ಹೈನುಗಾರಿಕೆ ಗ್ರಾಮೀಣರ ಆದಾಯದ ಕಣಜ: ಪಶುಸಂಗೋಪನಾ ಸಚಿವ ವೆಂಕಟೇಶ್ ಅಭಿಮತ

milk day
Published on

ಬೆಂಗಳೂರು: ಹೈನುಗಾರಿಕೆಯಿಂದ ಗ್ರಾಮೀಣ ಜನರ ಆದಾಯಕ್ಕೆ ಹೆಚ್ಚಿನ ಅನುಕೂಲ ಉಂಟಾಗಿದ್ದು, ಈ ಕಸುಬನ್ನು ಸಹಕಾರ ತತ್ವದಡಿ ಮುಂದುವರಿಸಿಕೊಂಡು ಹೋಗಬೇಕು ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಅಭಿಪ್ರಾಯಪಟ್ಟರು.

ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್​) ಬೆಂಗಳೂರು ಕೃಷಿ ವಿವಿ ಕ್ಯಾಂಪಸ್ ಜಿಕೆವಿಕೆಯ ಡಾ.ಬಾಬು ರಾಜೇಂದ್ರಪ್ರಸಾದ್ ಅಂತಾರಾಷ್ಟ್ರೀಯ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ದೇಶದ ಹೈನುಗಾರಿಕೆಯ ಪಿತಾಮಹ ಡಾ.ವರ್ಗೀಸ್ ಕುರಿಯನ್ ಅವರ 103ನೇ ಜನ್ಮದಿನಾಚರಣೆ ಹಾಗೂ ಹೈನುಗಾರರಿಗೆ ತಾಂತ್ರಿಕ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ದೇಶದ ಹೈನುಗಾರಿಕೆ ಕ್ಷೇತ್ರಕ್ಕೆ ಡಾ. ಕುರಿಯನ್ ವರ್ಗೀಸ್ ಅಪಾರ ಕೊಡುಗೆ ನೀಡಿದ್ದಾರೆ. ಇವರ ಜನ್ಮದಿನವನ್ನು ಪ್ರತೀವರ್ಷವೂ ಕೆಎಂಎಫ್​ ಆಚರಿಸುತ್ತಿದ್ದು, ಹೈನುಗಾರಿಕೆಯಲ್ಲಿ ತೊಡಗಿರುವವರನ್ನು ಗೌರವಿಸುವ ಪರಿಪಾಠ ಹೊಂದಲಾಗಿದೆ. ವರ್ಷವಿಡೀ ಆದಾಯ ತಂದುಕೊಡುವ ಈ ಕ್ಷೇತ್ರದಲ್ಲಿ ಕೃಷಿಕರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಹಾಲು ಉತ್ಪಾದಕರಿಗೆ ಸನ್ಮಾನ:

ಪ್ರಸಕ್ತ ವರ್ಷದಲ್ಲಿ ಜಿಲ್ಲಾ ಹಾಲು ಒಕ್ಕೂಟಗಳ ವ್ಯಾಪ್ತಿಯಲ್ಲಿ ನಿತ್ಯ ಅತಿಹೆಚ್ಚು ಹಾಲು ಉತ್ಪಾದಿಸುವ ಹೈನುಗಾರರನ್ನು ಸಚಿವರು ಸನ್ಮಾನಿಸಿದರು. ಮೈಸೂರಿನ ಜ್ಯೋತಿ ಉಮೇಶ್ (ನಿತ್ಯ 1,323 ಲೀ. ಹಾಲು ಉತ್ಪಾದನೆ), ವಿಜಯಪುರದ ಪ್ರಕಾಶ್ ದೇಸಾಯಿ (821 ಲೀ.), ಬೆಂಗಳೂರಿನ ಡಾ. ಎಸ್.ಮಂಜುನಾಥ್ (761 ಲೀ.), ಬೆಂಗಳೂರಿನ ಜೆ. ಶಾಂತಮ್ಮ (674 ಲೀ.), ಮಂಡ್ಯದ ಆರ್.ಸಂತೋಷ್ ಕುಮಾರ್ ಅವರನ್ನು ಗೌರವಿಸಲಾಯಿತು.

ಇದೇ ವೇಳೆ ಹೈನುಗಾರರಿಗೆ ಸಿಗುವ ಸಾಲ ಸೌಲಭ್ಯದ ಬಗ್ಗೆ ಮಾಹಿತಿ ಹಾಗೂ ಇನ್ನಿತರ ವಿಷಯದ ಬಗ್ಗೆ ತಜ್ಞರಿಂದ ವಿಚಾರಗೋಷ್ಠಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಕೆಎಂಎಫ್​ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್, ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರು ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net