ದ.ಕ.ದಲ್ಲಿ 8 ಮಂದಿಗೆ ಪಾಸಿಟಿವ್

Corona Test
Published on

ಮಂಗಳೂರು: ದ.ಕ ಜಿಲ್ಲೆಯಲ್ಲಿ ಶುಕ್ರವಾರ ಎಂಟು ಮಂದಿಗೆ ಕರೊನಾ ಸೋಂಕು ದೃಢಗೊಂಡಿದೆ.

ಮುಂಬೈನಿಂದ ಬಂದು ಉಡುಪಿಯಲ್ಲಿ ಕ್ವಾರಂಟೈನ್‌ನ ಅವಧಿ ಮುಗಿಸಿ ಜಿಲ್ಲೆಗೆ ಬಂದ 7 ಪುರುಷರು ಹಾಗೂ ಬಂಟ್ವಾಳದ 60 ವರ್ಷದ ಮಹಿಳೆ ಸೋಂಕಿತರು. ಮಹಿಳೆಗೆಗೆ ಯಾರ ಸಂಪರ್ಕದಿಂದ ಬಂದಿದೆ ಎಂದು ಪತ್ತೆಯಾಗಬೇಕಿದೆ. ಎಲ್ಲರನ್ನೂ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶುಕ್ರವಾರ 12 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 17 ವರ್ಷದ ಯುವಕ ಸೇರಿ 8 ಪುರುಷರು ಹಾಗೂ 8 ಮಹಿಳೆಯರು ಇದರಲ್ಲಿದ್ದು, ಎಲ್ಲರೂ 60 ವರ್ಷದೊಳಗಿನವರು. ಸದ್ಯ 56 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲ ರೋಗಿಗಳ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ. ಶುಕ್ರವಾರ 92 ಮಂದಿಯ ವರದಿ ನೆಗೆಟಿವ್ ಬಂದಿದೆ. 84 ಮಂದಿಯ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, 50 ಮಂದಿಯ ವರದಿ ಬರಲು ಬಾಕಿ ಇದೆ.

ಬಂದರಿನಲ್ಲೂ ಸೋಂಕು ಪತ್ತೆ: ನವಮಂಗಳೂರು ಬಂದರಿನಲ್ಲಿರುವ ಖಾಸಗಿ ಟಗ್ ‘ಓಶಿಯನ್ ಐಕಾನ್’ನ ನೌಕರನಿಗೆ ಕರೊನಾ ಪಾಸಿಟಿವ್ ಬಂದಿದ್ದು, ಎಲ್ಲ ಸಿಬ್ಬಂದಿಯನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲು ಎನ್‌ಎಂಪಿಟಿ ಚೇರ್ಮನ್ ವೆಂಕಟರಮಣ ಅಕ್ಕರಾಜು ಸೂಚಿಸಿದ್ದಾರೆ. ಪಾಸಿಟಿವ್ ಆಗಿರುವ ಸಿಬ್ಬಂದಿಯ ಸಂಪರ್ಕಕ್ಕೆ ಬಂದಿರುವ ಎಲ್ಲ ಎನ್‌ಎಂಪಿಟಿ ಸಿಬ್ಬಂದಿ ಹಾಗೂ ಅಧಿಕಾರಿಗಳು, ಟಗ್‌ಗೆ ಸಂಬಂಧಿಸಿದ ಗುತ್ತಿಗೆದಾರರು, ಸಂಪರ್ಕಕ್ಕೆ ಬಂದಿರುವ ವಾಣಿಜ್ಯ ಹಡಗುಗಳ ಸಿಬ್ಬಂದಿ ಕೋವಿಡ್ ಟೆಸ್ಟ್‌ಗೆ ಒಳಗಾಗುವಂತೆ ತಿಳಿಸಿದ್ದಾರೆ. ಜಿಲ್ಲಾ ಆರೋಗ್ಯ ಇಲಾಖೆಗೂ ಮಾಹಿತಿ ನೀಡಿದ್ದು, ಟಗ್‌ನ ಮಾಲೀಕರು ಕರೊನಾ ಸುರಕ್ಷತಾ ಕ್ರಮಗಳನ್ನು ಅನುಸರಿಸಿದ್ದಾರೆಯೇ ಎಂದು ತನಿಖೆ ನಡೆಸುವಂತೆ ಕೋರಿದ್ದಾರೆ. ಶನಿವಾರ ಜಿಲ್ಲಾಡಳಿತ ಈ ಪ್ರಕರಣವನ್ನು ದೃಢಪಡಿಸುವ ಸಾಧ್ಯತೆಯಿದೆ.

ಮಹಾರಾಷ್ಟ್ರದಿಂದ 400ಕ್ಕೂ ಅಧಿಕ ಮಂದಿ ಆಗಮನ

ಉಡುಪಿ/ಮಂಗಳೂರು: ಮುಂಬೈ-ತಿರುವನಂತಪುರ ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಶುಕ್ರವಾರ ಮುಂಬೈಯಿಂದ 60 ಮಂದಿ ಮಂಗಳೂರಿಗೆ ಆಗಮಿಸಿದ್ದಾರೆ. 20 ಮಂದಿ ಮಂಗಳೂರಿನಿಂದ ರೈಲು ಏರಿದ್ದಾರೆ.

ಕರೊನಾ ಹೆಚ್ಚಳದ ತೀವ್ರ ಆತಂಕದ ನಡುವೆಯೂ ಮಹಾರಾಷ್ಟ್ರದಿಂದ ಮತ್ತೆ 367 ಮಂದಿ ಜಿಲ್ಲೆಗೆ ಆಗಮಿಸಿದ್ದಾರೆ, ಸ್ವಂತ ವಾಹನಗಳಲ್ಲಿ ಜಿಲ್ಲೆಗೆ ಆಗಮಿಸಿದ ಅವರನ್ನು ವಿವಿಧೆಡೆ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಇದರಲ್ಲಿ ಗರ್ಭಿಣಿ, ಮಕ್ಕಳು, ಹಿರಿಯ ನಾಗರಿಕರಿಗೆ ಹೋಂ ಕ್ವಾರಂಟೈನ್ ಮಾಡಲಾಗಿದೆ. ಗೋವಾ, ಪಾಂಡಿಚೇರಿ, ಕೇರಳದಿಂದ ತಲಾ ಒಬ್ಬರಂತೆ ಒಟ್ಟು 370 ಮಂದಿ ಜಿಲ್ಲೆಗೆ ಶುಕ್ರವಾರ ಆಗಮಿಸಿದ್ದಾರೆ.

ಕಾಸರಗೋಡಲ್ಲಿ ಒಬ್ಬರಿಗೆ ಕೋವಿಡ್

ಕಾಸರಗೋಡು: ಜಿಲ್ಲೆಯಲ್ಲಿ ಶುಕ್ರವಾರ ಒಬ್ಬರಲ್ಲಿ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ಕೇರಳದಲ್ಲಿ 111 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕೋವಿಡ್ ಬಾಧಿತರ ಸಂಖ್ಯೆ ದಿನವೊಂದರಲ್ಲಿ ನೂರರ ಸಂಖ್ಯೆ ದಾಟಿದೆ. ಇವರಲ್ಲಿ 50 ಮಂದಿ ವಿದೇಶದಿಂದ, 48 ಮಂದಿ ಇತರ ರಾಜ್ಯಗಳಿಂದ, ಹತ್ತು ಮಂದಿ ಸಂಪರ್ಕದಿಂದ ಹಾಗೂ ಮೂವರು ಆರೋಗ್ಯ ಇಲಾಖೆ ಸಿಬ್ಬಂದಿಗೆ ಸೋಂಕು ತಗುಲಿದೆ. ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 7 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net