ಸಹ್ಯಾದ್ರಿ ತಪ್ಪಲಿನಲ್ಲಿರುವ ಡಾಕಿನಿ ಭೀಮಾಶಂಕರ ಜ್ಯೋತಿರ್ಲಿಂಗ ಕ್ಷೇತ್ರ

Bhimashankara
Published on

ಪ್ರಶಾಂತ ರಿಪ್ಪನ್‌ಪೇಟೆ, ಬೆಂಗಳೂರು : ‘‘ಸೌರಾಷ್ಟ್ರೇ ಸೋಮನಾಥಂಚ ಶ್ರೀಶೈಲೇ ಮಲ್ಲಿಕಾರ್ಜುನಮ್, ಉಜ್ಜಯಿನ್ಯಾಂ ಮಹಾಕಾಲಂ ಓಂಕಾರೇತ್ವಮಾಮಲೇಶ್ವರಮ್, ಪರ್ಲ್ಯಾಂ ವೈದ್ಯನಾಥಂಚ ಢಾಕಿನ್ಯಾಂ ಭೀಮ ಶಂಕರಮ್,

ಸೇತುಬಂಧೇತು ರಾಮೇಶಂ ನಾಗೇಶಂ ದಾರುಕಾವನೇ, ವಾರಣಾಶ್ಯಾಂತು ವಿಶ್ವೇಶಂ ತ್ರಯಂಬಕಂ ಗೌತಮೀತಟೇ, ಹಿಮಾಲಯೇತು ಕೇದಾರಂ ಘೃಷ್ಣೇಶಂತು ವಿಶಾಲಕೇ.

ಏತಾನಿ ಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ, ಸಪ್ತ ಜನ್ಮ ಕೃತಂ ಪಾಪಂ ಸ್ಮರಣೇನ ವಿನಶ್ಯತಿ.’

ಸಪ್ತ ಜನ್ಮಗಳ ಪಾಪಗಳನ್ನು ನಾಶ ಮಾಡುವ ಶಕ್ತಿ ಇರುವ ದ್ವಾದಶ ಜ್ಯೋತಿರ್ಲಿಂಗಗಳು ಭಾರತದ ಧಾರ್ಮಿಕ ಸಂಸ್ಕೃತಿಯ ಹೆಗ್ಗುರುತುಗಳು. ಜಾತಿ, ಮತ, ಭಾಷೆ, ಪ್ರದೇಶ ಎಂಬ ಎಲ್ಲ ಭೇದಗಳನ್ನು ಬದಿಗೊತ್ತಿ ಸರ್ವರಲ್ಲಿ ಸಾಮರಸ್ಯ ಮತ್ತು ಸಮನ್ವಯವನ್ನು ಸಾಧಿಸುವಲ್ಲಿ ಜ್ಯೋತಿರ್ಲಿಂಗ ಕ್ಷೇತ್ರಗಳು ಮಹತ್ವದ ಪಾತ್ರ ವಹಿಸುತ್ತಿವೆ. ಮಹಾ ಶಿವರಾತ್ರಿಯ ಪರ್ವಕಾಲದಲ್ಲಿ ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಆರನೇಯದಾದ ಶ್ರೀ ಡಾಕಿನಿ ಭೀಮಾಶಂಕರ ಕ್ಷೇತ್ರದ ಕುರಿತು ಒಂದು ಸಂಕ್ಷಿಪ್ತ ಚಿತ್ರಣ ಇಲ್ಲಿದೆ ನೋಡಿ.

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಖೇಡ್ ತಾಲೂಕಿನಲ್ಲಿರುವ ಡಾಕಿನಿ ಭೀಮಾಶಂಕರ ಕ್ಷೇತ್ರವು 6ನೇ ಜ್ಯೋತಿರ್ಲಿಂಗ. ಸುತ್ತಲೂ ಸಮೃದ್ಧವಾದ ಅರಣ್ಯವಿದ್ದು, ಸಹ್ಯಾದ್ರಿ ಬೆಟ್ಟಗಳ ಸಾಲಿನ ನಡುವೆ ಜ್ಯೋತಿರ್ಲಿಂಗ ಕ್ಷೇತ್ರವು ಶೋಭಿಸುತ್ತಿದೆ. ಪುರಾಣಗಳ ಪ್ರಕಾರ ತ್ರಿಪುರನೆಂಬ ರಾಕ್ಷಸನು ಬ್ರಹ್ಮನಿಂದ ಪಡೆದ ವರದಿಂದ ಇಂದ್ರ ಮೊದಲಾದ ದೇವತೆಗಳನ್ನು ಸೋಲಿಸಿ ವಿಜಯಯೋತ್ಸವದಿಂದ ಮುನ್ನುಗ್ಗುತ್ತಾನೆ. ಆಗ ಇಂದ್ರನು ತಪಸ್ಸು ಮಾಡಿ ಶಿವನಲ್ಲಿ ತ್ರಿಪುರನನ್ನು ಸೋಲಿಸುವಂತೆ ಬೇಡುತ್ತಾನೆ. ಆಗ ಶಿವ ಭೀಮಸ್ವರೂಪದಲ್ಲಿ ಅವತರಿಸಿ ಅಸುರನನ್ನು ಸಂಹರಿಸಿ ಭೀಮಾಶಂಕರ ಹೆಸರಿನ ಜ್ಯೋತಿರ್ಲಿಂಗ ಸ್ವರೂಪದಲ್ಲಿ ನೆಲೆಸಿದ್ದಾನೆ. ಯುದ್ಧ ಸಮಯದಲ್ಲಿ ಶಿವನ ದೇಹದಿಂದ ಬಸಿದ ಬೆವರೇ ಭೀಮ ನದಿಯ ಉಗಮಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತದೆ.

ಮಹಾರಾಷ್ಟ್ರದ ಪ್ರಸಿದ್ಧ ಸಂತ ಜ್ಞಾನೇಶ್ವರರು ಭೀಮಾಶಂಕರ ಕ್ಷೇತ್ರದಲ್ಲಿ ಪೂಜೆ ಮಾಡಿರುವ ಉಲ್ಲೇಖಗಳಿದ್ದು, ಶಿವಾಜಿ, ನಾನಾ ಡ್ನವಿಸ್ ಮತ್ತಿತರ ಅನೇಕ ಹಿಂದೂ ರಾಜರು ಕ್ಷೇತ್ರಕ್ಕೆ ವಿವಿಧ ದಾನ-ದತ್ತಿಗಳನ್ನು ನೀಡಿರುವ ಉಲ್ಲೇಖಗಳಿವೆ.

ಪುಣೆ ವಿಮಾನ ನಿಲ್ದಾಣದಿಂದ 110ಕಿ.ಮೀ. ದೂರದಲ್ಲಿರುವ ಭೀಮಾಶಂಕರ ಕ್ಷೇತ್ರಕ್ಕೆ ಉತ್ತಮ ರಸ್ತೆ ಮಾರ್ಗವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net