

ಮುಂಡರಗಿ: ಹೈನುಗಾರಿಕೆ ಮತ್ತು ಅರಣ್ಯಾಧಾರಿತ ಕೃಷಿಗೆ ರೈತರು ಆದ್ಯತೆ ನೀಡಬೇಕು. ಅರಣ್ಯಾಧಾರಿತ ಕೃಷಿಗೆ ಮಹತ್ವ ನೀಡಿದರೆ ಅರಣ್ಯ ವೃದ್ಧಿಯಾಗುತ್ತದೆ. ಇದರಿಂದ ಉತ್ತಮ ಪರಿಸರ ಸಾಧ್ಯವಾಗುತ್ತದೆ ಎಂದು ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಈಶ್ವರಪ್ಪ ಹಂಚಿನಾಳ ಹೇಳಿದರು.
ಪಟ್ಟಣದ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ತಾಲೂಕು ಜಾಗತಿಕ ಲಿಂಗಾಯತ ಮಹಾಸಭೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಮಾಸಿಕ ಶರಣ ಚಿಂತನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಪ್ಪತಗುಡ್ಡ ಈ ಭಾಗದ ನೈಸರ್ಗಿಕ ಸಂಪತ್ತಾಗಿದೆ. ಕಪ್ಪತಗುಡ್ಡ ಬಗ್ಗೆ ಎಲ್ಲರೂ ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಪ್ಪತ್‌ಹಿಲ್ಸ್ ವಲಯ ಅರಣ್ಯಾಧಿಕಾರಿ ಮಂಜುನಾಥ ಮೇಗಳಮನಿ ಮಾತನಾಡಿ, ಎಲ್ಲರೂ ಕಪ್ಪತಗುಡ್ಡವನ್ನು ಅಭಿವೃದ್ಧಿ ಪಡಿಸುವ ಮೂಲಕ ಅದನ್ನು ಉಳಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಚಾರ್ಯ ಸಿ.ಎಸ್. ಅರಸನಾಳ ಮಾತನಾಡಿ, ಕೇಂದ್ರ ಸರ್ಕಾರ ಕಪ್ಪತಗುಡ್ಡವನ್ನು ಸೂಕ್ಷ್ಮ ವಲಯ ಮಾಡಿದ್ದು ಒಳ್ಳೆಯದು. ಯಾವುದೆ ತರಹ ಗಣಿಗಾರಿಕೆ ಮಾಡಲು ಅವಕಾಶವಿಲ್ಲ. ಇದರಿಂದ ಕಪ್ಪತಗುಡ್ಡ ಮತ್ತಷ್ಟು ಅಭಿವೃದ್ಧಿ ಕಾಣುತ್ತದೆ ಎಂದರು.
ಜಾಗತಿಕ ಲಿಂಗಾಯತ ಮಹಾಸಭೆಯ ತಾಲೂಕು ಘಟಕದ ಅಧ್ಯಕ್ಷ ಎ.ವೈ.ನವಲಗುಂದ, ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿದರು. ಎಸ್.ವಿ. ಪಾಟೀಲ, ದೇವರಡ್ಡಿ ಇಮ್ರಾಪುರ, ಬಿ.ವಿ.ಮುದ್ದಿ, ವೆಂಕಟೇಶ ಗುಗ್ಗರಿ, ಬಸಯ್ಯ ಗಿಂಡಿಮಠ, ಶಿವಯೋಗಿ ಹಿರೇಮಠ ಉಪಸ್ಥಿತರರು ಇದ್ದರು. ಸಿ.ಕೆ.ಗಣಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ರಾಮೇನಹಳ್ಳಿ ಸ್ವಾಗತಿಸಿದರು. ಕೊಟ್ರೇಶ ಕಟಗಿ ನಿರೂಪಿಸಿದರು.