

ಮಂಗಳೂರು: ದುಬೈನಿಂದ ಆಗಮಿಸಿದ್ದ ಏರ್ ಇಂಡಿಯಾದ 6 ಸಿಬ್ಬಂದಿ ಸಹಿತ 24 ಮಂದಿಗೆ ದ.ಕ ಜಿಲ್ಲೆಯಲ್ಲಿ ಶನಿವಾರ ಕರೊನಾ ದೃಢಪಟ್ಟಿದೆ.
ದುಬೈನಿಂದ ಕೇರಳದ ಕಣ್ಣೂರಿಗೆ ಜೂನ್ 6ರಂದು ಆಗಮಿಸಿದ್ದ ಐವರು ಪುರುಷ ಹಾಗೂ ಓರ್ವ ಮಹಿಳಾ ಸಿಬ್ಬಂದಿ ಮಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿ ಉಳಿದುಕೊಂಡಿದ್ದರು. ಅವರ ಗಂಟಲು ದ್ರವ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ. ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ಸಂಪರ್ಕಿತರ ಬಗ್ಗೆ ತನಿಖೆ ಪ್ರಗತಿಯಲ್ಲಿದೆ. ಏರ್‌ಲಿಫ್ಟ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರಿಂದ ಸಿಬ್ಬಂದಿಗೆ ಸೋಂಕು ತಗುಲಿರುವ ಸಾಧ್ಯತೆ ಇದೆ.
ಉಳಿದಂತೆ ಮಹಾರಾಷ್ಟ್ರ, ಗುಜರಾತ್, ಉಕ್ರೈನ್, ಸೌದಿ ಅರೇಬಿಯಾದಿಂದ ಬಂದವರಲ್ಲಿ ಸೋಂಕು ಕಂಡುಬಂದಿದೆ. ಮುಂಬೈನಿಂದ ಒಟ್ಟಿಗೆ ಆಗಮಿಸಿದ್ದ 8 ಮಂದಿ ಉಡುಪಿ ಜಿಲ್ಲೆಯಲ್ಲಿ ಕ್ವಾರಂಟೈನ್ ಪೂರ್ಣಗೊಳಿಸಿ ಮೂಡುಬಿದಿರೆಗೆ ಬಂದಿದ್ದು ಅವರಿಗೆ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿದೆ. ಮುಂಬೈನಿಂದ ಆಗಮಿಸಿ ಉಡುಪಿಯಲ್ಲಿ ಕ್ವಾರಂಟೈನ್ ಪೂರ್ಣಗೊಳಿಸಿ ಬೆಳ್ತಂಗಡಿಗೆ ಆಗಮಿಸಿದ ಇಬ್ಬರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಮೇ 17ರಂದು ಮುಂಬೈಯಿಂದ ಬಂದು ಉಡುಪಿಯಲ್ಲಿ ಕ್ವಾರಂಟೈನ್ ಆಗಿ, ಅಲ್ಲಿಂದ ಬಂಟ್ವಾಳಕ್ಕೆ ಬಂದವರಿಗೆ ಪಾಸಿಟಿವ್ ಕಂಡು ಬಂದಿದೆ.
ಅನಾರೋಗ್ಯವಿದೆ ಎಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಲು ಆಗಮಿಸಿದ್ದು, ಮುಂಚಿತವಾಗಿ ನಡೆಸಲಾದ ಗಂಟಲು ಮಾದರಿ ಪರೀಕ್ಷಾ ವರದಿಯಲ್ಲಿ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ವೆನ್ಲಾಕ್‌ಗೆ ದಾಖಲಿಸಲಾಗಿದೆ. ಎನ್‌ಎಂಪಿಟಿಯ ಹಡಗು ಸಿಬ್ಬಂದಿಗೂ ಕರೊನಾ ಸೋಂಕು ತಗಲಿದ್ದು ಸಂಪರ್ಕಿತರ ತನಿಖೆ ಪ್ರಗತಿಯಲ್ಲಿದೆ.
ಒಟ್ಟು ಮೂವರು ಶನಿವಾರ ಚಿಕಿತ್ಸೆ ಪೂರ್ಣಗೊಂಡು ಗುಣವಾಗಿ ಮನೆಗೆ ಮರಳಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 77 ಕರೊನಾ ಪಾಸಿಟಿವ್ ರೋಗಿಗಳು ಚಿಕಿತ್ಸೆಯ ಹಂತದಲ್ಲಿದ್ದು 91 ಮಂದಿ ಈವರೆಗೆ ಗುಣವಾಗಿ ತೆರಳಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 165.
ಬೆಳ್ತಂಗಡಿಯಲ್ಲಿ ನಾಲ್ವ್ವರಿಗೆ ಸೋಂಕು
ಬೆಳ್ತಂಗಡಿ: ತಾಲೂಕಿನಲ್ಲಿ ಶನಿವಾರ ನಾಲ್ವರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಎಲ್ಲರೂ ಮುಂಬೈಯಿಂದ ಹಿಂತಿರುಗಿದವರು. ವೇಣೂರು ಗ್ರಾಮದ ಮೂಡುಕೋಡಿ ಗ್ರಾಮದ ಇಬ್ಬರಿಗೆ, ಸಾವ್ಯ ಗ್ರಾಮದ ಓರ್ವ, ಕಲ್ಮಂಜ ಗ್ರಾಮದ ಒಬ್ಬರಿಗೆ ರೋಗವಿರುವುದು ಪತ್ತೆಯಾಗಿದೆ. ಇವರೆಲ್ಲರೂ ಕಾರ್ಕಳದಲ್ಲಿ 14 ದಿನಗಳ ಸರ್ಕಾರಿ ಕ್ವಾರಂಟೈನ್ ಮುಗಿಸಿ ಮನೆಗಳಿಗೆ ಹಿಂತಿರುಗಿದ್ದರು. ವಾರದ ಬಳಿಕ ಇವರ ಕೋವಿಡ್ ಪರೀಕ್ಷೆಯ ಫಲಿತಾಂಶ ಬಂದಿದೆ.
ಕಡಬದಲ್ಲಿ 8 ಮನೆಗಳಿಗೆ ದಿಗ್ಬಂಧನ
ಕಡಬ: ಕಡಬದ ವ್ಯಕ್ತಿಗೆ ಕರೊನಾ ದೃಢಗೊಂಡ ಹಿನ್ನೆಲೆಯಲ್ಲಿ ಸೋಂಕಿತನ ಮನೆ ಸೇರಿದಂತೆ ಆರಿಗ, ದೋಳ ಸುತ್ತಮುತ್ತಲಿನ ಎಂಟು ಮನೆಗಳನ್ನು ಶನಿವಾರ ಸೀಲ್ ಡೌನ್ ಮಾಡಲಾಗಿದೆ. ಕಂದಾಯ ಅಧಿಕಾರಿಗಳು, ಆರೋಗ್ಯ ಇಲಾಖಾಧಿಕಾರಿಗಳು, ಪಿಡಿಒ, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಸೋಂಕಿತ ವ್ಯಕ್ತಿಯು ಕೆಲಸದ ನಿಮಿತ್ತ ಜೂನ್ 2ರಂದು ಕಡಬ ಸಿ.ಎ.ಬ್ಯಾಂಕ್‌ಗೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಬ್ಯಾಂಕ್‌ನ ಆಡಳಿತ ಮಂಡಳಿ ಬ್ಯಾಂಕ್‌ನ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಸ್ವಯಂ ಸೀಲ್‌ಡೌನ್ ಘೋಷಿಸಿದೆ. ಬ್ಯಾಂಕ್‌ನ ಸಿಬಂದಿ, ಕೆಲ ನಿರ್ದೇಶಕರು ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.
ಕಾಸರಗೋಡಿನ 10 ಮಂದಿಗೆ ಸೋಂಕು
ಕಾಸರಗೋಡು: ಜಿಲ್ಲೆಯಲ್ಲಿ ಶನಿವಾರ ಹತ್ತು ಮಂದಿ ಸಹಿತ ರಾಜ್ಯದಲ್ಲಿ ಒಟ್ಟು 108 ಮಂದಿಯಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ. ಇವರಲ್ಲಿ 64 ಜನ ವಿದೇಶದಿಂದ ಆಗಮಿಸಿದ್ದರೆ, 34 ಮಂದಿ ಇತರ ರಾಜ್ಯಗಳಿಂದ ಆಗಮಿಸಿದ್ದಾರೆ. ಇತರ 10 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ.