ದ.ಕ. 30 ಪಾಸಿಟಿವ್, 17 ಮಂದಿ ಬಿಡುಗಡೆ

corona
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಸೌದಿ ಅರೇಬಿಯಾದ ಕರೊನಾ ಕನೆಕ್ಷನ್ ಮುಂದುವರಿದಿದೆ. ಸೌದಿಯಿಂದ ಬಂದ 25 ಮಂದಿ, ಮಹಾರಾಷ್ಟ್ರದಿಂದ ಹಿಂದಿರುಗಿದ ಐವರಿಗೆ ಸೇರಿ ಒಟ್ಟು 30 ಮಂದಿಗೆ ಶನಿವಾರ ಕರೊನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ 263ಕ್ಕೇರಿಕೆಯಾಗಿದೆ.

1 ವರ್ಷದ ಮೂರು ಗಂಡು ಮಕ್ಕಳು, 2 ವರ್ಷದ ಒಂದು ಗಂಡು ಮಗು, 4 ವರ್ಷದ ಒಂದು ಗಂಡು ಮಗು, 2 ವರ್ಷದ ಒಂದು ಹೆಣ್ಣು ಮಗು, 8 ವರ್ಷದ ಓರ್ವ ಬಾಲಕ ಪಟ್ಟಿಯಲ್ಲಿದ್ದಾರೆ. ಜೂನ್ 6ರಂದು ಸೌದಿ ಅರೇಬಿಯಾದಿಂದ ಆಗಮಿಸಿ ಕ್ವಾರಂಟೈನ್ ಆಗಿದ್ದ ಒಟ್ಟು 7 ಮಂದಿ, ಮೇ.29ರಂದು ಮುಂಬೈನಿಂದ ಆಗಮಿಸಿ ಕ್ವಾರಂಟೈನ್ ಆಗಿದ್ದ ಓರ್ವ 40ರ ಗಂಡಸು, ಜೂನ್ 4ರಂದು ಮುಂಬೈನಿಂದ ಆಗಮಿಸಿದ್ದ ಇಬ್ಬರಿಗೆ ಕರೊನಾ ಪಾಸಿಟಿವ್. 6 ಮಂದಿ ಗರ್ಭಿಣಿಯರೂ ಕೂಡಾ ಸೋಂಕಿಗೊಳಗಾಗಿದ್ದಾರೆ.

ಜೂನ್ 10ರಂದು ಸೌದಿಯಿಂದ ವಿಮಾನದಲ್ಲಿ ಒಟ್ಟಿಗೆ ಬಂದಿದ್ದ 19 ಮಂದಿಯನ್ನು ನಿಗಾವಣೆಯಲ್ಲಿರಿಸಲಾಗಿದ್ದು ಅವರಿಗೆ ಕರೊನಾ ದೃಢಪಟ್ಟಿದೆ. ಎಲ್ಲರನ್ನೂ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ದಾಖಲಾಗಿರುವವರ ಪೈಕಿ ಮಧುಮೇಹ, ಅಧಿಕ ರಕ್ತದೊತ್ತಡ ಇರುವ 50 ವರ್ಷದ ಗಂಡಸು ಮತ್ತು ಮಧುಮೇಹ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿರುವ 70ರ ವೃದ್ಧ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತರ 116 ಸಕ್ರಿಯ ಕರೊನಾ ಪಾಸಿಟಿವ್ ಇರುವವರ ಸ್ಥಿತಿ ತೃಪ್ತಿಕರವಾಗಿದೆ. ಕರೊನಾ ಚಿಕಿತ್ಸೆ ಪಡೆದು ಗುಣವಾಗಿರುವ ಒಟ್ಟು 17 ಮಂದಿಯನ್ನು ಶನಿವಾರ ಬಿಡುಗಡೆಗೊಳಿಸಲಾಗಿದೆ.

ಕಾಸರಗೋಡಲ್ಲಿ 9 ಮಂದಿಗೆ ಸೋಂಕು

ಕಾಸರಗೋಡು: ಜಿಲ್ಲೆಯ ಒಂಬತ್ತು ಮಂದಿ ಒಳಗೊಂಡಂತೆ ಕೇರಳದಲ್ಲಿ ಶನಿವಾರ 85 ಮಂದಿಯಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡಿದೆ. ಈ ಮಧ್ಯೆ ರಾಜ್ಯದಲ್ಲಿ ರೋಗಬಾಧಿತರಲ್ಲಿ 46 ಮಂದಿ ಗುಣಮುಖರಾಗಿದ್ದಾರೆ. ಕೇರಳದಲ್ಲಿ ಕೋವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ಭಾನುವಾರವನ್ನು ಸಂಪೂರ್ಣ ಲಾಕ್‌ಡೌನ್ ಮಾಡಲಾಗುತ್ತಿದೆ. ಲಾಕ್‌ಡೌನ್ ಮಾನದಂಡ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net