

ಕಡೂರು: ಹೈನುಗಾರಿಕೆ ಕ್ಷೇತ್ರಕ್ಕೆ ಉತ್ತೇಜನ ಪಡೆಯಲು ಸಹಕಾರಿ ಸಂಘಗಳು ವರದಾನವಾಗಿವೆ ಎಂದು ಹಾಸನ ಹಾಲು ಒಕ್ಕೂಟದ ನಿರ್ದೇಶಕ ಬಿದರೆ ಜಗದೀಶ್ ಹೇಳಿದರು.
ಪಿಕಾರ್ಡ್ ಬ್ಯಾಂಕ್ ಸಭಾಂಗಣದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಕಾರ್ಯದಕ್ಷತೆ, ಹಾಲು ಉತ್ಪಾದನೆ ಮತ್ತು ರಾಸುಗಳ ಆರೋಗ್ಯ ನಿರ್ವಹಣೆ ಕುರಿತು ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ಬಯಲು ಭಾಗದ ತಾಲೂಕಿನಲ್ಲಿ ಹೈನುಗಾರಿಕೆ ಗ್ರಾಮೀಣ ರೈತಾಪಿ ವರ್ಗದ ಜನರಿಗೆ ಬದುಕಿಗೆ ಆಸರೆಯಾಗಿದೆ. ಈ ಹಿಂದೆ ತಾಲೂಕಿನಲ್ಲಿ 87 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದವು. ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಿದ ಹಿನ್ನಲೆಯಲ್ಲಿ ಪ್ರಸ್ತುತ 165ಕ್ಕೂ ಹೆಚ್ಚು ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ನಾನು ನಿರ್ದೇಶಕನಾದ ನಂತರ 30ಕ್ಕೂ ಹೆಚ್ಚು ಸಂಘದ ಕಟ್ಟಡಗಳ ನಿರ್ಮಾಣಕ್ಕೆ ಹಾಸನ ಹಾಲು ಒಕ್ಕೂಟದಿಂದ ವಿಶೇಷ ಅನುದಾನ ಹಾಗೂ ಹೈನುಗಾರಿಕೆಗೆ ಉತ್ತೇಜನ ನೀಡಲು ಸಿಗುವ ಸೌಲಭ್ಯಗಳನ್ನು ದೊರಕಿಸಿಕೊಡಲಾಗಿದೆ ಎಂದರು.
ನಿರ್ದೇಶಕ ಸೋನಾಲ್‌ಗೌಡ ಮಾತನಾಡಿ, ಹಾಲು ಉತ್ಪಾದಕರ ಸಂಘದಲ್ಲಿ ಕಾರ್ಯದರ್ಶಿಗಳ ಪಾತ್ರ ಪ್ರಮುಖವಾಗಿದ್ದು, ಸಂಘದಲ್ಲಿ ಕಾರ್ಯದರ್ಶಿಗಳು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದರೆ ಹಾಲು ಉತ್ಪಾದಕರ ಸಂಘದ ಪ್ರಗತಿಗೆ ಸಹಕಾರಿಯಾಗಲಿದೆ ಎಂದರು.
ಹೈನುಗಾರಿಕೆಯ ರಾಸುಗಳ ಆರೋಗ್ಯ ನಿರ್ವಹಣೆ ಬಗ್ಗೆ ಡಾ. ಪ್ರಸನ್ನ, ಹಾಲಿನ ಗುಣಮಟ್ಟದ ಕುರಿತು ಸಹಾಯಕ ವ್ಯವಸ್ಥಾಪಕ ರನ್ನಕುಮಾರ್ ಉಪನ್ಯಾಸ ನೀಡಿದರು. ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ದಿವಾಕರ್, ಜಿಲ್ಲಾ ಸಹಕಾರ ಯೂನಿಯನ್ ಕುಶುಕುಮಾರ್, ಯಶಸ್, ಹಾಲು ಉತ್ಪಾದಕರ ವಿಸ್ತರಣಾಧಿಕಾರಿ ಅಕ್ಕನಾಗಮ್ಮ, ರಾಧಕೃಷ್ಣ, ಲೋಕೇಶ್, ಕುಮಾರ್, ಭರತ್ ಸೇರಿದಂತೆ 168 ಹಾಲು ಉತ್ಪಾದಕರ ಸಂಘಗಳ ಕಾರ್ಯದರ್ಶಿಗಳು ಇದ್ದರು.