾಗುವುದು. ನಿರಾಶ್ರಿತರು, ಭಿಕ್ಷುಕರು, ವಲಸೆ ಕಾರ್ಮಿಕರನ್ನು ಶಾಲೆ, ಸಭಾಂಗಣಗಳಲ್ಲಿ ಇರುವಂತೆ ಕಾರ್ಮಿಕ ಇಲಾಖೆಯಿಂದ ವ್ಯವಸ್ಥೆ ಮಾಡಲಾಗಿದೆ. ಅದಾಗ್ಯೂ ಯಾರಿಗಾದರೂ ಊಟ ಸಿಗದಾಗಿದ್ದರೆ ಅವರು ಕದ್ರಿ ದೇವಸ್ಥಾನಕ್ಕೆ ಬಂದು ಮೂರು ಹೊತ್ತು ಊಟ, ತಿಂಡಿ ಸ್ವೀಕರಿಸಬಹುದು ಎಂದರು.

ಗಡಿ ನಿರ್ಬಂಧ ಮುಂದುವರಿಕೆ
ತಲಪಾಡಿ ಹಾಗೂ ಇತರ ಕೇರಳದ ಗಡಿಪ್ರದೇಶಗಳಲ್ಲಿ ಕೇರಳದಿಂದ ಬರಲು ಸುರಕ್ಷತೆಯ ಭಾಗವಾಗಿ ತಡೆಹಿಡಿಯಲಾಗಿದೆ, ಅದನ್ನು ಮುಂದುವರಿಸಲಾಗುತ್ತದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಮುಖ್ಯಮಂತ್ರಿಯವರ ಜೊತೆ ಮತ್ತೆ ಮಾತುಕತೆ ನಡೆಸಿದ್ದೇವೆ, ಕಾಸರಗೋಡಿನಲ್ಲಿ ಅತ್ಯಧಿಕ ಕರೊನಾ ಕೇಸ್‌ಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಈ ಕ್ರಮ ವಹಿಸಲೇಬೇಕಾಗಿದೆ. ಮಾ.24ರಿಂದ ನನ್ನ ಕಚೇರಿಯಲ್ಲಿ ಹಾಗೂ ಎಲ್ಲಾ ಶಾಸಕರ ಕಚೇರಿಗಳಲ್ಲಿ ವಾರ್ ರೂಂ ತೆರೆಯಲಾಗಿದೆ, ಇದುವರೆಗೆ ಇದರಲ್ಲಿ 3200 ಊಟ, 1120ರಷ್ಟು ಅಗತ್ಯ ವಸ್ತುಗಳ ಕಿಟ್, 110 ಸಂಖ್ಯೆಯ ಆಂಬುಲೆನ್ಸ್ ನೆರವು ನೀಡಲಾಗಿದೆ. ಯಾರಿಗಾದರೂ ಯಾವುದೇ ನೆರವು ಬೇಕಾದರೆ 0824-2448888 ಸಂಪರ್ಕಿಸಬಹುದು ಎಂದರು.

3 ದಿನಗಳಿಂದ ದ.ಕ. ನಿರಾಳ
ದ.ಕ.ಜಿಲ್ಲೆಯಲ್ಲಿ ಸತತ ಮೂರು ದಿನಗಳಿಂದ ಯಾವುದೇ ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ.
ಭಾನುವಾರದ ಮಾಹಿತಿಯಂತೆ ಇದುವರೆಗೆ ಒಟ್ಟು 38,231 ಮಂದಿಯನ್ನು ತಪಾಸಣೆಗೊಳಪಡಿಸಿದ್ದು, 5875 ಮಂದಿ ಮನೆಯಲ್ಲಿ ಕ್ವಾರಂಟೈನ್ ಆಗಿದ್ದಾರೆ. ವೆನ್ಲಾಕ್‌ಗೆ ಭಾನುವಾರ ಯಾರೂ ಕ್ವಾರಂಟೈನ್ ಆಗಿಲ್ಲ. ಇಎಸ್‌ಐ ಆಸ್ಪತ್ರೆಯಲ್ಲಿ 29 ಮಂದಿ ಇದ್ದು, ಈಗಾಗಲೇ 169 ಮಂದಿ 28 ದಿನಗಳ ಕ್ವಾರಂಟೈನ್ ಪೂರ್ತಿಗೊಳಿಸಿದ್ದಾರೆ. ಭಾನುವಾರ 14 ಗಂಟಲು ಕೋಶ ಮಾದರಿಯನ್ನು ಟೆಸ್ಟ್‌ಗೆ ಕಳುಹಿಸಲಾಗಿದೆ. ಬಂದಿರುವ ವರದಿಗಳಲ್ಲಿ 5 ನೆಗೆಟಿವ್ ಆಗಿದ್ದು ಉಳಿದ ವರದಿಗಳನ್ನು ನಿರೀಕ್ಷಿಸಲಾಗಿದೆ. 11 ರೋಗಿಗಳ ಮೇಲೆ ನಿಗಾ ವಹಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net