ಹಾಲು ಉತ್ಪಾದನೆಯತ್ತ ಹರಿಯಲಿ ಚಿತ್ತ

dairy
Published on

ಮಡಿಕೇರಿ:

ಕೊಡಗಿನಲ್ಲಿ ಬೇಡಿಕೆ ಇರುವ ಹಾಲಿಗೂ ಇಲ್ಲಿ ಉತ್ಪಾದನೆ ಆಗುತ್ತಿರುವ ಹಾಲಿನ ಪ್ರಮಾಣಕ್ಕೂ ಅಜ-ಗಜಾಂತರವಿದೆ. ಈ ಮೂಲಕ ಜಿಲ್ಲೆಯಲ್ಲಿ ಹೈನೋದ್ಯಮಕ್ಕೆ ದೊಡ್ಡ ಮಟ್ಟದ ಅವಕಾಶಗಳಿದ್ದು, ಇದನ್ನು ಬಳಸಿಕೊಳ್ಳುವಲ್ಲಿ ಇಂದಿನ ಯುವ ಜನಾಂಗ ಹಿಂದೆ ಬಿದ್ದಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಪಶುಪಾಲನೆ ಮೂಲಕ ಬದುಕು ಕಟ್ಟಿಕೊಳ್ಳಲು ಸರ್ಕಾರವೂ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿದ್ದು, ಈ ಬಗ್ಗೆಯೂ ಜಾಗೃತಿ ಮೂಡಿಸುವ ಅಗತ್ಯವಿದೆ.

ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆ ತಾಲೂಕು ಹೊರತುಪಡಿಸಿದರೆ ಉಳಿದ ಮೂರು ತಾಲೂಕುಗಳಲ್ಲೂ ಹೈನೋದ್ಯಮಕ್ಕೆ ಪೂರಕ ಅವಕಾಶಗಳಿದೆ. ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಮಾತ್ರ ನೆಚ್ಚಿಕೊಳ್ಳದೆ ಪಶುಪಾಲನೆಯಂಥ ಪೂರಕ ಚಟುವಟಿಕೆಗಳ ಕಡೆಗೆ ಗಮಹರಿಸಿದರೆ ಆರ್ಥಿಕವಾಗಿ ಮಾತ್ರವಲ್ಲದೆ ವಿವಿಧ ರೀತಿಯ ಲಾಭಗಳು ಕೃಷಿಕರಿಗಿದೆ. ಆದರೂ ಕೊಡಗು ಎಲ್ಲ ಕ್ಷೇತ್ರÀಗಳಲ್ಲಿ ಮುಂದೆ ಇದ್ದರೂ ಹೈನೋದ್ಯಮ ಕ್ಷೇತ್ರದಲ್ಲಿ ಮಾತ್ರ ಬಹಳ ಹಿಂದೆ ಇದೆ. ರಾಜ್ಯದಲ್ಲೇ ಅತಿ ಕಡಿಮೆ ಸಂಖ್ಯೆಯಲ್ಲಿ ಜಾನುವಾರುಗಳು ಇಲ್ಲಿದ್ದು, ಹಾಲು ಉತ್ಪಾದನೆಯಲ್ಲೂ ಹಿಂದುಳಿದಿದೆ.

ಕೊಡಗು ಜಿಲ್ಲೆಗೆ ಪ್ರತಿದಿನವೂ ಸುಮಾರು 65 -72 ಸಾವಿರ ಲೀಟರ್ ಹಾಲು ಬೇಕಾಗುತ್ತದೆ. ಆದರೆ ಜಿಲ್ಲೆಯೊಳಗೆ ಕೇವಲ 23-25 ಸಾವಿರ ಲೀಟರ್ ಹಾಲು ಮಾತ್ರ ಉತ್ಪಾದನೆ ಆಗುತ್ತಿದೆ. ಹಾಗಾಗಿ ಜಿಲ್ಲೆಗೆ ಅಗತ್ಯ ಇರುವ ಬೇಡಿಕೆಯನ್ನು ಪಕ್ಕದ ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಿಂದ ಪೂರೈಕೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಇರುವುದು ಕೇವಲ 39 ಹಾಲು ಉತ್ಪಾದಕರ ಸಹಕಾರ ಸಂಘಗಳು. ಪೊನ್ನಂಪೇಟೆ ತಾಲೂಕಿನಲ್ಲಿ ಒಂದೇ ಒಂದು ಸಂಘವೂ ಇಲ್ಲ. ವಿರಾಜಪೇಟೆ ತಾಲೂಕಿನಲ್ಲಿ 2 ಮತ್ತು ಮಡಿಕೇರಿಯಲ್ಲಿ ಕೇವಲ 1 ಸಂಘ ಇದೆ. ಇನ್ನು ಉಳಿದಿರುವ ಸಂಘಗಳು ಕುಶಾಲನಗರ ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ ಇವೆ. ಹಾಲು ಉತ್ಪಾದನೆಯಲ್ಲಿ ಕುಶಾಲನಗರ ತಾಲೂಕಿನ ಸಂಘಗಳು ಮುಂದಿವೆ.

ಕೊಡಗಿನಲ್ಲಿ ಹಾಲು ಉತ್ಪಾದನೆ ಕಡಿಮೆ ಇರುವುದರಿಂದ ಇಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಂಖ್ಯೆ ಕಡಿಮೆ ಇದೆ. ಒಂದು ಸಂಘ ಯಶಸ್ವಿಯಾಗಿ ಕಾರ್ಯನಿರ್ವಹಿಸಬೇಕಾದರೆ ಕನಿಷ್ಠ ಪ್ರತಿನಿತ್ಯ 200 ಲೀಟರ್ ಹಾಲು ಉತ್ಪಾದನೆಯಾಗಲೇಬೇಕು. ಆದರೆ ಎಲ್ಲಾ ಕಡೆಗಳಲ್ಲಿ ಇಷ್ಟೊಂದು ಪ್ರಮಾಣದ ಹಾಲು ಉತ್ಪಾದನೆಯಾಗುವುದು ಜಿಲ್ಲೆಯಲ್ಲಿ ಅಸಾಧ್ಯ. ಇಲ್ಲಿ ಮನೆಯಿಂದ ಮನೆಗೆ ಹೆಚ್ಚು ಅಂತರ ಇರುವುದರಿಂದ ಒಂದು ಕಡೆ ಹಾಲು ಸಂಗ್ರಹಣಾ ಕೇಂದ್ರ ತೆರೆಯುವುದೂ ಕಷ್ಟ. ಜಿಲ್ಲೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಂಖ್ಯೆ ಕಡಿಮೆ ಇರುವುದರಿಂದ ಕೊಡಗಿಗೆ ಪ್ರತ್ಯೇಕ ಹಾಲು ಒಕ್ಕೂಟ ಇಲ್ಲ. ಹಾಗಾಗಿ ಹಾಸನ ಜಿಲ್ಲಾ ಸಹಕಾರ ಹಾಲು ಒಕ್ಕೂಟದೊಂದಿಗೆ ಸೇರಿಕೊಂಡಿದೆ. ಜಿಲ್ಲೆಯ ಏಕೈಕ ಡೇರಿ ಕೂಡಿಗೆಯಲ್ಲಿ ಇದೆ.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 72 ಸಾವಿರದಷ್ಟು ಜಾನುವಾರುಗಳಿವೆ. ಇದರಲ್ಲಿ 36 ಸಾವಿರದಷ್ಟು ಸಂಖ್ಯೆಯಲ್ಲಿ ಮಿಶ್ರತಳಿ ಹಸುಗಳಿವೆ. ಕೊಡಗಿನಲ್ಲಿ ಹಲವೆಡೆ ಮೊದಲಿನಿಂದಲೂ ಸಾಂಪ್ರದಾಯಿ ಪಶುಪಾಲನೆ ಮಾಡಿಕೊಂಡು ಬರಲಾಗುತ್ತಿದ್ದು, ನಾಟಿ ಹಸುಗಳ ಸಾಕಾಣಿಕೆ ಈಗಲೂ ಅಲ್ಲಲ್ಲಿ ಕಾಣಬಹುದು. ಆದರೆ ಇದರಲ್ಲಿ ಹಾಲು ಉತ್ಪಾದನೆ ಬಹಳ ಕಡಿಮೆ. ಮತ್ತೊಂದು ಕಡೆ ಕೆಲವು ಪ್ರಗತಿಪರ ಕೃಷಿಕರು ಪಶುಪಾಲನೆ ಮೂಲಕ ಬದುಕು ಕಟ್ಟಿಕೊಂಡಿದ್ದಾರಾದರೂ ಇಂಥವರ ಸಂಖ್ಯೆ ಕಡಿಮೆ ಇದೆ.

ಜಿಲ್ಲೆಯಲ್ಲಿ ಪಶುಪಾಲನೆ ಕುಂಠಿತವಾಗಲು ಮೇವಿನ ಕೊರತೆಯೂ ಕಾರಣವಾಗಿದೆ. ಮೊದಲೆಲ್ಲಾ ಕೊಡಗಿನಲ್ಲಿ ಯಥೇಚ್ಛವಾಗಿ ಭತ್ತ ಬೆಳೆಯಲಾಗುತ್ತಿತ್ತು. ಹಾಗಾಗಿ ಮೇವಿಗೆ ಹುಲ್ಲಿನ ಲಭ್ಯತೆ ಸಾಕಷ್ಟು ಇರುತ್ತಿತ್ತು. ಗದ್ದೆ ಬಯಲುಗಳಲ್ಲಿ ಜಾನುವಾರುಗಳನ್ನು ಬಿಟ್ಟು ಮೇಯಿಸುವ ಅವಕಾಶವೂ ಇತ್ತು. ಆದರೆ ಈಗ ಗದ್ದೆಗಳೂ ಮಾಯವಾಗುತ್ತಿದೆ. ಸೀಮಿತ ಪ್ರದೇಶದಲ್ಲಿ ಭತ್ತ ಬೆಳೆಯುತ್ತಿದ್ದರೂ ಹುಲ್ಲು ಪಕ್ಕದ ಕೇರಳಕ್ಕೆ ರವಾನೆ ಆಗುತ್ತಿದೆ. ಇದರಿಂದಾಗಿ ಸ್ಥಳೀಯವಾಗಿ ಪಶುಪಾಲನೆಗೆ ಮೇವಿನ ಕೊರತೆ ಕಾಡುತ್ತಿದೆ.

ವನ್ಯಜೀವಿ-ಮಾನವ ಸಂಘರ್ಷವೂ ಪಶುಪಾಲನೆಯ ಹಿನ್ನಡೆಗೆ ಮತ್ತೊಂದು ಕಾರಣವಾಗಿದೆ. ಬೇಸಿಗೆ ಸಂದರ್ಭ ಹುಲಿ ಹಾವಳಿ ವಿಪರೀತವಾಗಿ ಕಾಣಿಸಿಕೊಳ್ಳುತ್ತಿದ್ದು, ಹುಲಿಗಳ ನೇರ ಬೇಟೆ ಮನೆಯಲ್ಲಿ ಸಾಕಿರುವ ಹಸುಗಳೇ ಆಗಿರುತ್ತದೆ. ಕಾಡಂಚಿನ ಪ್ರದೇಶಗಳಲ್ಲಿ ಪ್ರತಿವರ್ಷವೂ ನೂರಕ್ಕೂ ಅಧಿಕ ಜಾನುವಾರುಗಳು ಹುಲಿ ಬಾಯಿಗೆ ಆಹಾರವಾಗುವುದು ಸಾಮಾನ್ಯವಾಗಿದೆ. ಹಾಗಾಗಿ ಬಹುತೇಕರು ಇತ್ತೀಚಿನ ವರ್ಷಗಳಲ್ಲಿ ಪಶುಪಾಲನೆಯಿಂದ ವಿಮುಖರಾಗಿದ್ದಾರೆ. ಅರಣ್ಯ ಇಲಾಖೆ ಮೂಲಕ ಕೊಟ್ಟಿಗೆ ಕಟ್ಟಲು ಧನಸಹಾಯದಂತ ಯೋಜನೆಗಳಿದ್ದರೂ ಜಾನುವಾರು ಸಾಕಲು ಈಗ ಯಾರು ಕೂಡ ಮುಂದೆ ಬಾರದ ಪರಿಸ್ಥಿತಿ ಇದೆ.

ಕೊಡಗಿನಲ್ಲಿ ಅನೇಕ ಕೃಷಿಕರು ಏರುತ್ತಿರುವ ಕೂಲಿ, ಹವಾಮಾನ ವೈಪರೀತ್ಯ, ಕಡಿಮೆ ಬೆಲೆ ಸೇರಿದಂತೆ ಮೊದಲಾದ ಕಾರಣಗಳಿಗೆ ಭತ್ತದ ಬೆಳೆಯುವುದನ್ನು ಬಿಟ್ಟಿದ್ದಾರೆ. ವರ್ಷದಿಂದ ವರ್ಷಕ್ಕೆ ಭತ್ತ ಬೆಳೆಯುವ ಪ್ರದೇಶ ಕಡಿಮೆಯಾಗುತ್ತಿದೆ. ಹೆಚ್ಚಿನ ರೈತರು ತಮ್ಮ ಗದ್ದೆಗಳನ್ನು ಪಾಳು ಬಿಡುತ್ತಿದ್ದಾರೆ. ಕೆಲವರು ಸಿಕ್ಕಷ್ಟು ಹಣಕ್ಕೆ ಹೊರಗಿನ ರಾಜ್ಯದವರಿಗೆ ಭತ್ತ ಬೆಳೆಯುವ ಅಮೂಲ್ಯ ಭೂಮಿ ಮಾರಾಟ ಮಾಡುತ್ತಿದ್ದಾರೆ. ಇದರ ಬದಲು, ಇಂಥ ಪಾಳುಬಿದ್ದ ಗದ್ದೆಗಳಲ್ಲಿ ಭತ್ತದ ಕೃಷಿ ಮಾಡಲು ಸಾಧ್ಯವಾಗದೇ ಹೋದರೂ ಮೇವಿನ ಸಸಿಗಳನ್ನು ಹಾಕಿ ಅದರಿಂದ ಹಸುಗಳನ್ನು ಸಾಕಿ, ಮೇವು ಒದಗಿಸುವ ಅವಕಾಶ ಇದೆ. ಇಂತಹ ಎಲ್ಲ ಬಗೆಯ ಸಾಧ್ಯತೆಗಳ ಕುರಿತು ಸಂಬAಧಪಟ್ಟ ಇಲಾಖೆಗಳು ಗಮನ ಹರಿಸಿದರೆ, ಕೊಡಗಿನಲ್ಲೂ ಹೈನೋದ್ಯಮ ಬೆಳೆಸಬಹುದಾಗಿದೆ ಎನ್ನುತ್ತಾರೆ ಅನುಭವಿಗಳು. ಹೈನೋದ್ಯಮಕ್ಕೆ ವಿವಿಧ ಯೋಜನೆಗಳ ಅಡಿ ಸಾಲಸೌಲಭ್ಯಗಳು ದೊರೆಯುತ್ತವೆ. ವಿಶೇಷವಾಗಿ, ನಬಾರ್ಡ್ ಸಾಲ ನೀಡುತ್ತದೆ. ಸಣ್ಣಪುಟ್ಟ ನೌಕರಿ ಮಾಡುವುದಕ್ಕಿಂತ 4 ಹಸುಗಳನ್ನು ಸಾಕುವುದು ಉತ್ತಮ ಎಂಬ ಭಾವನೆ ಯುವ ತಲೆಮಾರಿನಲ್ಲಿ ಬೇರೂರುವಂತೆ ಮಾಡಬೇಕಿದೆ. ಇದಕ್ಕೆ ಬೇಕಾದ ಮೇವು, ಜಾಗ, ಮಾರುಕಟ್ಟೆ, ಸಾಲ ಸೌಲಭ್ಯ ಎಲ್ಲವೂ ಸಿಗುತ್ತಿರುವ ಕುರಿತು ಅರಿವು ಮೂಡಿಸಬೇಕಿದೆ. ಸೂಕ್ತ ತರಬೇತಿ ನೀಡಿದರೆ ನಿಜಕ್ಕೂ ಹೈನೋದ್ಯಮ ಕ್ಷೇತ್ರದಲ್ಲಿ ಕೊಡಗು ಮುಂಚೂಣಿಗೆ ಬರಲಿದೆ. ಜಿಲ್ಲೆಯಲ್ಲಿ ಬಡವರು ಮತ್ತು ಮಧ್ಯಮ ವರ್ಗದವರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರಿಗೆ ಹೈನೋದ್ಯಮದ ಸೂಕ್ತ ತರಬೇತಿ ನೀಡಿದರೆ ಹಸುಗಳನ್ನು ಸಾಕಿ ಆದಾಯ ಗಳಿಸುವ ಅವಕಾಶ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net