

ಹುಬ್ಬಳ್ಳಿ : ಸರಿಯಾಗಿ ನಿರ್ವಹಣೆ ಮಾಡದ ಕಾರಣಕ್ಕೆ ವಾಕರಸಾ ಸಂಸ್ಥೆಯ ಬಸ್ಗಳನ್ನು ಡಕೋಟಾ ಎನ್ನುವುದುಂಟು. ಗುಜರಿಗೆ ಸೇರುವಂತದ್ದಾದರೂ ಇಂಥ ಬಸ್ಗಳು ಈಗಲೂ ರಸ್ತೆಗಿಳಿಯುತ್ತಿವೆ. ಈ ಮಧ್ಯೆ ಬಹುನಿರೀಕ್ಷೆಯಿಂದ ಆರಂಭವಾದ ಚಿಗರಿ (ಬಿಆರ್ಟಿಎಸ್) ಬಸ್ಗಳೂ ಪಾಳೆ ಹಚ್ಚಿ ಗುಜರಿಯಾಗಿ ಇವೂ ಡಕೋಟಾ ಸಾಲಿಗೆ ಸೇರಲಾರಂಭಿಸಿವೆ.
ಸಕಾಲಕ್ಕೆ ಬಿಡಿಭಾಗಗಳು ಸಿಗದಾಗಿ ಚಲಿಸದೆ ನಿಂತಿರುವ ಬಿಆರ್ಟಿಎಸ್ ಬಸ್ಗಳ ಸಾಲಿಗೆ ಇಲ್ಲಿನ ಭೈರಿದೇವರಕೊಪ್ಪದಲ್ಲಿ ಭಾನುವಾರ ಅಪಘಾತಗೊಂಡ ಮತ್ತೊಂದು ಬಸ್ ಸೇರಿದಂತಾಗಿದೆ.
ಹುಬ್ಬಳ್ಳಿಯಿಂದ ಧಾರವಾಡಕ್ಕೆ ಚಲಿಸುತ್ತಿದ್ದ ಬಿಆರ್ಟಿಎಸ್ ಬಸ್, ಸ್ಟೇರಿಂಗ್ ಲಾಕ್ ಆಗಿದ್ದರಿಂದ ಕಾರಿಡಾರ್ ಬಿಟ್ಟು ರಸ್ತೆ ಪಕ್ಕದ ವಿದ್ಯುತ್ ಕಂಬ ಹಾಗೂ ಕಟ್ಟಡವೊಂದಕ್ಕೆ ಗುದ್ದಿದೆ. ಈಗಾಗಲೇ ಬಿಆರ್ಟಿಎಸ್ನ 6-7 ಬಸ್ಗಳು ರಿಪೇರಿಯಿಂದಾಗಿ ಡಿಪೋದಲ್ಲಿ ಸಾಲುಗಟ್ಟಿ ನಿಂತಿವೆ. ಅವುಗಳ ಸಾಲಿಗೆ ಮತ್ತೊಂದು ಅಪಘಾತಗೊಂಡ ಬಸ್ ಸೇರಿದೆ.
ಹುಬ್ಬಳ್ಳಿ-ಧಾರವಾಡ ಮಧ್ಯೆ ಸಂಚರಿಸುವ ಬಿಆರ್ಟಿಎಸ್ ಬಸ್ಗಳನ್ನು ನಿರ್ವಿುಸಿದ್ದು ಚೀನಾ ಮೂಲದ ‘ಯುಡಿ’ ಎಂಬ ಕಂಪನಿ. ಹೀಗಾಗಿ, ಈ ಬಸ್ಗಳ ಬಿಡಿಭಾಗಗಳು ಸಿಗುವುದು ಕಷ್ಟಸಾಧ್ಯ. ಹೀಗಾಗಿ ಬಿಆರ್ಟಿಎಸ್ ಡಕೋಟಾ ಆಗಲಾರಂಭಿಸಿವೆ. ಜನರ ಪ್ರಾಣ ತೆಗೆಯಲಾರಂಭಿಸಿವೆ.
ಈಗಾಗಲೇ ಸಂಚರಿಸುತ್ತಿರುವ ಅನೇಕ ಬಸ್ಗಳಲ್ಲಿ ಹವಾನಿಯಂತ್ರಿತ ವ್ಯವಸ್ಥೆ (ಎಸಿ) ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರುಗಳು ಪ್ರಯಾಣಿಕರಿಂದ ಕೇಳಿಬರುತ್ತಿವೆ. ಅನೇಕ ಬಾರಿ ಬಸ್ನ ಬಾಗಿಲು ಸರಿಯಾಗಿ ತೆಗೆದುಕೊಳ್ಳುವುದಿಲ್ಲ ಹಾಗೂ ಮುಚ್ಚಿಕೊಳ್ಳುವುದಿಲ್ಲ. ಇವುಗಳನ್ನೆಲ್ಲ ದುರಸ್ತಿ ಮಾಡಬೇಕೆಂದರೆ ಸಕಾಲಕ್ಕೆ ಬಿಡಿಭಾಗಗಳು ಸಿಗುತ್ತಿಲ್ಲ ಎಂಬ ಅಸಹಾಯಕತೆ ಅಧಿಕಾರಿಗಳದು.
ಬಸ್ಗಳ ನಿರ್ವಹಣೆಯನ್ನು ಬಿಆರ್ಟಿಎಸ್ ಅಧಿಕಾರಿಗಳು ಮಾಡುತ್ತಾರೆ. ಆದರೆ, ಸಂಚಾರ ಮತ್ತು ಸಿಬ್ಬಂದಿ ನಿರ್ವಹಣೆಯ ಜವಾಬ್ದಾರಿ ಸಾರಿಗೆ ಸಂಸ್ಥೆಯದು.
ಈಗಾಗಲೇ ಕೆಟ್ಟು ನಿಂತಿರುವ ಬಸ್ಗಳ ದುರಸ್ತಿಗೆ ಸಾರಿಗೆ ಸಂಸ್ಥೆಯು ಬಿಆರ್ಟಿಎಸ್ಗೆ ಹಣ ಪಾವತಿಸಿದ್ದರೂ, ಬಿಡಿಭಾಗಗಳ ಕೊರತೆಯಿಂದಾಗಿ ಅವುಗಳ ದುರಸ್ತಿ ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಸರಿಯಾದ ಕಾಲಕ್ಕೆ ಬಸ್ಗಳ ಬಿಡಿಭಾಗಗಳ ಬದಲಾವಣೆ ಮಾಡಿ, ಸುಸ್ಥಿತಿಯಲ್ಲಿ ಇಟ್ಟರೆ ಅಪಘಾತಗಳ ಸಂಖ್ಯೆಯೂ ಕಡಿಮೆಯಾಗುತ್ತದೆ. ಬಿಡಿಭಾಗಗಳು ಸಿಗದ ಕಾರಣ ಇರುವ ಸ್ಥಿತಿಯಲ್ಲಿಯೇ ಬಸ್ಗಳನ್ನು ಓಡಿಸುವ ಅನಿವಾರ್ಯತೆ ಎದುರಾಗುತ್ತದೆ.
ಅಗತ್ಯ ಇರುವಷ್ಟು ಬಿಡಿಭಾಗಗಳನ್ನು ಸಂಗ್ರಹ ಮಾಡಿಕೊಳ್ಳದೇ ಇರುವ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಬಿಆರ್ಟಿಎಸ್ ಬಸ್ಗಳಲ್ಲಿ ಓಡಾಡುವಂತಾಗಿದೆ. ಬಿಆರ್ಟಿಎಸ್ ವಿರುದ್ಧ ಈಗಾಗಲೇ ಹಲವಾರು ದೂರುಗಳು ಕೇಳಿಬರುತ್ತಿದ್ದು, ಬಿಡಿಭಾಗಗಳ ಕೊರತೆ ಪ್ರಯಾಣಿಕರನ್ನು ಮತ್ತಷ್ಟು ಆತಂಕಕ್ಕೆ ತಳ್ಳಿದೆ.