

ಬೈಲುಕುಪ್ಪೆ: ರೈತ ಮಹಿಳಾ ಕುಟುಂಬಗಳಿಗೆ ಹೈನುಗಾರಿಕೆ ಲಾಭದಾಯಕ ಉದ್ಯಮವಾಗಿದ್ದು ರೈತ ಮಹಿಳೆಯರಿಗೆ ಉತ್ತಮ ಆದಾಯ ನೀಡುತ್ತದೆ. ಹೈನುಗಾರಿಕೆ ರೈತರ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಮೈಸೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟದ ನಿರ್ದೇಶಕ ಬಿ.ಎ.ಪ್ರಕಾಶ್ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆವರಣದಲ್ಲಿ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿ, ಹೈನುಗಾರಿಕೆಯು ಹೆಚ್ಚಿನ ಉದ್ಯೋಗ ಸೃಷ್ಟಿಸುವದಲ್ಲದೆ ರೈತ ಕುಟುಂಬದ ಆರ್ಥಿಕ ಬಲ ವೃದ್ಧಿಸಲಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ರಘು ಹಾಗೂ ಮುಖಂಡ ಸುಬ್ರಮಣ್ಯ ಅವರನ್ನು ಸಂಪರ್ಕದಲ್ಲಿಟ್ಟುಕೊಂಡು ಸಂಘಕ್ಕೆ ಮೊದಲು ಜಾಗ ಗುರುತಿಸಿಕೊಂಡರೆ ಒಕ್ಕೂಟದಿಂದ ಹಣ ಬಿಡುಗಡೆ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.
ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಎಂ.ಅವಿನಾಶ್ ಲೆಕ್ಕ ಪರಿಶೋಧನಾ ವರದಿಯನ್ನು ಮಂಡಿಸಿದರು. ಸಂಘವು ಈ ಬಾರಿ 3,32,879 ರೂ. ಲಾಭ ಗಳಿಸಿದೆ. ಸಂಘ ಅಭಿವೃದ್ಧಿಯಾಗಬೇಕಾದರೆ ಸದಸ್ಯರು ಎಲ್ಲರೂ ಗುಣಮಟ್ಟದ ಹಾಲನ್ನು ಪೂರೈಸಿದಾಗ ಮಾತ್ರ ಹೆಚ್ಚು ಲಾಭಗಳಿಸಲು ಸಾಧ್ಯ ಎಂದು ತಿಳಿಸಿದರು.
ಸಂಘಕ್ಕೆ ಹೆಚ್ಚು ಹಾಲು ಸರಬರಾಜು ಮಾಡುತ್ತಿರುವ ಗ್ರಾಮದ ಮಂಜು, ತಿಮ್ಮಪ್ಪ, ಸೋಮು ಅವರಿಗೆ ಸಂಘದ ವತಿಯಿಂದ ಬಹುಮಾನ ನೀಡಿ ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷೆ ಸರಸ್ವತಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ರಘು, ಬೈಲುಕುಪ್ಪೆ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಸುಬ್ರಮಣ್ಯ, ಸಂಘದ ಕಾರ್ಯನಿರ್ವಾಹಕಿ ಆಶಾ, ಉಪಾಧ್ಯಕ್ಷೆ ಲೀಲಾ, ನಿರ್ದೇಶಕರಾದ ವಸಂತ, ಶಾಂತಮ್ಮ, ಲಲಿತಾ, ಶೋಭಾ, ಮಣಿ, ಷಡಕ್ಷರಿ, ಸದಸ್ಯರಾದ ಅನಿತಾ ಶಾಮ್, ರತ್ನಾ, ಗಿರೀಶ್, ಸುಮಿತ್ರಾ, ಲಕ್ಷ್ಮೀ, ಗ್ರಾಮದ ಮುಖಂಡರಾದ ರಾಮಣ್ಣ, ಆನಂದ್ ಇತರರು ಇದ್ದರು.