ಹೆಬ್ಬಾಲೆ ಡೇರಿ ವಾರ್ಷಿಕ ಮಹಾಸಭೆ

dairy
Published on

ಮಡಿಕೇರಿ:

ಹೆಬ್ಬಾಲೆ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಹೆಚ್.ಟಿ. ನಾರಾಯಣ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ಶನಿವಾರ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಾಸನ ಹಾಲು ಒಕ್ಕೂಟದ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್ ಮಾತಾನಾಡಿ ಹಾಲು ಉತ್ಪಾದಕ ರೈತರು ಸಂಘಕ್ಕೆ ಗುಣಮಟ್ಟದ ಹಾಲು ಹಾಕುವುದರ ಮೂಲಕ ಸಂಘದ ಬೆಳೆವಣಿಗೆಗೆ ಸಹಕಾರಿಗಳಾಗಬೇಕು. ಅದರ ಮುಖೇನ ಸಮರ್ಪಕವಾಗಿ ಹಾಲು ಹಾಕಿದ ಸದಸ್ಯರುಗಳಿಗೆ ಸಮಯಕ್ಕೆ ಸರಿಯಾಗಿ ಹಣ ಸಂದಾಯವಾಗುವುದು, ಇದರಿಂದ ಸದಸ್ಯರು ಮತ್ತು ಸಂಘದ ಅಭಿವೃದ್ಧಿಗೆ ಅನುಕೂಲವಾಗುವುದು.

ಮುಂದಿನ ದಿನಗಳಲ್ಲಿ ಹೆಬ್ಬಾಲೆಯಲ್ಲಿ ಹಾಸನ ಹಾಲು ಒಕ್ಕೂಟದ ವತಿಯಿಂದ ನೂತನವಾಗಿ ಹಾಲು ಶೀಥಲೀಕರಣ ಘಟಕ ಆರಂಭಿಸಲಾಗುವುದು. ಇದರ ಮೂಲಕ ಗ್ರಾಮಾಂತರ ಪ್ರದೇಶಗಳಲ್ಲಿ ಹಾಲು ಸಂಗ್ರಹ ಮಾಡಿ ಶೀಥಲೀಕರಣಗೊಳಿಸಿದ ನಂತರ ಕೇಂದ್ರ ಘಟಕಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷ ಹೆಚ್. ಟಿ. ನಾರಾಯಣ ಮಾತಾನಾಡಿ ಸಂಘ ಸದಸ್ಯರ ಸಹಕಾರದೊಂದಿಗೆ ಈ ಸಾಲಿನಲ್ಲಿ 4.49 ಲಕ್ಷ ರೂ.ಲಾಭ ಗಳಿಸಿದೆ. ಮುಂದಿನ ದಿನಗಳಲ್ಲಿಯೂ ಸದಸ್ಯರ ಸಹಕಾರ ಬಹು ಮುಖ್ಯ ಎಂದರು.

ಕಾರ್ಯದರ್ಶಿ ಹೆಚ್.ಟಿ ದಿಲೀಪ್ ಕುಮಾರ್ ಸಂಘದ ವರದಿ ವಾಚಿಸಿದರು. ಸಂಘಕ್ಕೆ ಹೆಚ್ಚು ಹಾಲನ್ನು ಹಾಕಿದ ಸದಸ್ಯರಿಗೆ ಬಹುಮಾನ ನೀಡಲಾಯಿತು. ಎಸ್.ಎಸ್.ಎಲ್.ಸಿ ಮತ್ತು ಪದವಿಪೂರ್ವ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಒಕ್ಕೂಟದ ವಿಸ್ತಾರಣಾಧಿಕಾರಿ ಬಿ.ವಿ. ವೀಣಾ ಪಶುಪಾಲನೆಯ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷ ಹೆಚ್. ಎಂ.ಚAದ್ರಪ್ಪ, ನಿರ್ದೇಶಕರಾದ ಹೆಚ್‌ಸಿ. ಜವರಪ್ಪ, ಹೆಚ್. ಎನ್. ಮಂಜುನಾಥ, ಹೆಚ್.ಎನ್. ಲೋಕೇಶ್, ಗಣೇಶ, ಹೆಚ್. ಎಸ್ ದಿನೇಶ್, ಸೋಮಣ್ಣ, ತಿಮ್ಮಪ್ಪ, ಹೆಚ್.ಎ. ಲೋಕೇಶ್, ರಾಗಿಣಿ ಜವರಪ್ಪ, ಸಾವಿತ್ರಿ ಶ್ರೀನಿವಾಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net