ಕರಾವಳಿಯಲ್ಲಿ 184 ಕರೊನಾ ಕೇಸ್

Corona
Published on

ಮಂಗಳೂರು/ಉಡುಪಿ: ದ.ಕ ಜಿಲ್ಲೆಯಲ್ಲಿ ಸೋಮವಾರ 131 ಕರೊನಾ ಪ್ರಕರಣಗಳು ಪತ್ತೆಯಾಗಿದ್ದರೆ, ಉಡುಪಿ ಜಿಲ್ಲೆಯಲ್ಲಿ 53 ಜನರು ಸೋಂಕಿತರಾದರು.

ದ.ಕ.ದಲ್ಲಿ ಐಎಲ್‌ಐ(ಇನ್‌ಫ್ಲುಯೆಂಜಾ ಲೈಕ್ ಇಲ್‌ನೆಸ್) ಇದ್ದ 63 ಮಂದಿ, ತೀವ್ರ ಉಸಿರಾಟದ ಸಮಸ್ಯೆ ಇದ್ದ 10 ಮಂದಿ, ಪ್ರಾಥಮಿಕ ಸಂಪರ್ಕದಿಂದ 16 ಮಂದಿ ಕರೊನಾ ಸೋಂಕಿಗೀಡಾಗಿದ್ದಾರೆ. ವಿದೇಶದಿಂದ ಹಿಂದಿರುಗಿದ ನಾಲ್ವರಲ್ಲಿ ಕರೊನಾ ಬಂದಿದ್ದರೆ 38 ಮಂದಿಯ ಸೋಂಕಿನ ಮೂಲ ಪತ್ತೆಯಾಗಿಲ್ಲ. ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 2361ಕ್ಕೆ ಏರಿಕೆಯಾಗಿದ್ದು 1467 ಪ್ರಕರಣಗಳು ಸಕ್ರಿಯವಾಗಿವೆ. 62 ಮಂದಿ ರೋಗಮುಕ್ತವಾಗಿ ಮನೆಗಳಿಗೆ ತೆರಳಿದ್ದಾರೆ. ಡಿಸ್‌ಚಾರ್ಜ್ ಆದವರ ಸಂಖ್ಯೆ 844ಕ್ಕೆ ಏರಿಕೆಯಾಗಿದೆ.

ಉಡುಪಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1661ಕ್ಕೆ ಏರಿಕೆಯಾಗಿದೆ. ಶೀತ, ಜ್ವರದಿಂದ ಬಳಲುತ್ತಿದ್ದ 12 ಮಂದಿಗೆ ಸೋಂಕು ದೃಢಪಟ್ಟಿದೆ. ಇನ್ನುಳಿದ 41 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಕರೊನಾ ಸೋಂಕು ತಗುಲಿದೆ ಎಂದು ಡಿಎಚ್‌ಒ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

260 ನೆಗೆಟಿವ್: ಜಿಲ್ಲೆಯಲ್ಲಿ 260 ಮಂದಿಯ ವರದಿ ನೆಗೆಟಿವ್ ಬಂದಿದೆ. 206 ಮಂದಿಯ ಗಂಟಲ ದ್ರವ ಮಾದರಿಯನ್ನು ಸಂಗ್ರಹಿಸಲಾಗಿದೆ. ಇನ್ನೂ 1761 ಮಂದಿಯ ವರದಿ ಬರಲು ಬಾಕಿ ಇದೆ. ಇಲ್ಲಿವರೆಗೆ 1280 ಮಂದಿ ಸೋಂಕಿತರು ಸಂಪೂರ್ಣ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 378 ಸಕ್ರಿಯ ಪ್ರಕರಣಗಳಿವೆ.

ಕರಾವಳಿಯಲ್ಲಿ ಐವರು ಬಲಿ

ದ.ಕ.ಜಿಲ್ಲೆಯ ನಾಲ್ವರು, ಉಡುಪಿಯಲ್ಲಿ ಓರ್ವ ವೃದ್ಧ ಸೇರಿದಂತೆ ಕರಾವಳಿಯಲ್ಲಿ ಸೋಮವಾರ ಐದು ಮಂದಿ ಅಸುನೀಗಿದ್ದಾರೆ.

ದ.ಕ.ದಲ್ಲಿ ಡಯಾಬಿಟಿಸ್, ನ್ಯುಮೋನಿಯಾ, ಹೃದ್ರೋಗ ಇದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 70ರ ವೃದ್ಧ, ಹೆಪಟೈಟಿಸ್ ಸಮಸ್ಯೆಯಿದ್ದು ಐಸಿಯುನಲ್ಲಿದ್ದ 53ರ ಗಂಡಸು, ತೀವ್ರ ಉಸಿರಾಟದ ತೊಂದರೆ ಇದ್ದ 60ರ ಗಂಡಸು, ಶ್ವಾಸಕೋಶದ ಕಾಯಿಲೆಯಿದ್ದ 70ರ ವೃದ್ಧ ಮೃತಪಟ್ಟಿದ್ದಾರೆ. ಎಲ್ಲರಲ್ಲೂ ಕರೊನಾ ದೃಢಪಟ್ಟಿದೆ. ಇದರಲ್ಲಿ ಶ್ವಾಸಕೋಶದ ಕಾಯಿಲೆ ಇದ್ದವರು ಜುಲೈ 11ರಂದು ಮೃತರಾದರೆ ಇಬ್ಬರು ಸೋಮವಾರ ಹಾಗೂ 70ರ ವೃದ್ಧ ಭಾನುವಾರ ಮೃತರಾಗಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಬೈಂದೂರು ಮೂಲದ ಹಿರಿಯ ನಾಗರಿಕರೊಬ್ಬರು ಮೃತಪಟ್ಟಿದ್ದು, ಇವರಿಗೆ ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 72 ವರ್ಷದ ಇವರು ಮಹಾರಾಷ್ಟ್ರದಿಂದ ಬಂದಿದ್ದ ವ್ಯಕ್ತಿಯ ಸಂಪರ್ಕದ ಮೂಲಕ ಸೋಂಕಿಗೊಳಗಾದವರು. ಹಲವು ಬಗೆಯ ಆರೋಗ್ಯ ಸಮಸ್ಯೆಗಳು ಅವರನ್ನು ಕಾಡುತಿತ್ತು. ಸೋಮವಾರ ಬೆಳಗ್ಗೆ ಟಿಎಂಎ ಪೈ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಮೂಲಕ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.

ಕಾಸರಗೋಡಿನ 9 ಮಂದಿಗೆ ದೃಢ

ಕಾಸರಗೋಡು: ಜಿಲ್ಲೆಯಲ್ಲಿ ಒಂಬತ್ತು ಮಂದಿ ಸಹಿತ ಕೇರಳದಲ್ಲಿ ಸೋಮವಾರ 449 ಮಂದಿಯಲ್ಲಿ ಕೋವಿಡ್-19 ರೋಗ ಕಾಣಿಸಿಕೊಂಡಿದೆ. ಇವರಲ್ಲಿ 140 ಮಂದಿ ವಿದೇಶದಿಂದ, 64 ಮಂದಿ ಇತರ ರಾಜ್ಯಗಳಿಂದ ಆಗಮಿಸಿದವರು. 144 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. ಕಾಸರಗೋಡು ಜಿಲ್ಲೆಯ ಐವರು ಸೇರಿದಂತೆ, ಕೇರಳದಲ್ಲಿ ಸೋಮವಾರ 162 ಮಂದಿ ಗುಣಮುಖರಾಗಿದ್ದಾರೆ.

ಮಾಸ್ಕ್, ಗ್ಲೌಸ್ ಇಲ್ಲದಿದ್ದರೆ ಅಂಗಡಿ ಬಂದ್: ಜಿಲ್ಲೆಯ ವ್ಯಾಪಾರ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಮುಖಕ್ಕೆ ಮಾಸ್ಕ್, ಕೈಗಳಿಗೆ ಗ್ಲೌಸ್ ಕಡ್ಡಾಯವಾಗಿ ಧರಿಸಿರಬೇಕು. ಆದೇಶ ಉಲ್ಲಂಘಿಸಿದರೆ 7 ದಿನಗಳ ಕಾಲ ಅಂಗಡಿ ಮುಚ್ಚಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಪೊಲೀಸರಿಗೆ ಸೂಚನೆ ನೀಡಿದರು.

ಕೋವಿಡ್ ಕೇರ್‌ಗೆ 3,500 ಹಾಸಿಗೆ ಸಿದ್ಧ

ಮಂಗಳೂರು: ಕರೊನಾ ಸೋಂಕಿತರಿಗೆ ಹಾಗೂ ರೋಗಲಕ್ಷಣ ಹೊಂದಿದವರ ಚಿಕಿತ್ಸೆಗಾಗಿ ಜಿಲ್ಲೆಯಲ್ಲಿ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ 3500 ಬೆಡ್‌ಗಳನ್ನು ಸಿದ್ಧಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.

ಅವರು ಸೋಮವಾರ ಮುಖ್ಯಮಂತ್ರಿಗಳೊಂದಿಗೆ ನಡೆದ ವಿಡಿಯೋ ಕಾನ್ಪರೆನ್ಸ್‌ನಲ್ಲಿ ಮಾಹಿತಿ ನೀಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10,000 ಹಾಸಿಗೆಗಳನ್ನು ಸಿದ್ಧಪಡಿಸುವ ಸಾಮರ್ಥ್ಯ ಇದೆ. ಮುಂದಿನ ಒಂದು ವಾರದೊಳಗೆ ಇದು ಸಿದ್ಧಗೊಳ್ಳಲಿದೆ. ಇದಕ್ಕಾಗಿ ಜಿಲ್ಲೆಯ ವಿವಿಧ ಹಾಸ್ಟೆಲ್, ಸಭಾಂಗಣ, ಆಸ್ಪತ್ರೆಗಳಲ್ಲಿ ಸಿದ್ಧತೆ ನಡೆಸಲಾಗುತ್ತಿದೆ ಎಂದರು.

ಈವರೆಗೆ ಜಿಲ್ಲೆಯಲ್ಲಿ 36,898 ಮಂದಿಯನ್ನು ಪರೀಕ್ಷಿಸಲಾಗಿದ್ದು, 2,222 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಪ್ರಸಕ್ತ ಜಿಲ್ಲೆಯಲ್ಲಿ 1399 ಸಕ್ರಿಯ ಪ್ರಕರಣಗಳಿವೆ. 43 ಸೋಂಕಿತರು ಮೃತಪಟ್ಟಿದ್ದಾರೆ. ಕೆಲ ಪ್ರದೇಶಗಳಲ್ಲಿ ಮನೆ ಮನೆ ಸಮೀಕ್ಷೆ ನಡೆಸಿ ರೋಗಲಕ್ಷಣಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಕೆಲ ರೋಗಿಗಳು ಕೊನೆಯ ಹಂತದಲ್ಲಿ ಚಿಕಿತ್ಸೆಗೆ ಬರುತ್ತಿರುವುದರಿಂದ ಪ್ರಕರಣಗಳು ಕ್ಲಿಷ್ಟವಾಗುತ್ತಿವೆ ಎಂದರು.

ಸಂಸದ ನಳಿನ್ ಕುಮಾರ್ ಕಟೀಲು, ಸಿಎಂ ಜತೆ ಮಾತನಾಡಿ, ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ದರ ವಿಧಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಆಯುಷ್ಮಾನ್ ಯೋಜನೆಯಡಿ ಚಿಕಿತ್ಸೆ ನೀಡುವ ಬಗ್ಗೆ ಸಮರ್ಪಕ ಮಾರ್ಗದರ್ಶನ ಹೊರಡಿಸುವಂತೆ ಕೋರಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಪಂ ಸಿಇಒ ಡಾ.ಸೆಲ್ವಮಣಿ, ಎಸ್ಪಿ ಲಕ್ಷ್ಮೀಪ್ರಸಾದ್, ಡಿಸಿಪಿ ಅರುಣಾಂಗ್ಶುಗಿರಿ, ಅಪರ ಜಿಲ್ಲಾಧಿಕಾರಿ ರೂಪಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net