

ಮಂಗಳೂರು/ಉಡುಪಿ: ದ.ಕ ಜಿಲ್ಲೆಯಲ್ಲಿ ಸೋಮವಾರ ಕೋವಿಡ್ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು 144 ಮಂದಿ ಸೋಂಕಿತರಾದ್ದಾರೆ.
ಇದರಲ್ಲಿ 77 ಮಂದಿಗೆ ರೋಗ ಲಕ್ಷಣವಿದ್ದರೆ 67 ಮಂದಿ ಲಕ್ಷಣ ರಹಿತರು. ಸೋಂಕಿತರಲ್ಲಿ 88 ಮಂದಿ ಮಂಗಳೂರಿನವರಾಗಿದ್ದು 18 ಮಂದಿ ಬಂಟ್ವಾಳ, 8 ಪುತ್ತೂರು, 1 ಸುಳ್ಯ, 10 ಬೆಳ್ತಂಗಡಿ ಮತ್ತು ಹೊರ ಜಿಲ್ಲೆಯ 19 ಮಂದಿ ಇದ್ದಾರೆ. ಸೋಮವಾರ 8 ಮಂದಿ ಮೃತರಾಗಿದ್ದು, ಮಂಗಳೂರಿನ ಮೂವರು, ಬಂಟ್ವಾಳ, ಪುತ್ತೂರಿನ ತಲಾ ಒಬ್ಬರು, ಹೊರ ಜಿಲ್ಲೆಯ ಮೂವರು ಸೇರಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳು 9 ಸಾವಿರದ ಹೊಸ್ತಿಲು ದಾಟಿ 9022ಕ್ಕೇರಿದ್ದು, ಸಕ್ರಿಯ ಪ್ರಕರಣಗಳು 2091 ತಲುಪಿವೆ. ಒಟ್ಟು ಮೃತರ ಸಂಖ್ಯೆ 277ಕ್ಕೇರಿದೆ. ಸೋಮವಾರ 209 ಮಂದಿ ಬಿಡುಗಡೆಯಾಗಿದ್ದಾರೆ. ಇದರಲ್ಲಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾದ 100, ಹೋಮ್ ಐಸೊಲೇಶನ್‌ನ 96 ಹಾಗೂ ಕೋವಿಡ್ ಕೇರ್ ಕೇಂದ್ರಗಳಲ್ಲಿನ 13 ಮಂದಿ ಸೇರಿದ್ದಾರೆ. ಬಿಡುಗಡೆಯಾದವರ ಒಟ್ಟು ಸಂಖ್ಯೆ 6654ಕ್ಕೇರಿದೆ.
ಉಡುಪಿಯಲ್ಲಿ 270 ಮಂದಿಗೆ ಸೋಂಕು: ಜಿಲ್ಲೆಯಲ್ಲಿ ಸೋಮವಾರ 270 ಮಂದಿಗೆ ಕರೊನಾ ಸೋಂಕು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 8,238ಕ್ಕೆ ಏರಿಕೆಯಾಗಿದೆ. ಹೋಂ ಮತ್ತು ಆಸ್ಪತ್ರೆ ಐಸೊಲೇಶನ್‌ನಿಂದ 269 ಮಂದಿ ಗುಣವಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ 5,630 ಮಂದಿ ಸೋಂಕಿನಿಂದ ಮುಕ್ತಿ ಪಡೆದಿದ್ದಾರೆ. ಸೋಮವಾರ 376 ಮಂದಿಯ ಗಂಟಲ ದ್ರವ ಮಾದರಿಯನ್ನು ಸಂಗ್ರಹಿಸಲಾಗಿದೆ. ಇನ್ನೂ 870 ಮಂದಿಯ ವರದಿ ಬಾಕಿ ಇದೆ. 2,537 ಸಕ್ರಿಯ ಪ್ರಕರಣಗಳಿವೆ.
ಕೋವಿಡ್-19 ಕಂಟ್ರೋಲ್ ರೂಂನಿಂದ ಪಾಸಿಟಿವ್ ಅಥವಾ ನೆಗೆಟಿವ್ ಮಾಹಿತಿ ನೀಡಲು ದೂರವಾಣಿ ಕರೆ ಬಂದಾಗ ಸಂಬಂಧಪಟ್ಟವರು ಸರಿಯಾಗಿ ಸಹಕಾರ ನೀಡಬೇಕು. ಕಂಟ್ರೋಲ್ ರೂಂ ಸಿಬ್ಬಂದಿ, ಅಧಿಕಾರಿಗಳೊಂದಿಗೆ ಕೆಲವರು ಸರಿಯಾದ ರೀತಿಯಲ್ಲಿ ವರ್ತಿಸುತ್ತಿಲ್ಲ. ಕರೆ ಮಾಡಿದಾಗ ಕೋವಿಡ್ ಪಾಸಿಟಿವ್ ಇದ್ದವರು ಹೋಂ ಅಥವಾ ಆಸ್ಪತ್ರೆ ಐಸೊಲೇಶನ್ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು. ತಕ್ಷಣ ವಾಹನ ಕಳುಹಿಸಲಾಗುವುದು. ಸಹಕಾರ ನೀಡದಿದ್ದರೆ ಪ್ರಕರಣ ದಾಖಲಿಸುತ್ತೇವೆ.
-ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ
ಕಾಸರಗೋಡಿನ 97 ಮಂದಿಗೆ ದೃಢ
ಕಾಸರಗೋಡು: ಜಿಲ್ಲೆಯ 97 ಮಂದಿ ಸಹಿತ ಕೇರಳದಲ್ಲಿ ಸೋಮವಾರ 1,725 ಮಂದಿಯಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ. ಜಿಲ್ಲೆಯ ನಾಲ್ವರು ಒಳಗೊಂಡಂತೆ ರಾಜ್ಯದಲ್ಲಿ ಕೋವಿಡ್ ಬಾಧೆಯಿಂದ 13 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಕೇರಳದಲ್ಲಿ ಕೋವಿಡ್ ಬಾಧಿಸಿ ಮೃತಪಟ್ಟವರ ಸಂಖ್ಯೆ 169ಕ್ಕೇರಿದೆ. ರೋಗ ಬಾಧಿತರಲ್ಲಿ 45 ಮಂದಿ ವಿದೇಶದಿಂದ ಹಾಗೂ 75 ಮಂದಿ ಇತರ ರಾಜ್ಯಗಳಿಂದ ಆಗಮಿಸಿದವರು. 1,572 ಮಂದಿಗೆ ಸಂಪರ್ಕದಿಂದ ರೋಗ ಬಂದಿದ್ದರೆ, 94 ಮಂದಿಯ ಸೋಂಕು ಮೂಲ ಪತ್ತೆ ಆಗಿಲ್ಲ.