ಸೋಂಕಿತರ ಸಂಖ್ಯೆ 11 ಸಾವಿರ

corona
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ 448 ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯು ವವರಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ.

ಹೊಸ ಪ್ರಕರಣಗಳಲ್ಲಿ 66 ಮಂದಿಗೆ ಪ್ರಾಥಮಿಕ ಸಂಪರ್ಕ, ಐಎಲ್‌ಐ 149, ಸಾರಿ 17 ಹಾಗೂ ಅಂತಾರಾಷ್ಟ್ರೀಯ ಪ್ರಯಾಣದ ಹಿನ್ನೆಲೆ ಉಳ್ಳವರು. 215 ಮಂದಿಯ ಸೋಂಕಿನ ಮೂಲವೇ ಪತ್ತೆಯಾಗಿಲ್ಲ. ಶೋಧ ಮುಂದುವರಿದಿದೆ.

ಮನೆ, ಕೋವಿಡ್ ಕೇರ್ ಸೆಂಟರ್ ಹಾಗೂ ಆಸ್ಪತ್ರೆಗಳಲ್ಲಿ ನಿಗಾವಣೆಯಲ್ಲಿದ್ದ 293 ಮಂದಿ ಗುಣವಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಲ್ಲಿವರೆಗೆ ಪತ್ತೆಯಾದ ಕರೊನಾ ಪಾಸಿಟಿವ್ ಪ್ರಕರಣಗಳು ಒಟ್ಟು 11,837. ಗುಣವಾದವರು 8973 ಮಂದಿ. ಸಕ್ರಿಯ ಪ್ರಕರಣಗಳು 2521. ಸೋಂಕಿಗೆ ಒಳಗಾಗಿ ಮೃತಪಟ್ಟವರು ಒಟ್ಟು 343.

ಕೆಲವು ದಿನ ಹೆಚ್ಚಿನ ಸಂಖ್ಯೆಯಲ್ಲಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ. ಜನರು ಇದರಿಂದ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಚಂದ್ರ ಬಾಯರಿ ತಿಳಿಸಿದ್ದಾರೆ. ಕೆಲವು ಕಂಪನಿಗಳು ಸ್ವಯಂಪ್ರೇರಿತವಾಗಿ ಏಕ ಕಾಲದಲ್ಲಿ ತಮ್ಮ ಎಲ್ಲ ಸಿಬ್ಬಂದಿಯನ್ನು ಆರೋಗ್ಯ ತಪಾಸಣೆ ನಡೆಸುತ್ತವೆ. ಇಂತಹ ಸಂದರ್ಭ ಸಹಜವಾಗಿಯೇ ಪಾಸಿಟಿವ್ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.

ಉಡುಪಿಯಲ್ಲಿ 174 ಮಂದಿಗೆ ಸೋಂಕು: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ 11 ಸಾವಿರ ಗಡಿ ದಾಟಿದೆ. ಶುಕ್ರವಾರ 174 ಮಂದಿಗೆ ಕೋವಿಡ್ ಪಾಸಿಟಿವ್ ವರದಿಯಾಗಿದೆ. ಮೃತಪಟ್ಟ ಇಬ್ಬರು ಹಿರಿಯ ನಾಗರಿಕರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 11,087ಕ್ಕೆೆ, ಸಾವಿನ ಸಂಖ್ಯೆ 95ಕ್ಕೆ ಏರಿಕೆಯಾಗಿದೆ. ಶುಕ್ರವಾರ 187 ಮಂದಿ ಸೋಂಕಿನಿಂದ ಗುಣವಾಗಿ ಡಿಸ್ಚಾರ್ಜ್ ಆಗಿದ್ದಾರೆ. 524 ಮಂದಿಯ ಗಂಟಲ ದ್ರವ ಮಾದರಿಯನ್ನು ಕೋವಿಡ್ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಇನ್ನೂ 524 ಮಂದಿಯ ವರದಿ ಬರಲು ಬಾಕಿ ಇದೆ. 2608 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

157 ಮಂದಿಗೆ ಸೋಂಕು

ಕಾಸರಗೋಡು: ಜಿಲ್ಲೆಯ 157 ಮಂದಿ ಸೇರಿ ಕೇರಳದ 2,543 ಮಂದಿಗೆ ಕೋವಿಡ್-19 ಬಾಧಿಸಿದೆ. ರಾಜ್ಯದಲ್ಲಿ ಏಳು ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 274ಕ್ಕೇರಿದೆ. ಕಾಸರಗೋಡು ಜಿಲ್ಲೆಯ 193 ಮಂದಿ ಸಹಿತ ರಾಜ್ಯದಲ್ಲಿ 2,097 ಮಂದಿಯ ತಪಾಸಣಾ ವರದಿ ನೆಗೆಟಿವ್ ಆಗಿದೆ.

ದ.ಕ.ರಿಕ್ರಿಯೇಷನ್ ಕ್ಲಬ್ ಮುಚ್ಚಲು ಆದೇಶ

ಕರೊನಾ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲ ರಿಕ್ರಿಯೇಷನ್ ಕ್ಲಬ್‌ಗಳನ್ನು ಮುಂದಿನ ಆದೇಶದ ತನಕ ಮುಚ್ಚುವಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಆದೇಶ ಹೊರಡಿಸಿದ್ದಾರೆ. ಬಂಟ್ವಾಳ, ಬಿಸಿರೋಡ್, ಮೆಲ್ಕಾರ್, ಬೆಳ್ತಂಗಡಿ, ಸಿದ್ದಕಟ್ಟೆ, ವೇಣೂರು, ಮಡಂತ್ಯಾರು, ಜಾಲ್ಸೂರು, ಮಡಂತ್ಯಾರು ಮೊದಲಾದ ಕಡೆ ಕಾರ್ಯಾಚರಿಸುತ್ತಿರುವ ರಿಕ್ರಿಯೇಷನ್ ಕ್ಲಬ್‌ಗಳಲ್ಲಿ ದೈಹಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಆಡುವ ವೇಳೆ ಒಂದು ಕಾರ್ಡ್ ಹಲವರ ಕೈಗೆ ವರ್ಗಾವಣೆ ಆಗುವುದರಿಂದ ಸೋಂಕು ಹರಡುವ ಸಾಧ್ಯತೆ ಅಧಿಕ ಎಂದು ಪೊಲೀಸ್ ಅಧೀಕ್ಷಕರು ಹಾಗು ಆರೋಗ್ಯ ಇಲಾಖೆ ನೀಡಿದ ವರದಿ ಆಧರಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆದೇಶ ಉಲ್ಲಂಘಿಸಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net