

ಹುಳಿಯಾರು: ರೈತರು ಆರ್ಥಿಕವಾಗಿ ಪ್ರಗತಿ ಹೊಂದಲು ಹೈನುಗಾರಿಕೆಯಲ್ಲಿ ಪೂರ್ಣ ಪ್ರಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಶಿವಪ್ರಕಾಶ್ ಬುಲ್ಲೇನಹಳ್ಳಿ ಹೇಳಿದರು.
ಹುಳಿಯಾರು ಸಮೀಪದ ರಂಗಾಪುರದಲ್ಲಿ ಹಾಲು ಉತ್ಪಾದಕರ ಸಂಘದ ನೂತನ ಹಾಲು ಶೇಖರಣಾ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಚಟುವಟಿಕೆ ಜತೆಗೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಾಗ ರೈತರು ಉತ್ತಮ ಬದುಕನ್ನು ಕಟ್ಟಿಕೊಳ್ಳಬಹುದು. ಕೃಷಿ ಭೂಮಿಗೆ ಅಗತ್ಯ ಸಾವಯವ ಗೊಬ್ಬರ ಪಡೆದುಕೊಳ್ಳಬಹುದು ಎಂದರು.
ದೇಶದ ಅಭಿವೃದ್ಧಿಗೆ ಕೃಷಿ ಕ್ಷೇತ್ರವೂ ಮಹತ್ವದಾಗಿದ್ದು, ಇದರಲ್ಲಿ ಹೈನುಗಾರಿಕೆ ಮತ್ತು ಕುರಿಸಾಕಾಣಿಕೆ ಮಹತ್ವದ ಪಾತ್ರ ವಹಿಸುತ್ತಿದೆ. ಕೋವಿಡ್ ನಂತರದ ದಿನಗಳಲ್ಲಿ ಯುವ ಸಮುದಾಯ ನಗರದಿಂದ ಹಳ್ಳಿಗೆ ಹಿಂದಿರುಗಿ, ಉತ್ತಮ ತಳಿಯ ಹಸುಗಳನ್ನು ಸಾಕುವ ಮೂಲಕ ಹೆಚ್ಚು ಆದಾಯವನ್ನು ಗಳಿಸಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಒಕ್ಕೂಟದಿಂದ ರೈತರಿಗೆ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಸಹಕಾರ ಸಂಘದ ಅಧ್ಯಕ್ಷ ಆರ್.ವಿ.ವಾಸು, ಉಪಾಧ್ಯಕ್ಷ ಶಿವರಾಜ್, ನಿರ್ದೇಶಕರಾದ ಎಸ್.ವಸಂತಕುಮಾರ್, ಆರ್.ಬಿ.ರಂಗಧಾಮಯ್ಯ, ಜಗದೀಶ್, ಅಂಜಿನಪ್ಪ, ಚಂದ್ರಯ್ಯ, ಪ್ರೇಮಾ, ಮಂಜುಳಾ, ಸೋಮಶೇಖರ್, ಚಿಕ್ಕಣ್ಣ, ಕಾರ್ಯದರ್ಶಿ ಸೋಮಶೇಖರ್, ಒಕ್ಕೂಟದ ವಿಸ್ತರಣಾಧಿಕಾರಿ ಮೋಹನ್ಕುಮಾರ್, ಸಿದ್ದಲಿಂಗಸ್ವಾಮಿ ಇದ್ದರು.