ದ.ಕ. ನಾಲ್ವರಿಗೆ ಕರೊನಾ ಪಾಸಿಟಿವ್

corona
Published on

ಮಂಗಳೂರು/ಪುತ್ತೂರು: ದ.ಕ ಜಿಲ್ಲೆಯಲ್ಲಿ ಶನಿವಾರ ಕುವೈತ್, ಸೌದಿ ಅರೇಬಿಯಾ ಹಾಗೂ ಮುಂಬೈನಿಂದ ಮರಳಿದ ಮೂವರು ಸೇರಿದಂತೆ ನಾಲ್ವರಿಗೆ ಕರೊನಾ ದೃಢಪಟ್ಟಿದೆ. ಕರೊನಾ ರೋಗಿಯೊಬ್ಬರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಇನ್ನೊಬ್ಬ ಯುವಕನಿಗೂ ಸೋಂಕು ತಗುಲಿದೆ.
ಪುತ್ತೂರು ನಗರಸಭಾ ವ್ಯಾಪ್ತಿಯ ಚಿಕ್ಕಮುಡ್ನೂರು ನಿವಾಸಿಯೊಬ್ಬರಿಗೆ ಕರೊನಾ ದೃಢಪಟ್ಟಿದೆ. ನಗರಸಭಾ ಸದಸ್ಯೆಯೊಬ್ಬರ ಮಾವನಾಗಿರುವ ಇವರು ಜ್ವರ, ಶೀತ, ಕೆಮ್ಮು ಬಾಧೆಯಿಂದ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಆಗಮಿಸಿದ್ದರು. ಗಂಟಲು ದ್ರವ ಮಾದರಿ ಪರೀಕ್ಷೆಯಲ್ಲಿ ಸೋಂಕು ಖಚಿತವಾಗಿದೆ. ಈಗ ಅವರ ಸೊಸೆಯ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದ್ದು, ಮನೆಯ ಎಲ್ಲ ಸದಸ್ಯರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.

ತಾಲೂಕಿನ ಗ್ರಾಮಾಂತರ ಪ್ರದೇಶ ಆರ್ಯಾಪು ಗ್ರಾಪಂ ವ್ಯಾಪ್ತಿಯ ಸಂಪ್ಯ ಹಾಗೂ ಉಪ್ಪಿನಂಗಡಿಯಲ್ಲಿ ಈ ಹಿಂದೆ ಕರೊನಾ ಪಾಸಿಟಿವ್ ಕಂಡು ಬಂದಿತ್ತು. ಅವರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಪ್ರಸ್ತುತ ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಪ್ರಕರಣ ಒಟ್ಟು 426 (10 ಅನ್ಯ ಜಿಲ್ಲೆಯದ್ದು ಸೇರಿ) ಆಗಿದೆ. 197 ಸಕ್ರಿಯ ಪ್ರಕರಣಗಳಿವೆ. ವೆನ್ಲಾಕ್‌ನಲ್ಲಿ ಸದ್ಯ ಐಸಿಯುನಲ್ಲಿ ಗಂಭೀರ ಸ್ಥಿತಿಯಲ್ಲಿ ಇಬ್ಬರಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. 221 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಶನಿವಾರ 15 ಮಂದಿ ಬಿಡುಗಡೆಯಾಗಿದ್ದಾರೆ.

ಇಬ್ಬರು ವೃದ್ಧರು ಕೊನೆಗೂ ಮನೆಗೆ
ದ.ಕ ಜಿಲ್ಲೆಯಲ್ಲಿ ಸುಮಾರು 40 ದಿನಗಳ ಹಿಂದೆ ಕೋವಿಡ್ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿ ತಲಾ 7 ಬಾರಿ ಟೆಸ್ಟ್ ಮಾಡಿದರೂ ಪಾಸಿಟಿವ್ ಆಗಿಯೇ ಉಳಿದ ಇಬ್ಬರು ವೃದ್ಧರೂ ಸೇರಿದಂತೆ 15 ಮಂದಿಯನ್ನು ಶನಿವಾರ ಬಿಡುಗಡೆ ಮಾಡಲಾಗಿದೆ.
ಸಾಮಾನ್ಯವಾಗಿ ಗುಣಮುಖರಾಗಿ ಒಂದು ಟೆಸ್ಟ್ ನೆಗೆಟಿವ್ ಬಂದ ಬಳಿಕ ಮನೆಗೆ ಕಳುಹಿಸಲಾಗುತ್ತದೆ. ಆದರೆ ದುಬೈನಿಂದ ಮೇ 12ರಂದು ಮೊದಲ ವಿಮಾನದಲ್ಲಿ ಬಂದಿಳಿದ 81ರ ವೃದ್ಧ ಹಾಗೂ ಮೇ 18ರಂದು ಬಂದ 76 ವರ್ಷದ ವೃದ್ಧರಿಗೆ ಸೋಂಕು ಪತ್ತೆಯಾಗಿ ಆರೋಗ್ಯವಾಗಿದ್ದರೂ ಪರೀಕ್ಷೆಯಲ್ಲಿ ನೆಗೆಟಿವ್ ಬರುತ್ತಿಲ್ಲ. ಪ್ರತಿ ಬಾರಿ ಪಾಸಿಟಿವ್ ಬರುತ್ತಿದ್ದ ಕಾರಣ ಕೋವಿಡ್ ಆಸ್ಪತ್ರೆಯಲ್ಲೇ ಬಾಕಿಯಾಗಿದ್ದರಿಂದ ಅವರು ಒತ್ತಡಕ್ಕೂ ಒಳಗಾಗುತ್ತಿದ್ದರು.
ಇಬ್ಬರ ಸ್ಥಿತಿ ಗಮನಿಸಿದ ಆರೋಗ್ಯ ಇಲಾಖೆ ಸರ್ಕಾರಕ್ಕೆ ಇದನ್ನು ಬರೆದು ಸಲಹೆ ಕೇಳಿತ್ತು. ಈ ಬಗ್ಗೆ ಬೆಂಗಳೂರಿನ ತಾಂತ್ರಿಕ ಸಲಹಾ ಸಮಿತಿ ಚರ್ಚಿಸಿ, ವೃದ್ಧರಲ್ಲಿ ಕೋವಿಡ್ ಕಡಿಮೆಯಾಗಲು ಹೆಚ್ಚು ದಿನ ಬೇಕಾಗುತ್ತದೆ. ಅವರು ಆರೋಗ್ಯವಂತರಾಗಿ ಇರುವ ಕಾರಣ ಮನೆಗೆ ಕಳುಹಿಸಬಹುದು ಎಂದಿದೆ. ಹಾಗಾಗಿ ಶನಿವಾರ ಅವರನ್ನು ಬಿಡುಗಡೆ ಮಾಡಲಾಗಿದೆ. ಅವರು ಕಡ್ಡಾಯವಾಗಿ 14 ದಿನ ಮನೆಯಲ್ಲೇ ನಿಗಾವಣೆಯಲ್ಲಿರಬೇಕು. ಬಳಿಕ ಮತ್ತೆ ಟೆಸ್ಟ್ ಮಾಡಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ‘ವಿಜಯವಾಣಿ’ಗೆ ತಿಳಿಸಿದರು.

ಕಾಸರಗೋಡಿನಲ್ಲಿ ಏಳು ಮಂದಿಗೆ
ಕಾಸರಗೋಡು: ಜಿಲ್ಲೆಯಲ್ಲಿ ಏಳು ಮಂದಿ ಒಳಗೊಂಡಂತೆ ಕೇರಳದಲ್ಲಿ ಶನಿವಾರ 127 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಕೋವಿಡ್‌ಬಾಧಿಸಿ ಚಿಕಿತ್ಸೆಯಲ್ಲಿರುವವರಲ್ಲಿ 57ಮಂದಿ ರೋಗಮುಕ್ತಿ ಹೊಂದಿದ್ದಾರೆ. ಕೇರಳದಲ್ಲಿ ರೋಗಬಾಧಿಸಿದವರಲ್ಲಿ ಪ್ರಸಕ್ತ 1450 ಮಂದಿ ಚಿಕಿತ್ಸೆಯಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net