

ಮಂಗಳೂರು/ಉಡುಪಿ: ಕರಾವಳಿಯಲ್ಲಿ ಶನಿವಾರ ಒಂದೇ ದಿನ 27 ಕರೊನಾ ಪಾಸಿಟಿವ್ ಪ್ರಕಣಗಳು ಕಂಡುಬಂದಿವೆ.
ದ.ಕ.ಜಿಲ್ಲೆಯಲ್ಲಿ 14, ಉಡುಪಿಯಲ್ಲಿ 13 ಮಂದಿ ಸೋಂಕಿಗೊಳಗಾಗಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಮುಂಬೈ ಲಿಂಕ್‌ನಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಮುಂದುವರಿದಿದೆ. ಶನಿವಾರ ದಾಖಲಾಗಿರುವ ಒಟ್ಟು 14ರಲ್ಲಿ 13 ಪ್ರಕರಣಗಳೂ ಮುಂಬೈನಿಂದ ಹಿಂದಿರುಗಿರುವವರದ್ದು. ಇದರಲ್ಲಿ ಎರಡು ಕುಟುಂಬದ ಐವರಿಗೆ ಕರೊನಾ ಬಾಧಿಸಿದ್ದೂ ಸೇರಿದೆ.
ಮೇ 21ರಂದು ಆಗಮಿಸಿದ್ದ ಒಂದು ಕುಟುಂಬದ ಮೂವರು ಗಂಡಸರು, ಮೇ 18ರಂದು ಆಗಮಿಸಿದ ಇನ್ನೊಂದು ಕುಟುಂಬದ ಓರ್ವ ಮಹಿಳೆ ಹಾಗೂ ಓರ್ವ ಬಾಲಕಿಗೆ ಪಾಸಿಟಿವ್ ಕಂಡುಬಂದಿದೆ.
ಪಿಲಾರದ ಬಾಲಕನಿಗೂ ಸೋಂಕು: ಈ ಮೊದಲು ಫಸ್ಟ್ ನ್ಯುರೋ ಆಸ್ಪತ್ರೆಯ ಪ್ರಥಮ ಸಂಪರ್ಕದಿಂದ ಸೋಂಕಿಗೊಳಗಾಗಿ ಕೆಲ ದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿದ್ದ ಪಿ-947 ರೋಗಿಯ ಜೊತೆ ದ್ವಿತೀಯ ಸಂಪರ್ಕವನ್ನು ಹೊಂದಿದ್ದ 17ರ ಹರೆಯದ ಬಾಲಕನಿಗೂ ಸೋಂಕು ತಗಲಿದೆ. ಈತ ಮಹಿಳೆಯ ನೆರೆಮನೆಯವರು ಎನ್ನಲಾಗಿದೆ.
ಐವರು ಬಿಡುಗಡೆ: ಮೇ 17, 18, 21ರಂದು ಕೋವಿಡ್ ದೃಢಪಟ್ಟು ಆಸ್ಪತ್ರೆಗೆ ದಾಖಲಾಗಿದ್ದ ಒಟ್ಟು ಐದು ಮಂದಿ ಗುಣಹೊಂದಿ ಬಿಡುಗಡೆಯಾಗಿದ್ದಾರೆ. 31, 33ರ ಗಂಡಸು, 55ರ ಮಹಿಳೆ, 35ರ ಗಂಡಸು, 29ರ ಯುವಕ ಬಿಡುಗಡೆಯಾದವರು. ಪ್ರಸ್ತುತ 68 ಮಂದಿ ಕೋವಿಡ್ ಪಾಸಿಟಿವ್ ರೋಗಿಗಳು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು 66 ಮಂದಿಯ ಸ್ಥಿತಿ ತೃಪ್ತಿಕರ. 76 ವರ್ಷದ ಗಂಡಸು(ಪಿ-1008) ಮಧುಮೇಹ, ಅಧಿಕ ಬಿಪಿ, ಹೃದಯ ತೊಂದರೆಯಿಂದ ಬಳಲುತ್ತಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 46 ವರ್ಷದ ಮಹಿಳೆ(ಪಿ.1437) ಮಧುಮೇಹ, ಮೂತ್ರಕೋಶದ ಸೋಂಕು, ಉಸಿರಾಟ ತೊಂದರೆಯಿಂದ ಬಳಲುತ್ತಿದ್ದು ಐಸಿಯುನ ಲ್ಲಿದ್ದಾರೆ.
ಬೋಳಿಯಾರ್, ಪಿಲಾರ್ ನಿವಾಸಿಗಳಿಗೆ ಸೋಂಕು
ಉಳ್ಳಾಲ: ಮಹಾರಾಷ್ಟ್ರದಿಂದ ಬಂದಿದ್ದ ಬೋಳಿಯಾರ್‌ನ ವ್ಯಕ್ತಿ ಸಹಿತ ಇಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಬೋಳಿಯಾರ್ ಗ್ರಾಮ ನಿವಾಸಿ 61 ವರ್ಷದ ವ್ಯಕ್ತಿ ಕಳೆದ ವಾರ ಮಹಾರಾಷ್ಟ್ರದಿಂದ ಬಂದಿದ್ದರು. ಬಳಿಕ ಅವರನ್ನು ದೇರಳಕಟ್ಟೆಯಲ್ಲಿ ಸರ್ಕಾರಿ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಶುಕ್ರವಾರ ರಾತ್ರಿ ಅವರು ಮನೆಗೆ ಬಂದಿದ್ದು, ಶನಿವಾರ ವರದಿಯಲ್ಲಿ ಪಾಸಿಟಿವ್ ಬಂದ ಕಾರಣ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ವ್ಯಕ್ತಿಯ ಮನೆಗೆ ತೆರಳಿ ಆಸ್ಪತ್ರೆಗೆ ಬರುವಂತೆ ಸೂಚಿಸಿದರು.
ಈ ಸಂದರ್ಭ ಅವರು ನಿರಾಕರಿಸಿದ್ದು, ಮಾಹಿತಿ ಪಡೆದ ಬೋಳಿಯಾರ್ ಗ್ರಾಪಂ ಅಧ್ಯಕ್ಷ ಸತೀಶ್ ಆಚಾರ್ಯ, ಸದಸ್ಯ ರಿಯಾಝ್ ಹಾಗೂ ಪಿಡಿಒ ಕೃಷ್ಣಮೂರ್ತಿ ಸ್ಥಳಕ್ಕೆ ಧಾವಿಸಿ ಮನವೊಲಿಸುವಲ್ಲಿ ಸಫಲರಾದರು. ಬಳಿಕ ಅವರ ಮನೆಯ ಪರಿಸರ ಸೀಲ್ ಡೌನ್‌ಗೆ ಸಿದ್ಧತೆ ನಡೆದಿದೆ.
ಎರಡನೇ ಬಾರಿ ಸೀಲ್‌ಡೌನ್
ಪಿಲಾರ್ ದಾರಂದ ಬಾಗಿಲು ಎಂಬಲ್ಲಿ ಬಾಲಕನೋರ್ವನಿಗೂ ಕರೊನಾ ಪಾಸಿಟಿವ್ ಬಂದಿದೆ. ಈ ಪ್ರದೇಶದಲ್ಲಿ ಈ ಹಿಂದೆ ಮಹಿಳೆಯೊಬ್ಬರಿಗೂ ಪಾಸಿಟಿವ್ ಬಂದಿದ್ದು, ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮೂರು ದಿನಗಳ ಹಿಂದಷ್ಟೇ ಮನೆಗೆ ಬಂದಿದ್ದರು. ಈ ಪರಿಸರ ಎರಡನೇ ಬಾರಿ ಸೀಲ್ಡೌನ್ ಮಾಡಲು ಸಿದ್ಧತೆ ನಡೆದಿದೆ.
ಉಡುಪಿಗೆ ಮಹಾರಾಷ್ಟ್ರ, ತೆಲಂಗಾಣ ಲಿಂಕ್
ಉಡುಪಿ: ಜಿಲ್ಲೆಯಲ್ಲಿ ಸೋಂಕಿಗೊಳಗಾದವರಲ್ಲಿ ಮಹಾರಾಷ್ಟ್ರದಿಂದ ಬಂದಿದ್ದ 12, ತೆಲಂಗಾಣದಿಂದ ಬಂದಿದ್ದ ಒಬ್ಬರು ಇದ್ದಾರೆ. ಇವರನ್ನು ಕೋವಿಡ್-19 ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರ ಪ್ರಾಥಮಿಕ ಸಂಪರ್ಕ ವಿವರ ಪತ್ತೆ ಮಾಡಿ, ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 9 ಪುರುಷರು, 2 ಮಹಿಳೆಯರು, 2 ಮಕ್ಕಳಿಗೆ ಕರೊನಾ ಸೋಂಕು ತಗುಲಿದೆ. ಜಿಲ್ಲೆಯಲ್ಲಿ ಒಟ್ಟು ಕರೊನಾ ಪ್ರಕರಣಗಳ ಸಂಖ್ಯೆ 177ಕ್ಕೆ ಏರಿಕೆಯಾಗಿದೆ. ಸದ್ಯ ಉಡುಪಿ 53, ಕುಂದಾಪುರ 60, ಕಾರ್ಕಳದ 81 ಮಂದಿ ಸೇರಿದಂತೆ ಒಟ್ಟು 194 ಮಂದಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ. 177ರಲ್ಲಿ 50 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 127 ಪ್ರಕರಣ ಸಕ್ರಿಯವಾಗಿದೆ.
5920 ರಿಪೋರ್ಟ್ ಪೆಂಡಿಂಗ್: ಜಿಲ್ಲೆಯಲ್ಲಿ ಶನಿವಾರ 118 ಮಂದಿಯ ವರದಿ ನೆಗೆಟಿವ್ ಬಂದಿದೆ. ಹಾಟ್‌ಸ್ಪಾಟ್‌ನಿಂದ 32 ಮಂದಿಯದು ಮಾತ್ರ ವರದಿ ಸಂಗ್ರಹಿಸಲಾಗಿದೆ. ಇನ್ನೂ 5920 ಮಂದಿಯ ವರದಿ ಬರಲು ಬಾಕಿ ಇದೆ. ಐಸೊಲೇಶನ್ ವಾರ್ಡ್‌ನಿಂದ 13 ಮಂದಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಕಾಸರಗೋಡಲ್ಲಿ ಮೂವರಿಗೆ ಸೋಂಕು
ಕಾಸರಗೋಡು: ಜಿಲ್ಲೆಯಲ್ಲಿ ಶನಿವಾರ ಮೂವರಿಗೆ ಕರೊನಾ ಸೋಂಕು ದೃಢವಾಗಿದೆ. ಕುವೈತ್‌ನಿಂದ ಆಗಮಿಸಿದ್ದ ಪಿಲಿಕೋಡ್ ನಿವಾಸಿಯಾಗಿರುವ 33 ವರ್ಷದ ವ್ಯಕ್ತಿಗೆ, ದುಬೈಯಿಂದ ಆಗಮಿಸಿದ್ದ ಮಧೂರು ನಿವಾಸಿಯಾಗಿರುವ 68 ವರ್ಷದ ವ್ಯಕ್ತಿಗೆ, ಮಹಾರಾಷ್ಟ್ರದಿಂದ ಬಂದಿದ್ದ 29 ವರ್ಷದ ಚೆಮ್ನಾಡ್ ನಿವಾಸಿಗೆ ಕೋವಿಡ್ ಖಚಿತವಾಗಿದೆ.