

ಪಾಂಡವಪುರ: ರೈತ ಸಮುದಾಯಕ್ಕೆ ಹೈನುಗಾರಿಕೆ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ಹಾಲು ಉತ್ಪಾದನೆಯಲ್ಲಿ ತಾಲೂಕನ್ನು ಜಿಲ್ಲೆಗೆ ಮೊದಲ ಸ್ಥಾನಕ್ಕೆ ತರುವ ಗುರಿ ಹೊಂದಿರುವುದಾಗಿ ಮನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್ ಹೇಳಿದರು.
ತಾಲೂಕಿನ ಚಿನಕುರಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕೃಷಿ ಜತೆಗೆ ಹೈನುಗಾರಿಕೆ ಅಳವಡಿಸಿಕೊಂಡರೆ ರೈತರು ಆರ್ಥಿಕವಾಗಿ ಸದೃಢರಾಗಬಹುದು. ಡಿಂಕಾ ಗ್ರಾಮದ ರೈತ ಮಹಿಳೆಯೊಬ್ಬರು ದಕ್ಷಿಣ ಭಾರತದಲ್ಲಿಯೇ ಅತಿಹೆಚ್ಚು ಹಾಲು ಉತ್ಪಾದನೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗ್ರಾಮೀಣ ಪ್ರದೇಶದ ರೈತ ಕುಟುಂಬಗಳಿಗೆ ಹೈನುಗಾರಿಕೆ ಆರ್ಥಿಕ ಚೇತರಿಕೆಗೆ ಆಧಾರವಾಗಿದ್ದು ಲಕ್ಷಾಂತರ ಕುಟುಂಬಗಳ ಬದುಕು ನಿರ್ವಹಣೆಗೆ ಸಹಕಾರಿಯಾಗಿದೆ ಎಂದು ಹೇಳಿದರು.
ಮನ್‌ಮುಲ್ ಚುನಾವಣೆಯಲ್ಲಿ ತಾಲೂಕಿನ ಹಾಲು ಉತ್ಪಾದಕರ ಸಂಘದ ಮತದಾರರು ಹೆಚ್ಚಿನ ಮತ ಕೊಟ್ಟು ನಿರ್ದೇಶಕರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಹಣ ಇದ್ದವರೆಲ್ಲ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಜನರ ಪ್ರೀತಿವಿಶ್ವಾಸ, ರೈತರ ಬಗ್ಗೆ ಕಾಳಜಿ ಹೊಂದಿರುವವರಿಗೆ ಮಾತ್ರ ಮತದಾರರು ಆಶೀರ್ವಾದ ಮಾಡುತ್ತಾರೆ. ನೀವು ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ಕಳಂಕಬಾರದಂತೆ ಕೆಲಸ ಮಾಡುತ್ತೇನೆ. ಸಿಕ್ಕಿರುವ ಅವಕಾಶದಲ್ಲಿ ಒಕ್ಕೂಟದಿಂದ ಬರುವ ಸೌಲಭ್ಯಗಳನ್ನು ರೈತರು ಹಾಗೂ ಡೇರಿಗಳಿಗೆ ನೀಡುವ ಮೂಲಕ ಡೇರಿಗಳ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಅಶೋಕ್, ವಿಎಸ್‌ಎಸ್‌ಬಿ ಅಧ್ಯಕ್ಷ ಸಿ.ಎಸ್.ಗೋಪಾಲಗೌಡ, ಉಪಾಧ್ಯಕ್ಷ ಸಿ.ಸುರೇಂದ್ರ, ಟಿಎಪಿಸಿಎಂಎಸ್ ನಿರ್ದೇಶಕ ರಾಮಕೃಷ್ಣೇಗೌಡ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಸಿ.ಪ್ರಕಾಶ್, ಯಶವಂತ್‌ಕುಮಾರ್, ವೀರಶೈವ-ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಆನಂದ್, ಡೇರಿ ಉಪಾಧ್ಯಕ್ಷ ಸಿ.ಆರ್.ರಮೇಶ್, ನಿರ್ದೇಶಕರಾದ ಸಿ.ಎಂ.ರಮೇಶ್, ಆರ್.ವರದರಾಜು, ಸಿ.ಎಸ್.ಲೋಕೇಶ್, ಸಿ.ಎ.ಮಂಜುನಾಥ್, ಸಿ.ಎಸ್.ಕೆಂಪೇಗೌಡ, ಸಿ.ಬಿ.ನಾರಾಯಣಚಾರಿ, ಯೋಗೇಂದ್ರ, ವರಲಕ್ಷ್ಮೀ, ಯಶೋದಮ್ಮ, ಹೇಮಾ, ಕಾರ್ಯದರ್ಶಿ ಲೋಕೇಶ್, ಮಂಜುನಾಥ್, ಮೊಗ್ಗಣ್ಣೇಗೌಡ ಇತರರು ಇದ್ದರು.