

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಭಾನುವಾರ ಇದೇ ಮೊದಲ ಬಾರಿಗೆ ಕರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 100ರ ಗಡಿ ದಾಟಿದೆ. ಸಾರ್ವಕಾಲಿಕ ದಾಖಲೆಯಾಗಿ 147 ಕೋವಿಡ್-19 ಪ್ರಕರಣಗಳು ವರದಿಯಾಗಿವೆ.
ಈ ಮೂಲಕ ಜಿಲ್ಲೆಯ ಕೋವಿಡ್ ಪಟ್ಟಿಯಲ್ಲಿ ಇದುವರೆಗಿನ ಪ್ರಕರಣಗಳ ಸಂಖ್ಯೆ 1232ಕ್ಕೆ ಏರಿಕೆಯಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ 666 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಪ್ರಥಮ ಸಂಪರ್ಕದಿಂದ 36 ಮಂದಿಗೆ, ಇನ್‌ಫ್ಲುಯೆಂಜಾ ಮಾದರಿ ಕಾಯಿಲೆ ಲಕ್ಷಣ ಹೊಂದಿದ್ದ 40 ಮಂದಿಗೆ, ಉಸಿರಾಟದ ತೀವ್ರ ತೊಂದರೆ ಇದ್ದ ಇಬ್ಬರಿಗೆ ಕರೊನಾ ಪಾಸಿಟಿವ್ ಆಗಿದೆ. ಸೌದಿ ಅರೇಬಿಯಾ, ಮಸ್ಕತ್, ದುಬೈನಿಂದ ಮರಳಿದ 8, ಬೆಂಗಳೂರು, ಮುಂಬೈ, ಬಿಹಾರದಿಂದ ಬಂದ 7 ಮಂದಿಯ ವರದಿ ಪಾಸಿಟಿವ್ ಬಂದಿದೆ. ಮಲೇಷ್ಯಾದಿಂದ ಹಡಗಿನಲ್ಲಿ ಬಂದವರೂ ಇದರಲ್ಲಿದ್ದಾರೆ.
ರ‌್ಯಾಂಡಮ್ ಟೆಸ್ಟಿಂಗ್‌ನಲ್ಲಿ 48 ಮಂದಿಗೆ ಪಾಸಿಟಿವ್ ಸೋಂಕಿರುವುದು ಪತ್ತೆಯಾಗಿದೆ. ಕೋವಿಡ್ ಈಗ ಕ್ವಾರಂಟೈನ್‌ನಿಂದ ಹೊರಬಂದು ಸಮುದಾಯಕ್ಕೆ ಪ್ರಸರಣವಾಗಿದೆಯೇ ಎಂಬ ಸಂಶಯ ಇದರಿಂದಾಗಿ ವ್ಯಕ್ತವಾಗಿದೆ. ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿದ 37 ಮಂದಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಭಾನುವಾರ ಬಂದಿರುವ 378 ವರದಿಗಳಲ್ಲಿ 147 ಪಾಸಿಟಿವ್ ಆಗಿದ್ದರೆ ಇನ್ನೂ 576 ಸ್ಯಾಂಪಲ್ ವರದಿ ಬರಲು ಬಾಕಿ ಇದೆ.
ಐಸಿಯುನಲ್ಲಿ ರೋಗಿಗಳ ಸಂಖ್ಯೆ ಏರಿಕೆ
ಇದುವರೆಗೆ 2-3 ಮಂದಿಯಷ್ಟೇ ತೀವ್ರ ನಿಗಾ ಘಟಕದಲ್ಲಿ ಇರುತ್ತಿದ್ದರೆ ಭಾನುವಾರದ ವೇಳೆಗೆ ಸಂಖ್ಯೆ 10ಕ್ಕೆ ಏರಿದೆ. ಇದರಲ್ಲಿ ಒಬ್ಬ ಮಾತ್ರ 31 ವರ್ಷದ ಯುವಕನಾಗಿದ್ದು ನ್ಯುಮೋನಿಯಾ ಇದೆ. ಉಳಿದವರೆಲ್ಲರೂ ಐವತ್ತರ ಮೇಲ್ಪಟ್ಟವರಾಗಿದ್ದು ಅಧಿಕ ರಕ್ತದೊತ್ತಡ, ನ್ಯುಮೋನಿಯಾ, ಡಯಾಬಿಟಿಸ್, ಹೃದ್ರೋಗದಂತಹ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಮೂವರನ್ನು ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯ ಸರ್ಕಾರದ ಹೊಸ ಸುತ್ತೋಲೆಯಂತೆ ಕೋವಿಡ್ ಸೋಂಕಿತರು ಯಾವುದೇ ಲಕ್ಷಣಗಳನ್ನು ಹೊಂದಿಲ್ಲವಾದರೆ, ಮನೆಯಲ್ಲೇ ಚಿಕಿತ್ಸೆ ಪಡೆಯಬಹುದು. ಆತಂಕಕ್ಕೆ ಒಳಗಾಗದೆ ರೋಗಿಯ ಚಿಕಿತ್ಸೆಗೆ ನೆರವಾಗಲು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ವಿನಂತಿಸಲಾಗಿದೆ.
ಉಳ್ಳಾಲದಲ್ಲಿ 50ಕ್ಕೂ ಅಧಿಕ ಪ್ರಕರಣ
ಉಳ್ಳಾಲ: ಭಾನುವಾರ ಒಂದೇ ದಿನ ಉಳ್ಳಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 50ಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲೇ 48 ಮಂದಿಯಲ್ಲಿ ಸೋಂಕು ದೃಢಪಟ್ಟಿವೆ. ರ‌್ಯಾಂಡಂ ಟೆಸ್ಟ್‌ಗೊಳಪಟ್ಟ ಹೆಚ್ಚಿನವರಲ್ಲಿ ಸೋಂಕು ಪತ್ತೆಯಾಗಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ.
ಉಳ್ಳಾಲದಲ್ಲಿ ಸೋಂಕಿನಿಂದ ಇಬ್ಬರು ಮಹಿಳೆಯರು ಸಾವನ್ನಪ್ಪಿದ ಬಳಿಕ ಈವರೆಗೆ 160ಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಆದರೂ ಜನರು ಲಾಕ್‌ಡೌನ್ ದಿನವಾದ ಭಾನುವಾರವೂ ಮಾಸ್ಕ್ ಹಾಕದೆ ತಿರುಗಾಡುತ್ತಿರುವುದು, ನಗರ ಪ್ರದೇಶದಲ್ಲಿ ಬಹಳಷ್ಟು ಮಂದಿ ಪೊಲೀಸರ ಕಣ್ತಪ್ಪಿಸಿ ವಾಹನಗಳಲ್ಲಿ ಸಂಚರಿಸುತ್ತಿರುವುದು ಕಂಡು ಬಂತು. ಉಳ್ಳಾಲ ಜಂಕ್ಷನ್‌ನಲ್ಲಿ ಮೀನು ಮಾರಾಟ ನಡೆಯುತ್ತಿದ್ದ ದೃಶ್ಯಗಳೂ ಕಂಡು ಬಂದವು. ಕೊಣಾಜೆ ವ್ಯಾಪ್ತಿಯ ಒಂದೆರಡು ಕಡೆ ದಿನಸಿ ಮತ್ತು ಕೋಳಿ ಮಾಂಸದ ಅಂಗಡಿ ತೆರೆದಿದ್ದು, ಅಲ್ಲಿದ್ದವರನ್ನು ಪೊಲೀಸರು ವಶಕ್ಕೆ ಪಡೆದರು.
ಕಾಸರಗೋಡಿನ 28 ಮಂದಿಗೆ ಸೋಂಕು
ಕಾಸರಗೋಡು: ಜಿಲ್ಲೆಯ 28 ಮಂದಿ ಸೇರಿದಂತೆ ಕೇರಳದಲ್ಲಿ ಭಾನುವಾರ 225 ಮಂದಿಗೆ ಕೋವಿಡ್-19 ರೋಗಬಾಧೆ ತಗುಲಿದೆ. ಇವರಲ್ಲಿ 117 ಮಂದಿ ವಿದೇಶದಿಂದ, 57 ಮಂದಿ ಇತರ ರಾಜ್ಯಗಳಿಂದ ಆಗಮಿಸಿದವರಾಗಿದ್ದರೆ, 38 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. ಕಾಸರಗೋಡು ಜಿಲ್ಲೆಯಲ್ಲಿ ಸಂಪರ್ಕದಿಂದ ನಾಲ್ಕು ಮಂದಿಗೆ ರೋಗ ತಗುಲಿದೆ. ಇದೇ ಸಂದರ್ಭ ಸೋಂಕು ಬಾಧಿಸಿ ಚಿಕಿತ್ಸೆಯಲ್ಲಿದ್ದವರಲ್ಲಿ 126 ಮಂದಿ ಗುಣಮುಖರಾಗಿದ್ದಾರೆ.
ಆರೋಗ್ಯ ಇಲಾಖೆ ಮೇಲೆ ಹೆಚ್ಚಿದ ಒತ್ತಡ
ಮೂರು ತಿಂಗಳಿಂದ ಕರೊನಾ ನಿರ್ವಹಣೆಯ ಒತ್ತಡ ಎದುರಿಸುತ್ತಿರುವ ನಡುವೆಯೇ ಆರೋಗ್ಯ ಇಲಾಖೆ ಸಿಬ್ಬಂದಿಯಲ್ಲಿ ಹಲವು ಮಂದಿ ಕರೊನಾ ಸೋಂಕಿಗೊಳಗಾಗಿದ್ದಾರೆ.
ಅನೇಕರು ಅಧಿಕೃತ ಕ್ವಾರಂಟೈನ್ ಅಲ್ಲದಿದ್ದರೂ ರಜೆ ಪಡೆದು ವಿಶ್ರಾಂತಿಯಲ್ಲಿದ್ದಾರೆ. ಕೆಲವು ಮಂದಿ ಸಾಮಾನ್ಯ ಜ್ವರ, ಶೀತಕ್ಕೆ ತುತ್ತಾಗಿ ದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಕೋವಿಡ್ ಹೋರಾಟದಲ್ಲಿ ತೊಡಗಿರುವ ಜಿಲ್ಲಾ ಆರೋಗ್ಯಾಧಿಕಾರಿ, ತಾಲೂಕು ಆರೋಗ್ಯಾಧಿಕಾರಿ ಸಹಿತ ಐವರು ವೈದ್ಯರೇ ಕರೊನಾ ಪಾಸಿಟಿವ್ ಆಗಿದ್ದರು. ಜಿಲ್ಲಾ ಕೋವಿಡ್‌ಲ್ಯಾಬ್‌ನ ಪೆಥೋಲಜಿಸ್ಟ್ ಹಾಗೂ ಅವರ ಪತ್ನಿಗೂ ಸೋಂಕು ತಗುಲಿತ್ತು. ಜಿಲ್ಲಾ ಆರೋಗ್ಯ ಇಲಾಖೆಯನ್ನು ಸ್ಯಾನಿಟೈಸ್ ಮಾಡಲಾಗಿದೆ. ಬಹುತೇಕ ಸಿಬ್ಬಂದಿ ಆರೋಗ್ಯವಂತರಾಗಿದ್ದಾರೆ. ಅವರಿಗೆ ರೋಗಲಕ್ಷಣಗಳಿದ್ದರೆ ಮಾತ್ರವೇ ಗಂಟಲ ದ್ರವ ಪರೀಕ್ಷೆ ನಡೆಸಲಾಗುವುದು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ಕರೊನಾ ಪಾಸಿಟಿವ್ ಆಗಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಾನಕ್ಕೆ ಪ್ರಭಾರಿಯಾಗಿ ಕುಷ್ಠ ರೋಗ ನಿಯಂತ್ರಣಾಧಿಕಾರಿಯಾಗಿದ್ದ ಡಾ.ರತ್ನಾಕರ್‌ಅವರನ್ನು ನಿಯೋಜನೆ ಮಾಡಲಾಗಿದೆ.
ಕರೊನಾ ಕೇರ್ ಸೆಂಟರ್‌ಗಳನ್ನು ನಿರ್ವಹಣೆಗೆ ಆಯುಷ್‌ವಿಭಾಗದ ವತಿಯಿಂದ ಖಾಸಗಿ ಆಯುರ್ವೇದ ಆಸ್ಪತ್ರೆ ವೈದ್ಯರನ್ನು ಪಡೆಯುವುದಕ್ಕೂ ಜಿಲ್ಲಾಡಳಿತ ತೀರ್ಮಾನಿಸಿದೆ. ಜಿಲ್ಲಾ ಆರೋಗ್ಯಾಧಿಕಾರಿಯವರು ಪಾಸಿಟಿವ್ ಆಗಿದ್ದರೂ ಅವರ ಸಂಪರ್ಕದಲ್ಲಿದ್ದ ಬಹುತೇಕ ಮಂದಿಗೆ ನೆಗೆಟಿವ್ ಬಂದಿದೆ. ಇನ್ನೊಂದು ಬಾರಿ ಪರೀಕ್ಷೆಯಲ್ಲಿ ನೆಗೆಟಿವ್ ಆದರೆ ಸೇವೆ ಮುಂದುವರಿಸಬಹುದು ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.
ಇಂದಿನಿಂದ ಹಾಜರು: ಸದ್ಯ ವಿಶ್ರಾಂತಿ ಪಡೆಯುತ್ತಿರುವ ಅನೇಕ ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರೂ ಕೋವಿಡ್ ಲಕ್ಷಣಗಳಿಲ್ಲದಿದ್ದರೆ ಸೋಮವಾರದಿಂದ ಸೇವೆಗೆ ಹಾಜರಾಗಲಿದ್ದಾರೆ.
ಹಲವು ಕಚೇರಿ ಸ್ಯಾನಿಟೈಸ್
ಮಂಗಳೂರು: ದ.ಕ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಸಹಿತ ಹಲವು ಸರ್ಕಾರಿ ಕಚೇರಿಗಳನ್ನು ಭಾನುವಾರ ರಾಸಾಯನಿಕ ಸಿಂಪಡಣೆ ಮೂಲಕ ಸೋಂಕುಮುಕ್ತ ಮಾಡಲಾಯಿತು.
20 ಮೈಕ್ರಾನ್‌ನ ದ್ರವಬಿಂದುಗಳನ್ನು ಸಿಂಪಡಿಸಬಲ್ಲ ಅಮೆರಿಕನ್ ಮಷಿನ್ ಬಳಸಿ ಈ ಸ್ಯಾನಿಟೈಸಿಂಗ್ ಪ್ರಕ್ರಿಯೆ ನಡೆಯಿತು. ಮಂಗಳೂರಿನ ಸುಮಂಗಲಾ ಆಗ್ರೋ ಸಪ್ಲೈಸ್ ವತಿಯಿಂದ ಉಚಿತವಾಗಿ ದ.ಕ ಜಿಲ್ಲಾ ಆರೋಗ್ಯ ಇಲಾಖೆ ಕಚೇರಿ, ಪೊಲೀಸ್ ಆಯುಕ್ತರ ಕಚೇರಿ, ಜಿಲ್ಲಾ ಕೃಷಿ ಇಲಾಖೆ, ಲೇಡಿಗೋಶನ್ ಆಸ್ಪತ್ರೆ ಮುಂತಾದ ಕಡೆ ಸಾಮಾಜಿಕ ಜವಾಬ್ದಾರಿ ಚಟುವಟಿಕೆಯ ಭಾಗವಾಗಿ ಸ್ಯಾನಿಟೈಸ್ ಮಾಡಲಾಗಿದೆ.
ಕುಟುಂಬದ ಮೂವರಲ್ಲಿ ಸೋಂಕು
ವಿಟ್ಲ: ಕಸಬಾ ಗ್ರಾಮದ ಒಕ್ಕೆತ್ತೂರು ನಿವಾಸಿ 31 ವರ್ಷದ ಯುವಕನ 50 ವರ್ಷದ ಸಹೋದರನಿಗೂ ಕರೊನಾ ಸೋಂಕು ದೃಢಪಟ್ಟಿದೆ. ಯುವಕನ ಪತ್ನಿಗೂ ಪಾಸಿಟಿವ್ ಪತ್ತೆಯಾಗಿರುವ ಕಾರಣ, ಒಂದೇ ಕುಟುಂಬದ ಮೂವರು ಸೋಂಕಿಗೊಳಗಾದಂತಾಗಿದೆ. ಹೀಗಾಗಿ ಮನೆಯನ್ನು ವಿಟ್ಲ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸೀಲ್‌ಡೌನ್ ಮಾಡಿದ್ದಾರೆ. ಒಕ್ಕೆತ್ತೂರು ನಿವಾಸಿ ಯುವಕ ಮೂರು ತಿಂಗಳ ಹಿಂದೆ ವಿದೇಶದಿಂದ ಆಗಮಿಸಿದ್ದ.
ಮೂಲ್ಕಿಯಲ್ಲಿ ಮತ್ತೆರಡು ಕೋವಿಡ್ ಪ್ರಕರಣ
ಮೂಲ್ಕಿ: ಅಂಗರಗುಡ್ಡೆ, ಬಪ್ಪನಾಡು ಪ್ರದೇಶದಲ್ಲಿ ಎರಡು ಕೋವಿಡ್ ಪ್ರಕರಣಗಳು ಭಾನುವಾರ ಬೆಳಕಿಗೆ ಬಂದಿದೆ. ಬಪ್ಪನಾಡಿನ 37 ವರ್ಷದ ಮಹಿಳೆ, ಅಂಗರಗುಡ್ಡೆಯ 60ರ ಹರೆಯದ ಮಹಿಳೆಗೆ ಕರೊನಾ ಸೋಂಕು ತಗುಲಿದೆ. ಬೊಳ್ಳೂರು ಪ್ರದೇಶದ ಸುತ್ತಮುತ್ತ ಹಾಗೂ ಬಪ್ಪನಾಡಿನ ವಸತಿ ಸಮುಚ್ಚಯದ ಸುತ್ತಮುತ್ತ ಸೀಲ್‌ಡೌನ್‌ಗೆ ಕ್ರಮ ಕೈಗೊಳ್ಳಲಾಗಿದೆ.
ಕೊಲ್ಲಿ ರಾಷ್ಟ್ರಗಳಿಂದ ಇನ್ನೆರಡು ವಿಮಾನ
ಮಂಗಳೂರು: ಶಾರ್ಜಾ ಮತ್ತು ದುಬೈಯಲ್ಲಿದ್ದ ಅನಿವಾಸಿ ಕನ್ನಡಿರನ್ನು ಹೊತ್ತ ಎರಡು ವಿಮಾನಗಳು ಭಾನುವಾರ ಮಂಗಳೂರು ವಿಮಾನ ನಿಲ್ದಾಣ ತಲುಪಿವೆ. ವಂದೇ ಭಾರತ್ ಯೋಜನೆಯಡಿ ಸಾಯಂಕಾಲ ಶಾರ್ಜಾದಿಂದ ಆಗಮಿಸಿದ ಏರ್ ಇಂಡಿಯಾ ವಿಮಾನದಲ್ಲಿ 181 ಪ್ರಯಾಣಿಕರಿದ್ದರು. ಮಧ್ಯಾಹ್ನ ದುಬೈಯಿಂದ ಏರ್ ಅರೇಬಿಯಾ ಚಾರ್ಟರ್ ವಿಮಾನ ಬಂದಿತ್ತು. ದಕ್ಷಿಣ ಕನ್ನಡ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಪ್ರವೀಣ್ ನಗರಕ್ಕೆ ಆಗಮಿಸಿದ ಪ್ರಯಾಣಿಕರ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡಿದ್ದರು.
ಕರೊನಾ ಸೋಂಕಿತ ಪರಾರಿ
ಮಂಗಳೂರು: ನಗರದ ಕೋವಿಡ್ ಆಸ್ಪತ್ರೆಯಿಂದ(ವೆನ್ಲಾಕ್) ಪಾಸಿಟಿವ್ ಇದ್ದ ರೋಗಿಯೊಬ್ಬರು ಭಾನುವಾರ ತಪ್ಪಿಸಿಕೊಂಡಿದ್ದಾರೆ.
ಮೂಲತಃ ಪುತ್ತೂರು ದರ್ಬೆ ನಿವಾಸಿ, ಕೆಲವು ವರ್ಷಗಳಿಂದ ಮಂಗಳೂರಿನಲ್ಲಿ ವಾಸವಿದ್ದ ದೇವರಾಜ್ (18) ತಪ್ಪಿಸಿಕೊಂಡ ಯುವಕ.
1ರಂದು ದೇವರಾಜ್ ಸ್ವತಃ ವೆನ್ಲಾಕ್ ಆಸ್ಪತ್ರೆಗೆ ತೆರಳಿ ತಪಾಸಣೆಗೆ ಒಳಗಾಗಿದ್ದರು. ಭಾನುವಾರ ಪಾಸಿಟಿವ್ ವರದಿ ಬಂದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾಯಂಕಾಲ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದಾರೆ. ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತ್ತೆಯಾದರೆ ಪಾಂಡೇಶ್ವರ ಪೊಲೀಸ್ ಠಾಣೆಗೆ(0824-2220518) ಅಥವಾ ಪೊಲೀಸ್ ಕಂಟ್ರೋಲ್ ರೂಂ (ನಂ.100/ 0824-2220800)ಗೆ ಮಾಹಿತಿ ನೀಡಲು ಕೋರಲಾಗಿದೆ.