

ಮದ್ದೂರು : ಜಿಲ್ಲಾ ಹಾಲು ಒಕ್ಕೂಟದ ಶ್ರೇಯೋಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತೇನೆ ಎಂದು ಜಿಲ್ಲಾ ಹಾಲು ಒಕ್ಕೂಟದ (ಮನ್ ಮುಲ್) ಅಧ್ಯಕ್ಷ ಯು.ಸಿ.ಶಿವಕುಮಾರ್ (ಉಮ್ಮಡಹಳ್ಳಿ ಶಿವಪ್ಪ) ಭರವಸೆ ನೀಡಿದರು. ತಾಲೂಕಿನ ಗೆಜ್ಜಲಗೆರೆಯಲ್ಲಿರುವ ಜಿಲ್ಲಾ ಹಾಲು ಒಕ್ಕೂಟದಲ್ಲಿ ಸೋಮವಾರ ಅಧಿಕಾರ ಸ್ವೀಕರಿಸಿದ ನಂತರ ಅವರು ಮಾತನಾಡಿದರು. ಅಧಿಕಾರಿಗಳೊಂದಿಗೆ ಇಂದೇ ಸಭೆ ನಡೆಸಿ ಒಕ್ಕೂಟದ ಉನ್ನತಿಗೆ ಯೋಜನೆ ರೂಪಿಸುವೆ ಎಂದರು.
ನಮ್ಮ ಒಕ್ಕೂಟ ವ್ಯಾಪ್ತಿಯ ಗಡಿ ಭಾಗದಲ್ಲಿ ಬೆಂಗಳೂರು ಕೆಎಂಎಫ್ ಮಾರುಕಟ್ಟೆ ವಿಸ್ತರಣೆಗೆ ವಿಶೇಷ ಗಮನ ನೀಡುವೆ. ಬಿಡದಿಯಲ್ಲಿರುವ ಯು.ಎಚ್.ಟಿ (ಆಲ್ಟ್ರಾ ಹೈ ಟೆಂಪರೇಚರ್) ಘಟಕವನ್ನು ಉನ್ನತೀಕರಿಸಿ, ಗುಡ್ ಲೈಫ್ ಹಾಲಿನ ಉತ್ಪನ್ನಗಳನ್ನು ಫಿನೋ ಹಾಗೂ ಬ್ರಿಕ್ ಮಾದರಿಯಲ್ಲಿ ಪ್ಯಾಕೇಜಿಂಗ್ ಮಾಡುವ ವ್ಯವಸ್ಥೆಯನ್ನು ಬಲಗೊಳಿಸಲು ಪ್ರಯತ್ನಿಸಲಾಗುವುದೆಂದರು.ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ಲೀಟರ್ ಹಾಲಿಗೆ 4 ರೂ. ದರ ಹೆಚ್ಚಳ ಮಾಡಿದ ಹಿನ್ನೆಲೆಯಲ್ಲಿ ಪ್ರತಿದಿನ ಈ ಹಿಂದೆ ಶೇಖರಣೆ ಆಗುತ್ತಿದ್ದ 8.50 ಲಕ್ಷ ಲೀ. ಹಾಲಿನ ಬದಲು 13 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದೆ. ನಮ್ಮ ಮಾರಾಟ ವ್ಯವಸ್ಥೆಯಿಂದ 5.50 ಲಕ್ಷ ಲೀ. ಹಾಲು ಮಾರಾಟವಾಗುತ್ತಿದೆ. ಹೆಚ್ಚುವರಿ ಹಾಲನ್ನು ಪೌಡರ್ ಮತ್ತು ಹಾಲಿನ ಉತ್ಪನ್ನಗಳನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದು ಶಿವಕುಮಾರ್ ಮಾಹಿತಿ ನೀಡಿದರು.
ನಂದಿನಿ ಆಕ್ವಾ (ಕುಡಿಯುವ ನೀರು)ಗೆ ಒತ್ತು ನೀಡಲಾಗಿದೆ. ಪ್ರಸ್ತುತ ಬೆಣ್ಣಿ ಶೇಖರಣಾ ಘಟಕದ ಉನ್ನತೀಕರಣಕ್ಕೆ ಕ್ರಮ ವಹಿಸಲಾಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿರುವ ನಮ್ಮ ಮಾರುಕಟ್ಟೆ ವ್ಯವಸ್ಥೆಯನ್ನು ವಿಸ್ತರಿಸಿ, ಹಾಲು ಮತ್ತು ಮೊಸರಿನ ಮಾರಾಟದ ಜತೆ ಹಾಲಿನ ಉಪ ಉತ್ಪನ್ನಗಳನ್ನೂ ಮಾರುವ ಯೋಜನೆ ರೂಪಿಸಲಾಗಿದೆ ಎಂದರು.
ರೈತರು ಪೂರೈಸುವ ಗುಣಮಟ್ಟದ ಹಾಲಿಗೆ ಉತ್ತಮ ಬೆಲೆ ನೀಡುವ ಸದುದ್ದೇಶದಿಂದ ಫ್ಯಾಟ್ ಆಧಾರಿತ ದರ ನಿಗದಿ ಮಾಡಲಾಗಿದೆ. ಎಮ್ಮೆ ಹಾಲು ಪೂರೈಕೆದಾರರಿಗೆ ಹೆಚ್ಚುವರಿ ಹಣ ನೀಡಲಾಗುತ್ತಿದೆ ಎಂದು ತಿಳಿಸಿದರು.
ಶ್ರೀರಂಗಪಟ್ಟಣ ತಾಲೂಕು ಕೋಡಿಶೆಟ್ಟಿಪುರ ಬಳಿ ಇರುವ ಸಂಸ್ಥೆಯ ಜಮೀನನಲ್ಲಿ ಶಿಕ್ಷಣ ಸಂಸ್ಥೆ ತೆರೆದು ಹೈನುಗಾರರ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಉತ್ತಮ ಶಿಕ್ಷಣ ನೀಡುವ ಚಿಂತನೆ ಇದೆ. ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದು ಶಿವಕುಮಾರ್ ತಿಳಿಸಿದರು.