

ಕುಶಾಲನಗರ: ರೈತರಿಗೆ ಹೈನುಗಾರಿಕೆ ಜೀವನದ ಆಸರೆಯಾಗಿದ್ದು, ಸುಸ್ಥಿಯ ಕುಟುಂಬ ನಿರ್ವಹಣೆಗೆ ಇದು ಸಹಾಯವಾಗಿದೆ ಎಂದು ಹಾಸನ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ವೀಣಾ ಅಭಿಪ್ರಾಯ ಪಟ್ಟಿದ್ದಾರೆ.
ಹೆಬ್ಬಾಲೆ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಹೆಬ್ಬಾಲೆಯಲ್ಲಿ ಪ್ರತಿದಿನ 12 ಸಾವಿರ ಲೀಟರ್ ಹಾಲು ಸಂಗ್ರಹ ಮಾಡುವ ಮೂಲಕ ಕೊಡಗು ಜಿಲ್ಲೆಯಲ್ಲಿ ದೊಡ್ಡ ಹಾಲು ಉತ್ಪಾದಕರ ಕೇಂದ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೆಬ್ಬಾಲೆಯಲ್ಲಿ ಜಾನುವಾರುಗಳಿಗೆ ಪ್ರಥಮ ಚಿಕಿತ್ಸಾ ಕೇಂದ್ರವನ್ನು ತೆರೆಯುವ ಯೋಚನೆಯಿದ್ದು, ಜಂತು ಹುಳು ಔಷಧವನ್ನು ಜಾನುವಾರುಗಳಿಗೆ ಕೊಟ್ಟು, ಸಾಕಷ್ಟು ಪ್ರಮಾಣದಲ್ಲಿ ಪೌಷ್ಟಿಕ ಆಹಾರ ನೀಡಿ ಗುಣಮಟ್ಟದ ಹಾಲು ಉತ್ಪಾದನೆ ಮಾಡುವ ಮೂಲಕ ವೈಯಕ್ತಿಕ ಹಾಗೂ ಸಂಘದ ಆರ್ಥಿಕ ಅಭಿವೃದ್ಧಿಗೆ ಸಹಕರಿಸುವಂತೆ ಕರೆ ನೀಡಿದರು.
ಸಂಘದ ಅಧ್ಯಕ್ಷ ಎಚ್.ಟಿ. ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ರಾಜಶೇಖರ, ರಾಗಿಣಿ, ಜವರಯ್ಯ, ಸೋಮಣ್ಣ, ಸುಭಾಷ್, ಪ್ರಭಾಕರ್, ಶಶಿಕುಮಾರ್ ಮತ್ತು ಸಂಘದ ಸದಸ್ಯರು ಹಾಜರಿದ್ದರು.