

ನಗರದ ವಾಸವಿ ಕಾಲನಿಯ ಒಕ್ಕೂಟದ ಕಾರ್ಯಾಲಯದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಒಕ್ಕೂಟಗಳಿಗೆ ಪ್ರತಿದಿನ 4 ಲಕ್ಷ ಲೀಟರ್ ಹಾಲು ಖರೀದಿಗೆ ಅವಕಾಶವಿದ್ದರೂ, ಪ್ರಸ್ತುತ 8.5 ಲಕ್ಷ ಲೀಟರ್ ಹಾಲು ಖರೀದಿಸಲಾಗುತ್ತಿದೆ. ಉಳಿದ ಹಾಲನ್ನು ಸರ್ಕಾರಿ ಯೋಜನೆಗಳು, ಹಾಲಿನ ಪೌಡರ್ ಮತ್ತು ಸಿಹಿ ಪದಾರ್ಥಗಳ ತಯಾರಿಕೆಗೆ ಬಳಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ, ಶಿವಮೊಗ್ಗದ ಹಾಲು ಒಕ್ಕೂಟ ಕೇಂದ್ರವನ್ನು ಚಿತ್ರದುರ್ಗ ಇಲ್ಲವೇ ದಾವಣಗೆರೆಗೆ ವಿಭಾಗೀಯ ಕೇಂದ್ರವಾಗಿ ಸ್ಥಾಪಿಸಲು ಪ್ರಯತ್ನ ನಡೆಯುತ್ತಿದೆ ಎಂದು ಸಂಜೀವಮೂರ್ತಿ ತಿಳಿಸಿದರು. ಪ್ರಸ್ತುತ ಎರಡೂ ಜಿಲ್ಲೆಗಳಲ್ಲಿ ತಲಾ 400 ಹಾಲು ಒಕ್ಕೂಟ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.
ಲಾಭದಾಯಕವಾಗಿ ಒಕ್ಕೂಟ ಬಲವರ್ಧನೆ
ಒಕ್ಕೂಟವು ಹಿಂದೆ ₹7.90 ಕೋಟಿ ನಷ್ಟದಲ್ಲಿತ್ತು. ಆದರೆ, ಪ್ರಸ್ತುತ ₹11.39 ಕೋಟಿ ಲಾಭದಾಯಕವಾಗಿ ಬಲವರ್ಧನೆಗೊಂಡಿದೆ. ಈ ಕಾರಣದಿಂದ ರೈತರಿಂದ ಅಧಿಕ ಪ್ರಮಾಣದಲ್ಲಿ ಹಾಲು ಖರೀದಿಸಲಾಗುತ್ತಿದೆ. ಒಕ್ಕೂಟವು ಪ್ರತಿ ತಿಂಗಳ 10ನೇ ತಾರೀಖಿಗೆ ರೈತರ ಹಾಲು ಖರೀದಿಯ ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದೆ ಎಂದು ಅವರು ಹೇಳಿದರು.
ಚಳ್ಳಕೆರೆ ತಾಲೂಕಿನಲ್ಲಿ 63 ಹಾಲು ಒಕ್ಕೂಟ ಕೇಂದ್ರಗಳಿದ್ದು, ಅದರಲ್ಲಿ 9 ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿವೆ. ಇನ್ನು 8 ಒಕ್ಕೂಟಗಳಿಗೆ ಕಟ್ಟಡ ನಿರ್ಮಾಣ ಮಾಡಲು ಅನುದಾನದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.
ನಂದಿನಿಗೆ ತಿರುಪತಿಯಲ್ಲೂ ಬೇಡಿಕೆ
ಮಾರ್ಕೆಟಿಂಗ್ ವಿಭಾಗದ ಅಧಿಕಾರಿ ಇರ್ಫಾನ್ ಮಾತನಾಡಿ, ಹಾಲು ಒಕ್ಕೂಟ ಕೇಂದ್ರಗಳಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ರೂಪಿಸಲಾಗಿದ್ದು, ಇದು ಹೈನುಗಾರಿಕೆಯನ್ನು ಪ್ರಧಾನ ಕಸುಬಾಗಿ ಮಾಡಿಕೊಳ್ಳಲು ರೈತರಲ್ಲಿ ಭರವಸೆ ಮೂಡಿಸಿದೆ. ಹಸು ಖರೀದಿಗೆ ಶೇ.25ರಷ್ಟು ಸಬ್ಸಿಡಿ, ವಿಮೆ ಅನುಕೂಲ ಮತ್ತು ಪರಿಕರಗಳ ಖರೀದಿಗೂ ಹಣ ನೀಡಲಾಗುತ್ತಿದೆ. ಬೃಹತ್ ನಗರಗಳ ಮಾರುಕಟ್ಟೆ ಸೇರಿದಂತೆ ತಿರುಪತಿ ತಿಮ್ಮಪ್ಪನ ಪ್ರಸಾದ ತಯಾರಿಕೆಯಲ್ಲೂ ನಂದಿನಿ ಹಾಲಿಗೆ ಬೇಡಿಕೆ ಇದೆ ಎಂದು ತಿಳಿಸಿದರು.
ಒಕ್ಕೂಟದಲ್ಲಿ ಕಾರ್ಯ ನಿರ್ವಹಿಸುವ ಪದಾಧಿಕಾರಿಗಳಿಗೆ ವಿಮೆ ಸೌಲಭ್ಯ, ಸಕಾಲಕ್ಕೆ ವೇತನ ನೀಡಲಾಗುತ್ತಿದೆ. ನಿವೃತ್ತಿ ಬಳಿಕ ಸಿಗುವ ಗರಿಷ್ಠ ಮೊತ್ತವನ್ನು 3ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಕಚೇರಿ ಸಿಬ್ಬಂದಿ ಅಭಿಷೇಕ್, ಸುರೇಶ್‌ಬಾಬು, ಅಭಿ, ಬುಕ್ಕಂಬೂದಿ ಜಗದೀಶ್ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.