ದ.ಕ.ದಲ್ಲಿ 164 ಪಾಸಿಟಿವ್, 2 ಸಾವು

corona
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ 167 ಕೋವಿಡ್-19 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ.

ನಗರದ ಖಾಸಗಿ ಆಸ್ಪತ್ರೆಗೆ ಮಂಗಳವಾರ ತೀವ್ರ ಉಸಿರಾಟದ ತೊಂದರೆಯೊಂದಿಗೆ ದಾಖಲಾಗಿದ್ದ ಭಟ್ಕಳದ 62 ವರ್ಷದ ವೃದ್ಧ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮಂಗಳೂರು ನಿವಾಸಿ 49 ವರ್ಷದ ಪುರುಷ ನ್ಯುಮೋನಿಯಾ ಹಾಗೂ ಯಕೃತ್ತಿನ ರೋಗದಿಂದ ಬಳಲುತ್ತಿದ್ದು, ಸೋಮವಾರ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಮಂಗಳವಾರ ರಾತ್ರಿ ಮೃತರಾಗಿದ್ದಾರೆ. ಈ ಇಬ್ಬರಿಗೂ ಕರೊನಾ ಪಾಸಿಟಿವ್ ಬಂದಿದೆ.

ಸೋಂಕಿತ 167 ಮಂದಿಯಲ್ಲಿ 64 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದೆ. 42 ಐಎಲ್‌ಐ, 6 ಎಸ್‌ಎಆರ್‌ಐ, ಸರ್ಜರಿ ಪೂರ್ವ ಸ್ಯಾಂಪಲ್‌ನಲ್ಲಿ 13 ಕೋವಿಡ್ ದೃಢಪಟ್ಟಿದೆ. 38 ಮಂದಿಯ ಸಂಪರ್ಕದ ಶೋಧ ನಡೆಯುತ್ತಿದೆ.

ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1709ಕ್ಕೆ ಏರಿಕೆಯಾಗಿದೆ, 7 ಮಂದಿ ಚಿಕಿತ್ಸೆ ಪೂರ್ಣಗೊಂಡು ಗುರುವಾರ ಬಿಡುಗಡೆಯಾಗಿದ್ದಾರೆ. ಮೃತರಾದವರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ವೆನ್ಲಾಕ್ ಆಸ್ಪತ್ರೆ ಐಸಿಯುನಲ್ಲಿ 7 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊಲೆ ಆರೋಪಿಗೆ ಪಾಸಿಟಿವ್

ನಗರದ ಕಾವೂರು ಠಾಣಾ ವ್ಯಾಪ್ತಿಯಲ್ಲಿ ಪತ್ನಿಯನ್ನು ಕಲ್ಲಿನ ಕೋರೆಗೆ ದೂಡಿ ಹಾಕಿ ಕೊಲೆಗೈದ ಆರೋಪಿ ಹಾಸನ ಮೂಲದ ಗಣೇಶ್‌ಗೆ ಗುರುವಾರ ಕರೊನಾ ಪಾಸಿಟಿವ್ ವರದಿ ಬಂದಿದೆ. ಆರೋಪಿ ಜು.1ರಂದು ಪತ್ನಿ ಶಾಂತಾ ಅವರನ್ನು ಬಜ್ಪೆ ಬಳಿಯ ಕರಂಬಾರು ಅಂತೋನಿಕಟ್ಟೆಗೆ ಕರೆದೊಯ್ದು ಕೊಲೆ ಮಾಡಿ ಮರುದಿನ ಅತ್ತೆಗೆ ಕರೆ ಮಾಡಿ ತಿಳಿಸಿದ್ದ. ಆರೋಪಿಯನ್ನು ಜು.5ರಂದು ಬಂಧಿಸಲಾಗಿತ್ತು. ಕಾವೂರು ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್, ಒಬ್ಬರು ಹೆಡ್‌ಕಾನ್‌ಸ್ಟೆಬಲ್, ಇಬ್ಬರು ಕಾನ್‌ಸ್ಟೆಬಲ್‌ಗಳು ಹೋಂ ಕ್ವಾರಂಟೈನ್‌ಗೆ ಒಳಪಟ್ಟಿದ್ದಾರೆ. ಕಾವೂರು ಠಾಣೆಯನ್ನು ಸೀಲ್‌ಡೌನ್ ಮಾಡಲಾಗಿದೆ.

ಸುಳ್ಯ ತಾಲೂಕು ಆಸ್ಪತ್ರೆ ಸೀಲ್‌ಡೌನ್

ಸುಳ್ಯ: ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಕರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆ ಸುಳ್ಯ ಸರ್ಕಾರಿ ತಾಲೂಕು ಆಸ್ಪತ್ರೆಯನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ. ಸ್ಯಾನಿಟೈಸ್ ಮಾಡಿ 48 ಗಂಟೆಗಳ ಬಳಿಕ (ಶನಿವಾರ) ಆಸ್ಪತ್ರೆ ತೆರೆಯಲಾಗುವುದು ಎಂದು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಕೆ.ವಿ.ಕರುಣಾಕರ ತಿಳಿಸಿದ್ದಾರೆ.

ಸುಳ್ಯ ಸರ್ಕಾರಿ ಆಸ್ಪತ್ರೆಯಿಂದ ಪರೀಕ್ಷೆಗೆ ಕಳುಹಿಸಿದ 32 ಮಾದರಿಯಲ್ಲಿ ಒಬ್ಬ ವೈದ್ಯ, ಒಬ್ಬರು ನರ್ಸಿಂಗ್ ಸಿಬ್ಬಂದಿ, 3 ಡಯಾಲಿಸಿಸ್ ವಿಭಾಗದ ಸಿಬ್ಬಂದಿ ಮತ್ತು ಒಬ್ಬರು ರೋಗಿ ಸಹಿತ 6 ಮಂದಿಗೆ ಪಾಸಿಟಿವ್ ಬಂದಿದೆ.

ಕೆಲದಿನಗಳ ಹಿಂದೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದ ರೋಗಿಗೆ ಮತ್ತು ಈ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನರ್ಸ್‌ಗೆ ಸೋಂಕು ತಗುಲಿತ್ತು. ತೀವ್ರ ನಿಗಾ ಘಟಕ ಮತ್ತು ಡಯಾಲಿಸಿಸ್ ಘಟಕವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಬಳಿಕ ಆಸ್ಪತ್ರೆ ವೈದ್ಯರ ಮತ್ತು ಸಿಬ್ಬಂದಿಯ ಗಂಟಲ ದ್ರವ ಮಾದರಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಈಗ ತುರ್ತು ಚಿಕಿತ್ಸಾ ವಿಭಾಗ ಸೇರಿ ಎಲ್ಲ ವಿಭಾಗವನ್ನೂ ಮುಚ್ಚಲಾಗಿದೆ. ಒಳರೋಗಿಗಳ ಚಿಕಿತ್ಸೆ ಮುಂದುವರಿಯಲಿದೆ. ಅವರಿಗೆ ಚಿಕಿತ್ಸೆ ನೀಡಲು ಒಬ್ಬರು ವೈದ್ಯರು ಮತ್ತು ಕೆಲ ನರ್ಸಿಂಗ್ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಶನಿವಾರದಿಂದ ಆಸ್ಪತ್ರೆ ಮತ್ತೆ ಕಾರ್ಯಾಚರಿಲಿದೆ ಎಂದು ಡಾ.ಕರುಣಾಕರ ತಿಳಿಸಿದ್ದಾರೆ.

ಬಂಟ್ವಾಳ 24, ಬೆಳ್ತಂಗಡಿ 6, ಪುತ್ತೂರು 2

ಬಂಟ್ವಾಳ/ಬೆಳ್ತಂಗಡಿ: ಬಂಟ್ವಾಳ ತಾಲೂಕಿನಲ್ಲಿ ಗುರುವಾರ 24 ಮಂದಿಗೆ ಕರೊನಾ ದೃಢಪಟ್ಟಿದೆ. ಪುರಸಭಾ ವ್ಯಾಪ್ತಿಯ ಕಸ್ಬಾ ಗ್ರಾಮದಲ್ಲಿ 12 ಜನರಿಗೆ ತಗುಲಿದ್ದು, ಇವರಲ್ಲಿ ಒಂದೇ ಕುಟುಂಬದ 9 ಮಂದಿ ಇದ್ದಾರೆ. ಸೋಂಕಿತರಲ್ಲಿ 1 ವರ್ಷದ ಗಂಡು ಮಗುವೂ ಇದೆ. ಮೂಡುನಡುಗೋಡಿನಲ್ಲಿ 2, ಪುದು 5, ಬಾಳ್ತಿಲ 1, ಕಳ್ಳಿಗೆ 1, ಸಜಿಪಮೂಡ 1, ಬೋಳಂತೂರು 1, ಸಂಗಬೆಟ್ಟು ಗ್ರಾಮದಲ್ಲಿ 1 ಪ್ರಕರಣ ಪತ್ತೆಯಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ 6 ಪಾಸಿಟಿವ್ ಬಂದಿದೆ. ಪಾರೆಂಕಿ ಗ್ರಾಮದ 36, 37 ವರ್ಷದ ವ್ಯಕ್ತಿ, 53 ವರ್ಷದ ಮಹಿಳೆ, ಮಚ್ಚಿನ ಗ್ರಾಮದ 36 ವರ್ಷದ ವ್ಯಕ್ತಿ, ಮರೋಡಿ ಗ್ರಾಮ 50 ವರ್ಷದ ವ್ಯಕ್ತಿ, ನಾರಾವಿಯ 39 ವರ್ಷದ ವ್ಯಕ್ತಿ ಸೋಂಕಿತರು. ಪುತ್ತೂರು ತಾಲೂಕಿನ ಇಬ್ಬರಿಗೆ ಪಾಸಿಟಿವ್ ಬಂದಿದೆ. ಬೊಳುವಾರು ಮಿಷನ್ ಗುಡ್ಡೆ ನಿವಾಸಿ 56 ವರ್ಷದ ಮಹಿಳೆ ಹಾಗೂ ಈಶ್ವರಮಂಗಲ ನಿವಾಸಿ 55 ವರ್ಷದ ವ್ಯಕ್ತಿ ಸೋಂಕಿತರು. ಮೂಲ್ಕಿ ಹೋಬಳಿಯಲ್ಲಿ ಕಿಲ್ಪಾಡಿ ಗ್ರಾಮದ 8 ವರ್ಷದ ಬಾಲಕಿ ಮತ್ತು ಕೊಕುಡೆ ಗ್ರಾಮದ 55 ವರ್ಷದ ವ್ಯಕ್ತಿಗೆ ಕರೊನಾ ದೃಢಪಟ್ಟಿದೆ.

ಕಾಸರಗೋಡಿನ 11 ಮಂದಿಗೆ ಸೋಂಕು

ಕಾಸರಗೋಡು/ಕುಂಬಳೆ: ಜಿಲ್ಲೆಯ 11 ಮಂದಿ ಸಹಿತ ಕೇರಳದಲ್ಲಿ 339 ಮಂದಿಗೆ ಗುರುವಾರ ಕೋವಿಡ್-19 ದೃಢಪಟ್ಟಿದೆ. ಇವರಲ್ಲಿ 117 ಮಂದಿ ವಿದೇಶದಿಂದ, ಇತರ ರಾಜ್ಯಗಳಿಂದ 74 ಮಂದಿ ಆಗಮಿಸಿದವರು. 133 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ.

ಪಟ್ಟಿ ಸೇರದ ಮೃತ: ಬುಧವಾರ ಮೊಗ್ರಾಲ್‌ಪುತ್ತೂರು ಕೋಟ್ಟಕುನ್ನು ನಿವಾಸಿ 55 ವರ್ಷದ ವ್ಯಕ್ತಿಯ ಸಾವು ಕರೊನಾದಿಂದ ಎಂದು ದೃಢೀಕರಿಸಲಾಗಿದ್ದರೂ ಆರೋಗ್ಯ ಇಲಾಖೆ ಕಾಸರಗೋಡಿನ ಪಟ್ಟಿಗೆ ಸೇರಿಸಿಲ್ಲ. ಅನಾರೋಗ್ಯಕ್ಕೀಡಾಗಿದ್ದ ಅವರನ್ನು ಹುಬ್ಬಳ್ಳಿಯಿಂದ ಕಾರಿನಲ್ಲಿ ಜುಲೈ 7ರಂದು ಮುಂಜಾನೆ ತಲಪಾಡಿ ಚೆಕ್‌ಪೋಸ್ಟ್‌ಗೆ ಕರೆ ತರಲಾಗಿತ್ತು. ದಾರಿಮಧ್ಯೆ ಜ್ವರ ಉಲ್ಬಣಗೊಂಡಿದ್ದು, ಜನರಲ್ ಆಸ್ಪತ್ರೆಗೆ ತರುತ್ತಿದ್ದಂತೆ ಮೃತಪಟ್ಟಿದ್ದರು. ಕಾಸರಗೋಡಿನಲ್ಲಿ ಚಿಕಿತ್ಸೆ ಪಡೆದಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net