ದೈವ ನರ್ತನ ಮಾಡುತ್ತಿದ್ದಾಗ ಎದೆನೋವು ದೈವ ನರ್ತಕ ಹೃದಯಾಘಾತದಿಂದ ಮೃತ್ಯು

mng--27 Jan Ashok Bangera
Published on

ಮಂಗಳೂರು: ಮಂಗಳೂರಿನ ಪ್ರಸಿದ್ಧ ದೈವ ನರ್ತಕರೊಬ್ಬರು ದೈವ ನರ್ತನ ಮಾಡುತ್ತಿದ್ದಾಗ ಕಾಣಿಸಿಕೊಂಡ ಎದೆನೋವು ಉಲ್ಭಣಗೊಂಡು ಮೃತಪಟ್ಟ ಘಟನೆ ಶನಿವಾರ ಬೆಳಗ್ಗಿನ ಜಾವ ನಡೆದಿದೆ.


ಪದವಿನಂಗಡಿ ಗಂಧಕಾಡು ನಿವಾಸಿ ಅಶೋಕ್ ಬಂಗೇರ (47) ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.


ಶುಕ್ರವಾರ ರಾತ್ರಿ ಹಳೆಯಂಗಡಿ ಸಮೀಪ ರಕೇಶ್ವರಿ ದೈವದ ಕೋಲ ನಡೆಯುತ್ತಿದ್ದಾಗ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಕೋಲ ಕೊನೇ ಘಟ್ಟದಲ್ಲಿದ್ದಾಗ ಎದೆನೋವು ಉಂಟಾಗಿದ್ದು ಕೂಡಲೇ ವೇಷ ಕಳಚಿಟ್ಟು ಕೋಲವನ್ನು ಸಹೋದರ ನಿರ್ವಹಿಸುತ್ತಾನೆಂದು ಹೇಳಿ ತುರ್ತಾಗಿ ಅಶೋಕ್ ಬಂಗೇರ ಮನೆಗೆ ಬಂದು ಮಲಗಿದ್ದಾರೆ. ಬೆಳಗ್ಗಿನ ಜಾವ ಮತ್ತಷ್ಟು ನೋವು ಕಾಣಿಸಿಕೊಂಡಾಗ ವೈದ್ಯರೊಬ್ಬರ ಮನೆಗೆ ತೆರಳಿ ತಪಾಸಣೆ ಮಾಡಿಸಿದ್ದಾರೆ. ಅವರು ಪರಿಸ್ಥಿತಿ ಗಂಭೀರವಾಗಿದ್ದು, ತಕ್ಷಣ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ ಕಾರಣ ಆಸ್ಪತ್ರೆಗೆ ತೆರಳಿದ್ದಾರೆ. ಅಷ್ಟರಲ್ಲಿ ಮತ್ತೊಮ್ಮೆ ಹೃದಯಾಘಾತವಾಗಿ ಅವರು ಮೃತಪಟ್ಟಿದ್ದಾರೆ.


ಹಳೆಯಂಗಡಿ ಕೊಳುವೈಲು ರೆಂಜದಡಿ ಕುಟುಂಬಸ್ಥರ ದೈವಸ್ಥಾನದಲ್ಲಿ ಶುಕ್ರವಾರ ರಾತ್ರಿ ರಕೇಶ್ವರಿ ದೈವದ ಕೋಲ ನಡೆದಿತ್ತು. ಅರ್ಧಕ್ಕೆ ನಿಲ್ಲಿಸಿದ್ದರಿಂದ ದೈವದ ಕೋಲವನ್ನು ಅಶೋಕ್ ಬಂಗೇರ ಅವರ ಸಹೋದರ ಪೂರ್ಣಗೊಳಿಸಿದ್ದರು. ಅಶೋಕ್ ಬಂಗೇರ ಅವರ ದೈವ ನರ್ತನದ ಕೊನೇ ದೃಶ್ಯ ಮೊಬೈಲಿನಲ್ಲಿ ಸೆರೆಯಾಗಿದೆ. ಅಶೋಕ್ ಬಂಗೇರ ಅವರು ಪದವಿನಂಗಡಿ ಕೊರಗಜ್ಜ ಕ್ಷೇತ್ರದ ಮುಖ್ಯ ಪಾತ್ರಿಯಾಗಿದ್ದರು.
ಮೃತರು ತಾಯಿ, ಪತ್ನಿ, ಮೂವರು ಪುತ್ರಿಯರು ಹಾಗೂ ಐವರು ಸಹೋದರರನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net