

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ರೈತರು ಸಮಗ್ರ ಕೃಷಿ ಅನುಸರಿಸಿ, ತಮ್ಮ ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳಬೇಕು ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಎನ್.ಜಗದೀಶ್‌ಕುಮಾರ್ ಹೇಳಿದರು.
ದೇವನಹಳ್ಳಿ ತಾಲೂಕಿನ ದೊಡ್ಡಸಾಗರನಹಳ್ಳಿ ಗ್ರಾಮದಲ್ಲಿ ದೇವನಹಳ್ಳಿ ಬೆಂಗಳೂರು ಸಹಕಾರ ಹಾಲು ಒಕ್ಕೂಟ ನಿ (ಬಮೂಲ್), ಹಾಲು ಉತ್ಪಾದಕರ ಸಹಕಾರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕೃಷಿ ಹಾಗೂ ಹೈನುಗಾರಿಕೆ ಕಾರ್ಯಾಗಾರದಲ್ಲಿ ಮಾತನಾಡಿದರು.
ಬರಿ ಕೃಷಿ ಅಲ್ಲದೆ ತರಕಾರಿ ಹಣ್ಣಿನ ಬೆಳೆಗಳನ್ನು ಹಾಗೂ ಅರಣ್ಯ ಕೃಷಿಯನ್ನು ಅಳವಡಿಸಿಕೊಳ್ಳಬೇಕು. ಇದರೊಂದಿಗೆ ಪಶು ಸಾಕಾಣಿಕೆಯನ್ನು ಪರ್ಯಾಯ ಆದಾಯ ಮೂಲವಾಗಿ ಮಾಡಿಕೊಳ್ಳಬಹುದು ಇದರಿಂದ ರೈತಾಪಿ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಸಲಹೆ ನೀಡಿದರು. ಇದರ ಜತೆಗೆ ಅಲ್ಪಾವದಿ ಆದಾಯ ಹಾಗೂ ಧೀರ್ಘವಾದಿ ಆದಾಯ ಮೂಲಗಳನ್ನು ಕಂಡುಕೊಳ್ಳಬೇಕು, ಈ ವಿಷಯದಲ್ಲಿ ವಿದ್ಯಾರ್ಥಿಗಳು ರೈತರಿಗೆ ಮಾರ್ಗದರ್ಶನ ನೀಡಬೇಕು ಎಂದರು. ಇದೇ ವೇಳೆ ರೇಬೀಸ್ ಖಾಯಿಲೆಯ ಬಗ್ಗೆ ಮಾಹಿತಿ ನೀಡಿ ರೈತರಿಗೆ ಹೆಚ್ಚಿನ ಮಾಹಿತಿ ಬೇಕಿದಲ್ಲಿ 1962 ಸಂಖ್ಯೆಗೆ ಕರೆ ಮಾಡಿ ಉಚಿತ ಸಲಹೆ ಪಡೆದುಕೊಳ್ಳಬಹುದು ಎಂದರು.
ವೈದ್ಯಕೀಯ ತಪಾಸಣೆ ಅಗತ್ಯ: ಚರ್ಮಗಂಟು, ಕಾಲುಬಾಯಿ ರೋಗ ಸೇರಿ ಜಾನುವಾರುಗಳಿಗೆ ತಗಲುವ ವಿವಿಧ ಸೋಂಕುಗಳಿಗೆ ತಕ್ಷಣ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸೆ ಮೂಲಕ ಜಾನುವಾರುಗಳ ಆರೋಗ್ಯ ಕಾಪಾಡಿಕೊಳ್ಳಬೇಕು ಮಾರಣಾಂತಿಕ ರೋಗಗಳಿಂದ ಜಾನುವಾರುಗಳನ್ನು ರಕ್ಷಣೆ ಮಾಡಿಕೊಳ್ಳಬೇಕು ಎಂದು ಪಶು ವೈದ್ಯಾಧಿಕಾರಿ ಡಾ.ಅನಿಲ್‌ಕುಮಾರ್ ಸಲಹೆ ನೀಡಿದರು. ಜಿಲ್ಲಾ ಪಶುಪಾಲನ ಇಲಾಖೆ ಹೈನುಗಾರರಿಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದು, ಇವುಗಳ ಬಗ್ಗೆ ಸಮಗ್ರ ಮಾಹಿತಿ ಪಡೆದು ಕಾರ್ಯಕ್ರಮದ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ಶಿಬಿರದಲ್ಲಿ ಹಲವು ಕಾರ್ಯಕ್ರಮ: ತಪಾಸಣೆ ಶಿಬಿರದಲ್ಲಿ ನೂರಾರು ರೈತರು ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಂಡರು. ಶಿಬಿರದಲ್ಲಿ ಬರಡು ರಾಸುಗಳಿಗೆ ಚರ್ಮಗಂಟು ರೋಗದ ಲಸಿಕೆಯನ್ನು ಹಾಗೂ ಕುರಿ, ಮೇಕೆಗಳಿಗೆ ಇಟಿ ಲಸಿಕೆಯನ್ನು ನೀಡಲಾಯಿತು. ಜತೆಗೆ ನಾಯಿಗಳಿಗೆ ರೇಬಿಸ್ ಲಸಿಕೆ ನೀಡಲಾಯಿತು. ಪ್ರಾಣಿಗಳಿಗೆ ಜಂತುಹುಳು ಔಷಧಿ ಹಾಗೂ ಖನಿಜ ಮಿಶ್ರಣವನ್ನು ನೀಡುವ ಮೂಲಕ ಪಶುಗಳ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಿದ್ಯಾರ್ಥಿಗಳಿಂದ ಕಾರ್ಯಾನುಭವ: ಶಿಬಿರದಲ್ಲಿ ಬೆಂಗಳೂರು ತೋಟಗಾರಿಕೆ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳ ವತಿಯಿಂದ ಗ್ರಾಮೀಣ ತೋಟಗಾರಿಕಾ ಕಾರ್ಯಾನುಭವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ದೇವನಹಳ್ಳಿ ತಾಲೂಕಿನ ಹೊಸಹುಡ್ಯ, ಸಿಂಗವಾರ ಹಾಗೂ ದೊಡ್ಡಸಾಗರಹಳ್ಳಿಯಲ್ಲಿ ಜಾನುವಾರು ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಆಯೋಜಿಸಲಾಗಿತ್ತು. ಗೋಪೂಜೆ ಸಲ್ಲಿಸುವ ಮೂಲಕ ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಎನ್.ಜಗದೀಶ್ ಕುಮಾರ್ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ತೋಟಗಾರಿಕೆ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿ ಮದನ್‌ಲಾಲ್ ಕಾರ್ಯಕ್ರಮದ ಉದ್ದೇಶದ ಬಗ್ಗೆ ರೈತಾಪಿ ಜನರಿಗೆ ಮಾಹಿತಿ ನೀಡಿದರು.