ದ.ಕ ಜಿಲ್ಲೆಯಲ್ಲಿ 7 ಸಾವು

Corona
Published on

ಮಂಗಳೂರು: ದ.ಕ ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳು ಮತ್ತೆ 200ರ ಗಡಿ ದಾಟಿದ್ದು, ಬುಧವಾರ 208 ಪ್ರಕರಣಗಳು ಹಾಗೂ 7 ಸಾವು ವರದಿಯಾಗಿದೆ.

ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದ ಮಂಗಳೂರಿನ 73 ವರ್ಷದ ವೃದ್ಧ, 69 ವರ್ಷದ ಮಹಿಳೆ, 39ರ ಪುರುಷ, ಪಡುಬಿದ್ರಿ ನಿವಾಸಿ 52ರ ಪುರುಷ, ಬಂಟ್ವಾಳದ 62ರ ಪುರುಷ, ಧಾರವಾಡದ 66ರ ಪುರುಷ, ಕಾರವಾರದ 66ರ ಪುರುಷ ಜುಲೈ 27-28ರಂದು ಮೃತಪಟ್ಟಿದ್ದು, ಎಲ್ಲರಿಗೂ ಕೋವಿಡ್ ಖಚಿತವಾಗಿದೆ.

ಪ್ರಾಥಮಿಕ ಸಂಪರ್ಕದಿಂದ 65, ಐಎಲ್‌ಐ ಹೊಂದಿದ 73, ತೀವ್ರ ಉಸಿರಾಟ ತೊಂದರೆಯಿದ್ದ 12 ಮಂದಿ ಹಾಗೂ ಸೋಂಕಿನ ಮೂಲ ಇನ್ನೂ ದೃಢಪಡದಿರುವ 58 ಮಂದಿಗೆ ಕರೊನಾ ದೃಢಪಟ್ಟಿದೆ. ಕಡಬ ತಾಲೂಕಿನ ಬೆಳಂದೂರು ರೈಲ್ವೆಗೇಟ್ ಬಳಿಯ ಒಂದೇ ಮನೆಯ 6 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇವರಲ್ಲಿ 65 ವರ್ಷದ ವೃದ್ಧೆ, 6 ವರ್ಷದ ಬಾಲಕ ಸೇರಿದ್ದಾರೆ.

ಜಿಲ್ಲೆಯಲ್ಲಿ ಪಾಸಿಟಿವ್ ಸಂಖ್ಯೆ 5311 ತಲುಪಿದ್ದು, 2715 ಸಕ್ರಿಯ ಪ್ರಕರಣಗಳಿವೆ. 118 ಮಂದಿ ಕರೊನಾ ಮುಕ್ತರಾಗಿ ಬುಧವಾರ ಮನೆಗೆ ಮರಳಿದ್ದು, ಡಿಸ್ಚಾರ್ಜ್ ಆದವರ ಸಂಖ್ಯೆ 2456ಕ್ಕೇರಿದೆ. ಇದುವರೆಗೆ ಮೃತಪಟ್ಟವರ ಸಂಖ್ಯೆ 142ಕ್ಕೆ ತಲುಪಿದೆ.

ಕಾರ್ಪೊರೇಟರ್‌ಗೆ ಪಾಸಿಟಿವ್

ಸುರತ್ಕಲ್: ಮಂಗಳೂರು ಮಹಾನಗರ ಪಾಲಿಕೆ ಕಾರ್ಪೊರೇಟರ್ ಓರ್ವರಿಗೆ ಕರೊನಾ ಪಾಸಿಟಿವ್ ದೃಢಪಟ್ಟಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಸರಗೋಡಿನ 49 ಮಂದಿಗೆ ಸೋಂಕು

ಕಾಸರಗೋಡು: ಜಿಲ್ಲೆಯಲ್ಲಿ 49 ಮಂದಿ ಒಳಗೊಂಡಂತೆ ಕೇರಳದಲ್ಲಿ 903 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇವರಲ್ಲಿ 90 ಮಂದಿ ವಿದೇಶದಿಂದ, 71 ಮಂದಿ ಇತರ ರಾಜ್ಯಗಳಿಂದ ಆಗಮಿಸಿದವರು. 706 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net