

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಮತ್ತೆ ಕರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ.
279 ಮಂದಿಗೆ ಸೋಂಕು ದೃಢಪಟ್ಟಿದೆ. ಕರೊನಾ ಕಾರಣದಿಂದ 9 ಮಂದಿ ಜೀವ ಕಳೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಕರೊನಾ ಸಾವಿನ ಪ್ರಕರಣ 286ಕ್ಕೆ ಏರಿಕೆಯಾಗಿದೆ. ಮಂಗಳೂರು ತಾಲೂಕಿನ 163, ಬಂಟ್ವಾಳದ 49, ಪುತ್ತೂರು 25, ಬೆಳ್ತಂಗಡಿಯ 15, ಸುಳ್ಯದ 10 ಹಾಗೂ ಹೊರ ಜಿಲ್ಲೆಯ 17 ಮಂದಿಗೆ ಕರೊನಾ ಬಾಧಿಸಿದೆ. ಪಾಸಿಟಿವ್ ಪ್ರಕರಣಗಳಲ್ಲಿ 138 ಮಂದಿಗೆ ಸೋಂಕಿನ ವಿವಿಧ ಲಕ್ಷಣಗಳು ಕಂಡುಬಂದಿದ್ದರೆ 141 ಮಂದಿ ಲಕ್ಷಣರಹಿತರು. 114 ಮಂದಿಗೆ ಇನ್‌ಪ್ಲೂಯೆಂಜಾ ಮಾದರಿ ಲಕ್ಷಣಗಳಿದ್ದರೆ 18 ಮಂದಿಗೆ ತೀವ್ರ ಉಸಿರಾಟ ತೊಂದರೆಯಿತ್ತು. ನೇರ ಸಂಪರ್ಕದಿಂದ 65 ಮಂದಿಗೆ ಸೋಂಕು ತಗಲಿದೆ. 82 ಮಂದಿಯ ಸೋಂಕಿನ ಮೂಲ ಪತ್ತೆಯಾಗಿಲ್ಲ.
ಜಿಲ್ಲೆಯಲ್ಲಿ 56 ಮಂದಿ ವಿವಿಧ ಆಸ್ಪತ್ರೆಗಳಿಂದ, 111 ಮಂದಿ ಹೋಮ್ ಐಸೊಲೇಶನ್‌ನಿಂದ ಹಾಗೂ 6 ಮಂದಿ ಕೋವಿಡ್ ಕೇರ್ ಸೆಂಟರ್‌ಗಳಿಂದ ಸೇರಿದಂತೆ 173 ಮಂದಿ ಕೋವಿಡ್‌ನಿಂದ ಮುಕ್ತರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 73,674 ಟೆಸ್ಟ್ ನಡೆಸಿದ್ದು, ಪಾಸಿಟಿವ್ ಪ್ರಕರಣಗಳು 9,301ಕ್ಕೇರಿವೆ. 2188 ಸಕ್ರಿಯ ಪ್ರಕರಣಗಳಿದ್ದು ಡಿಸ್ಚಾರ್ಜ್ ಆದವರ ಸಂಖ್ಯೆ 6827ಕ್ಕೇರಿದೆ.
ಉಡುಪಿ ಜಿಲ್ಲೆಯಲ್ಲಿ ಮಂಗಳವಾರ 421 ಮಂದಿಗೆ ಕರೊನಾ ಸೋಂಕು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 8659ಕ್ಕೆ ಏರಿಕೆಯಾಗಿದೆ. ಹೋಂ ಮತ್ತು ಆಸ್ಪತ್ರೆ ಐಸೋಲೇಶನ್‌ನಿಂದ 321 ಮಂದಿ ಗುಣವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ 5951 ಮಂದಿ ಸೋಂಕಿನಿಂದ ಸಂಪೂರ್ಣ ಮುಕ್ತರಾಗಿದ್ದಾರೆ. ಮಂಗಳವಾರ 1837 ಮಂದಿಯ ಗಂಟಲ ದ್ರವ ಮಾದರಿಯನ್ನು ಸಂಗ್ರಹಿಸಲಾಗಿದೆ. ಇನ್ನೂ 1086 ಮಂದಿಯ ವರದಿ ಬಾಕಿ ಇದೆ. 2637 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಕಾಸರಗೋಡಿನ 42 ಮಂದಿಗೆ ಸೋಂಕು
ಕಾಸರಗೋಡು: ಜಿಲ್ಲೆಯ 42 ಮಂದಿ ಸಹಿತ ಕೇರಳದಲ್ಲಿ ಮಂಗಳವಾರ 1,758 ಮಂದಿಯಲ್ಲಿ ಕೋವಿಡ್-19 ಕಾಣಿಸಿಕೊಂಡಿದೆ.
ಇವರಲ್ಲಿ 39 ಮಂದಿ ವಿದೇಶದಿಂದ, 42 ಮಂದಿ ಇತರ ರಾಜ್ಯಗಳಿಂದ ಆಗಮಿಸಿದವರಾಗಿದ್ದಾರೆ. 1,641 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದ್ದು, 81 ಮಂದಿಯ ಸೋಂಕು ಮೂಲ ಪತ್ತೆ ಸಾಧ್ಯವಾಗಿಲ್ಲ.
ಇಂದಿನಿಂದ ತಲಪಾಡಿಯಲ್ಲಿ ಪಾಸ್ ವ್ಯವಸ್ಥೆ
ಕುಂಬಳೆ: ಕರ್ನಾಟಕಕ್ಕೆ ದಿನನಿತ್ಯ ತೆರಳುವವರಿಗಾಗಿ ತಲಪಾಡಿಯಲ್ಲಿ ಆ್ಯಂಟಿಜೆನ್ ತಪಾಸಣೆ ನಡೆಸಿ ಪಾಸ್ ಮಂಜೂರು ಮಾಡುವ ಪ್ರಕ್ರಿಯೆಯನ್ನು ಕೇರಳ ಸರ್ಕಾರ ಆ.19ರಿಂದ ಆರಂಭಿಸಲಿದೆ ಎಂದು ಕಂದಾಯ ಇಲಾಖೆ ಸಚಿವ ಇ.ಚಂದ್ರಶೇಖರನ್ ತಿಳಿಸಿದ್ದಾರೆ.
ಕಾಸರಗೋಡು ಜಿಲ್ಲೆಯ ಇತರ ಗಡಿ ಪ್ರದೇಶಗಳಲ್ಲೂ ಈ ವ್ಯವಸ್ಥೆ ಇರಲಿದೆ. ಕೇರಳ-ಕರ್ನಾಟಕ ಗಡಿ ಪ್ರದೇಶ ತಲಪಾಡಿಯಿಂದ ಉದ್ಯೋಗಕ್ಕಾಗಿ ಕರ್ನಾಟಕಕ್ಕೆ ನಿತ್ಯ ಪ್ರಯಾಣಿಸುವವರು ಪಾಸು ಪಡೆಯಲು ಕೋವಿಡ್ ಪರೀಕ್ಷೆ ಮಾಡಿ ನೆಗೆಟಿವ್ ಸರ್ಟಿಫಿಕೇಟ್ ಸಲ್ಲಿಸಬೇಕು.