ಹೆಚ್ಚುತ್ತಿರುವ ಹಿಂದುಗಳ ಮೇಲಿನ ದಬ್ಬಾಳಿಕೆ, ಸಮಾಜ ಜಾಗೃತಿ ಅಗತ್ಯ, ಶಾಸಕ ಮಹೇಶ ಟೆಂಗಿನಕಾಯಿ

IMG-20250123-WA0003-1.jpg
Published on

ಹುಬ್ಬಳ್ಳಿ: ಪ್ರಸ್ತುತ ಹಿಂದು ಸಮಾಜದ ಮೇಲೆ ದಬ್ಬಾಳಿಕೆ ಹೆಚ್ಚು ನಡೆಯುತ್ತಿದ್ದು, ಸಮಾಜವನ್ನು ಕೆಟ್ಟ ದೃಷ್ಟಿಯಿಂದ ನೋಡುವುದು ಕಂಡು ಬರುತ್ತಿದೆ. ಈ ದಿಸೆಯಲ್ಲಿ ಸಮಾಜ ಜಾಗೃತಿ ವಹಿಸಬೇಕಾದ ಅಗತ್ಯ ಇದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಇಲ್ಲಿಯ ದೈವಜ್ಞ ಭವನದಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದ ವತಿಯಿಂದ ಬುಧವಾರ ಏರ್ಪಡಿಸಿದ್ದ ದೈವಜ್ಞ ಯುವ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜ ಒಗ್ಗೂಡಿಸುವ ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ಶ್ರದ್ಧೆಯಿಂದ ಕಾಯಕದಲ್ಲಿ ತೊಡಗಿರುವ ದೈವಜ್ಞ ಸಮಾಜ ಸಂಟನೆಗೆ ಒತ್ತು ನೀಡಿದೆ. ಇದೇ ರೀತಿ ಎಲ್ಲ ಸಮಾಜಗಳು ಒಗ್ಗೂಡಬೇಕು ಎಂದು ಹೇಳಿದರು.

ಸಮಾಜದಲ್ಲಿ ಚಿಂತನ ಮಂಥನಗಳು ಆಗಬೇಕು. ಲವ್ ಜಿಹಾದ್ ಬಗ್ಗೆ ಯುವತಿಯರು ಅರಿವು ಹೊಂದಬೇಕು. ಯಾವುದೋ ಮೋಹದಲ್ಲಿ ಬಿದ್ದು ಹಿಂದು ಯುವತಿಯರು ಜೀವನ ಹಾಳು ಮಾಡಿಕೊಳ್ಳಬಾರದು. ಇಂತಹ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆದುಕೊಂಡು ಬಂದು ಮುಂದಿನ ಪೀಳಿಗೆಗೆ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ತಿಳಿವಳಿಕೆ ನೀಡಬೇಕು ಎಂದು ಸಲಹೆ ನೀಡಿದರು.

ಸಮಾಜದ ಶಾಲೆ ಕಟ್ಟಡಕ್ಕೆ ಶಾಸಕರ ನಿಧಿಯಿಂದ 10 ಲಕ್ಷ ರೂ. ಒದಗಿಸಲಾಗುವುದು. ಸಮಾಜದ ಬೇಡಿಕೆಯಂತೆ ಎರಡು ಕೋಟಿ ರೂ. ಸರ್ಕಾರದಿಂದ ಕೊಡಿಸಲು ಸಂಬಂಧಪಟ್ಟ ಸಚಿವರ ಬಳಿ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರೇರಕ ಭಾಷಣಕಾರರಾದ ಮೃಣಾಲ್ ಜೋಶಿ ಮಾತನಾಡಿ, ಭಾರತೀಯ ಕೌಟುಂಬಿಕ ವ್ಯವಸ್ಥೆ ಜಗತ್ತಿನ ಗಮನ ಸೆಳೆದಿದೆ. ಆದರೆ, ಭಾರತದಲ್ಲಿ ಇಂದಿನ ದಿನಮಾನಗಳಲ್ಲಿ ಕ್ಷುಲ್ಲಕ ಕಾರಣಕ್ಕೆ ಡಿವೋರ್ಸ್ ಕೇಸ್ ಗಳು ಹೆಚ್ಚಾಗುತ್ತಿದೆ. ಇದು ವಿಪರ್ಯಾಸ. ಈ ದಿಸೆಯಲ್ಲಿ ನಮ್ಮತನ ಉಳಿಸಿಕೊಳ್ಳಲು ಮಹಿಳೆಯರು ಹೆಚ್ಚು ಆಸಕ್ತಿ ವಹಿಸಬೇಕು. ಮಹಿಳೆಯಿಂದ ಮಾತ್ರ ಸಂಸ್ಕೃತಿ, ಸಂಪ್ರದಾಯ ಉಳಿಯಲು ಸಾಧ್ಯ ಎಂದರು.

ಹಿಂದೆ ಮನೆಯಲ್ಲಿ ಎಲ್ಲವೂ ಹಿರಿಯರ ಮಾರ್ಗದರ್ಶನದಲ್ಲಿ ನಡೆಯುತ್ತಿತ್ತು. ಮಕ್ಕಳ ಮೇಲಿನ ಪ್ರೀತಿ ವ್ಯಾಮೋಹಕ್ಕೆ ತಿರುಗಿ ಇಂದು ಎಲ್ಲವೂ ಚಿಕ್ಕ ಮಕ್ಕಳು ಹೇಳಿದಂತೆ ನಡೆಯುತ್ತಿದೆ. ಮಕ್ಕಳಿಗೆ ಜೀವನ ಪಾಠ ಸಿಗುತ್ತಿಲ್ಲ. ಹೀಗೆ ಮುಂದುವರಿದರೆ, ಮುಂದೆ ದಾರಿ ತಪ್ಪುವ ಸಂಭವ ಹೆಚ್ಚು ಎಂದು ಎಚ್ಚರಿಸಿದರು.

ಸಮಾಜದ ಅಧ್ಯಕ್ಷ ವಿಜಯ ವೆರ್ಣೇಕರ ಮಾತನಾಡಿ, ದೈವಜ್ಞ ಸಮಾಜ ಹಿಂದುಳಿದ ವರ್ಗದಲ್ಲಿ ಬರುತ್ತದೆ. ಶಾಲೆ ಕಟ್ಟಡಕ್ಕೆ ಅಗತ್ಯವಾದ 2 ಕೋಟಿ ರೂ. ಸರ್ಕಾರದಿಂದ ಕೊಡಿಸಬೇಕೆಂದು ಶಾಸಕರಿಗೆ ಮನವಿ ಮಾಡಿದರು.

ಸಾನ್ನಿಧ್ಯ ವಹಿಸಿದ್ದ ಶ್ರೀ ಕ್ಷೇತ್ರ ಕರ್ಕಿಯ ಜ್ಞಾನೇಶ್ವರ ಪೀಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆಯಾದ ದಿನ ಸಮಾಜದ ಯೋಧ ಯುವ ವೇದಿಕೆ ಉದ್ಘಾಟಿಸಲಾಗಿದೆ. ಶ್ರೀರಾಮನ ಆದರ್ಶಗಳು ಪಾಲನೆ ಮಾಡಬೇಕು. ಮಹಾತ್ಮ ಗಾಂಧೀಜಿ ಕೂಡ ರಾಮರಾಜ್ಯದ ಕನಸು ಕಂಡಿದ್ದರು. ರಾಮಮಂದಿರ ಸ್ಥಾಪನೆಯಾಗಿ ಅದು ಸಾಕಾರವಾಗುತ್ತಿದೆ ಎಂದು ಹೇಳಿದರು.

ಸಮಾಜದ ಸಾಧಕರಾದ ವಿಜಯವಾಣಿ ಸ್ಥಾನಿಕ ಸಂಪಾದಕ ಪ್ರಕಾಶ ಶೇಟ್, ಡಾ. ವೆಂಕಟೇಶ ರಾಯ್ಕರ, ಸ್ಮೀತಾ ವೆರ್ಣೇಕರ, ಮಂಜುನಾಥ ರೇವಣಕರ, ಡಾ. ವಸಂತ ರೇವಣಕರ ಅವರನ್ನು ಸನ್ಮಾನಿಸಲಾಯಿತು.

ಯುವ ವೇದಿಕೆಯಿಂದ ಬೈಕ್ ರ್ಯಾಲಿ, ಶ್ರೀಗಳನ್ನು ವಿವಿಧ ವಾದ್ಯಮೇಳ, ಪೂರ್ಣಕುಂಭದೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು.
ಸತೀಶ ಶೇಜವಾಡಕರ, ಚಂದ್ರಹಾಸ ವೆರ್ಣೇಕರ, ಪ್ರದಿಪ ರಾಯ್ಕರ, ಶೈಲಾ ಶೇಟ್, ಮಧು ಅಣ್ವೇಕರ, ಸಂತೋಷ ವೆರ್ಣೇಕರ, ಮಾರುತಿ, ರಾಜನ್ ಅಣ್ವೇಕರ, ಉದಯ ವೆರ್ಣೇಕರ, ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net