

ಮಡಿಕೇರಿ:
ಕೃಷಿ ಪ್ರಧಾನ ಕೊಡಗಿನಲ್ಲಿ ಹೈನೋದ್ಯಮ ಅಷ್ಟೊಂದು ಪ್ರಗತಿ ಸಾಧಿಸಿಲ್ಲ. ಅವಿಭಜಿತ ಸೋಮವಾರಪೇಟೆ ತಾಲೂಕು ಹೊರತುಪಡಿಸಿದರೆ ಉಳಿದ ತಾಲೂಕುಗಳಲ್ಲಿ ಹಾಲು ಉತ್ಪಾದನೆ ವಾಣಿಜ್ಯಿಕವಾಗಿ ನಡೆಯುತ್ತಿಲ್ಲ. ಸಾಮಾನ್ಯವಾಗಿ ರೈತ ಕುಟುಂಬಗಳಲ್ಲಿ ಜಾನುವಾರುಗಳು ಇದ್ದರೂ ದೇಶೀಯ ಹಸುಗಳನ್ನೇ ಹೆಚ್ಚಾಗಿ ಸಾಕುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಸ್ವ-ಉಪಯೋಗಕ್ಕೆ ತಕ್ಕಷ್ಟು ಹಾಲು ಮಾತ್ರ ಉತ್ಪಾದನೆ ಆಗುತ್ತಿದೆ. ಉಳಿದಂತೆ ನಂದಿನಿ ಹಾಲೇ ಎಲ್ಲಾ ಬೇಡಿಕೆಗಳನ್ನು ಪೂರೈಸುತ್ತಿದೆ.
ಕೊಡಗು ಹಾಲಿನ ಉತ್ಪಾದನೆಯಲ್ಲಿ ಹಿಂದೆ ಇದ್ದರೂ ರಾಜ್ಯದ ಮೊದಲ ಡೇರಿ ಸ್ಥಾಪನೆಯಾಗಿದ್ದು ಕೊಡಗಿನಲ್ಲಿ. ಮಡಿಕೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡೇರಿಯನ್ನು 1952ರಲ್ಲಿ ಕುಶಾಲನಗರ ತಾಲೂಕಿನ ಕೂಡಿಗೆಗೆ ಸ್ಥಳಾಂತರಿಸಲಾಯಿತು. ಆಗ ಇದು ಹಾಲಿನ ಸಂಸ್ಕರಣಾ ತರಬೇತಿ ಘಟಕವಾಗಿ ಕಾರ್ಯನಿರ್ವಹಿಸುತ್ತಿತ್ತು. 1987ರಲ್ಲಿ ಕೂಡಿಗೆ ಡೇರಿಯನ್ನು ಹಾಸನ ಹಾಲು ಒಕ್ಕೂಟದೊಂದಿಗೆ ವಿಲೀನಗೊಳಿಸಲಾಯಿತು. ಈಗಲೂ ಕೊಡಗು ಹಾಸನ ಹಾಲು ಒಕ್ಕೂಟದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಜಿಲ್ಲೆಯಲ್ಲಿ 5 ತಾಲೂಕುಗಳಿಂದ ಕೂಡಿಗೆ ಡೇರಿಗೆ ಬರುವ ಹಾಲು ಸುಮಾರು 12 ಸಾವಿರ ಲೀ. ಆದರೆ ಇಲ್ಲಿ ದಿನಕ್ಕೆ 49 ಸಾವಿರ ಲೀ.ಗಳಷ್ಟು ಹಾಲಿಗೆ ಬೇಡಿಕೆ ಇದೆ. ಕುಶಾಲನಗರ ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ ಹೈನೋದ್ಯಮ ಉತ್ತಮವಾಗಿ ನಡೆಯುತ್ತಿದ್ದು, ಉಳಿದ ತಾಲೂಕುಗಳಲ್ಲಿ ಹೇಳಿಕೊಳ್ಳುವಂತೆ ಹಾಲಿನ ಉತ್ಪಾದನೆ ಕಂಡು ಬರುತ್ತಿಲ್ಲ.
ಈ ಮಧ್ಯೆ ಕೊಡಗಿಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ ತನ್ನ ಆಶಯ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಈ ಮಾತು ಹೈನೋದ್ಯಮಿಗಳಲ್ಲಿ ಹೊಸ ನಿರೀಕ್ಷೆಗಳು ಗರಿಗೆದರುವಂತೆ ಮಾಡಿದೆ. ಪ್ರತ್ಯೇಕ ಒಕ್ಕೂಟ ರಚನೆ ಆದರೆ ಹಾಲಿನ ಬೇಡಿಕೆ ಹೆಚ್ಚಾಗುತ್ತದೆ. ಇದರಿಂದ ಸ್ಥಳೀಯವಾಗಿ ಹಾಲಿನ ಉತ್ಪಾದನೆ ಹೆಚ್ಚು ಮಾಡಲು ಅಗತ್ಯ ಪ್ರೋತ್ಸಾಹ ಸಿಗುತ್ತದೆ, ಈ ಮೂಲಕ ಆರ್ಥಿಕವಾಗಿ ಸಬಲೀಕರಣ ಸಾಧಿಸಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಈ ಬಗ್ಗೆ ಲೌಡ್‌ಸ್ಪೀಕರ್‌ನಲ್ಲಿ ವಿಜಯವಾಣಿ ಓದುಗರು ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.
ಕೊಡಗಿನಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆಯ ಬಗ್ಗೆ ಶಾಸಕರು ಹೇಳಿರುವಂಥ ಮಾತು ಸ್ವಾಗತಾರ್ಹ. ಕೊಡಗಿನಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆಗೂ ಮೊದಲು ಜಿಲ್ಲೆಯಲ್ಲಿ ಹೈನುಗಾರಿಕೆಯನ್ನು ಬಲಪಡಿಸಬೇಕು. ಅದರೊಂದಿಗೆ ಪಶು ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ನಂತರ ಒಕ್ಕೂಟ ಸ್ಥಾಪಿಸಿದರೆ ಒಳಿತು. ಇಲ್ಲದಿದ್ದರೆ ಒಕ್ಕೂಟಕ್ಕೆ ಕನಿಷ್ಠ ಪ್ರಮಾಣದ ಹಾಲು ಕೂಡ ದೊರಕುವುದು ಕಷ್ಟ ಆಗಬಹುದು.
ಕೆ.ಕೆ. ಮುತ್ತಣ್ಣ, ವಿರಾಜಪೇಟೆ
ಕೊಡಗು ಹೈನುಗಾರಿಕೆಗೆ ಪೂರಕವಾಗಿದೆ. ಹಸುಗಳ ಆಹಾರಕ್ಕೆ ಯಥೇಚ್ಚವಾಗಿ ಹುಲ್ಲು ಸಿಗುತ್ತದೆ. ಆದರೆ ಪ್ರೋತ್ಸಾಹದ ಕೊರತೆಯಿಂದ ಜನರು ಹೈನುಗಾರಿಕೆ ತ್ಯಜಿಸಿದ್ದಾರೆ. ಪಶುವೈದ್ಯಕೀಯ ಆಸ್ಪತ್ರೆಗಳಲ್ಲಿ ವೈದ್ಯರೇ ಇಲ್ಲದಂತಾಗಿದೆ. ಯಾವುದೇ ಉಚಿತ ಸೌಲಭ್ಯಗಳು ರೈತರಿಗೆ ಸಿಗುತ್ತಿಲ್ಲ. ಸರ್ಕಾರ ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು.
ಎಚ್.ಎನ್. ಶಿವರಾಜ್, ಹೈನೋದ್ಯಮಿ, ಹಿರಿಕರ ಗ್ರಾಮ
ಕೊಡಗಿನಲ್ಲಿ ಕೆಲವು ಪ್ರದೇಶದಲ್ಲಿ ಮಾತ್ರ ಹೈನುಗಾರಿಕೆ ನಡೆಯುತ್ತಿದೆ. ಇಲ್ಲಿಗೆ ಬೇಕಾದ ಹಾಲು ಹೊರ ಜಿಲ್ಲೆಗಳಿಂದ ತರಿಸಿಕೊಳ್ಳುವ ಪರಿಸ್ಥಿತಿ ಇರುವುದು ದುರಂತ. ಕೊಡಗಿನಲ್ಲಿ ಹೈನುಗಾರಿಕೆ ಮಾಡಲು ಯೋಗ್ಯವಾದ ಸ್ಥಳವಾಗಿದ್ದು, ಇದಕ್ಕೆ ಪ್ರೋತ್ಸಾಹಿಸಿ ಬೆಂಬಲಿಸಬೇಕಿದೆ. ಈ ನಿಟ್ಟಿನಲ್ಲಿ ಒಕ್ಕೂಟ ಸ್ಥಾಪನೆ ಒಳ್ಳೆಯ ಬೆಳವಣಿಗೆ.
ಡಿ.ಬಿ. ಸೋಮಪ್ಪ, ನಿವೃತ್ತ ಶಿಕ್ಷಕ, ಶನಿವಾರಸಂತೆ
ಇತ್ತೀಚಿಗೆ ಕೊಡಗಿನಲ್ಲಿ ಜಾನುವಾರು ಸಂಖ್ಯೆ ಕಡಿಮೆಯಾಗಿದ್ದು, ಗ್ರಾಮೀಣ ಭಾಗದಲ್ಲಿ ಈ ಹಿಂದೆ ಪ್ರತಿ ಮನೆಯಲ್ಲೂ ಜಾನುವಾರುಗಳು ಇರುತ್ತಿತ್ತು. ಆದರೆ ಈಗ ಅವುಗಳು ಮಾಯವಾಗಿದೆ. ಜಾನುವಾರು ಸಾಕಾಣೆಗೆ ಹೆಚ್ಚು ಪ್ರೋತ್ಸಾಹಿಸ ಬೇಕಿದೆ. ಜಿಲ್ಲೆಯಲ್ಲಿ ಹಾಲಿನ ಬೇಡಿಕೆ ಹೆಚ್ಚಿದೆ. ಜಾನುವಾರು ಮಾರುಕಟ್ಟೆ ಸೃಷ್ಟಿಯಾಗಬೇಕು. ಕೊಡಗಿನಲ್ಲಿ, ಜಾನುವಾರು ಸಾಕಾಣಿಕೆ ಮಾಡಲು ವಿಶೇಷ ಅನುದಾನ ಇಡಬೇಕು. ಒಕ್ಕೂಟ ಸ್ಥಾಪನೆಯ ಭರವಸೆ ಬೇಗ ಈಡೇರಲಿ.
ಪೂರ್ಣಿಮಾ ಕಿರಣ್, ಗ್ರಾಮ ಪಂಚಾಯತ್ ಸದಸ್ಯೆ, ದುಂಡಳ್ಳಿ
ಕೊಡಗಿನಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ ಬಗ್ಗೆ ಶಾಸಕ ಡಾ. ಮಂತರ್ ಗೌಡ ಹೇಳಿರುವುದು ಪ್ರಶಂಸನೀಯವಾದುದು. ಇದರಿಂದ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಆದ್ಯತೆ ಹಾಗೂ ಪ್ರೋತ್ಸಾಹದಿಂದ ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆ ಅಭಿವೃದ್ಧಿಗೊಳ್ಳುವ ಸಾಧ್ಯತೆ ಇದೆ.
ಕುಂಜಿಲನ ಮಂಜುನಾಥ್, ಅಧ್ಯಕ್ಷ, ಸುಂಟಿಕೊಪ್ಪ ನಾಡು ಗೌಡ ಸಂಘ
ಜಿಲ್ಲೆಯಲ್ಲಿ ಭತ್ತದ ಕೃಷಿ ಮಾಯವಾಗುತ್ತಾ ತೋಟಗಾರಿಕೆಯತ್ತ ಸಂಪೂರ್ಣ ವಾಲಿಕೊಂಡಿದೆ. ಇದರಿಂದ ಹೈನುಗಾರಿಕೆಗೆ ಪ್ರತಿಕೂಲ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಕೃಷಿಕರು ಪಶು ಸಾಕಣೆಗೆ ಹಿಂದೇಟು ಹಾಕುತ್ತಿದ್ದಾರೆ. ಇದು ಹಾಲು ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ನೆರೆ ಜಿಲ್ಲೆ ಮೇಲೆ ಅವಲಂಬಿತವಾಗದೇ ನಮ್ಮ ಜಿಲ್ಲೆಯಲ್ಲಿ ಹಾಲು ಒಕ್ಕೂಟ ಸ್ಥಾಪನೆ ಮಾಡುವ ವಿಚಾರ ಒಳ್ಳೆಯದೇ. ಜತೆಗೆ ಹಾಲು ಉತ್ಪಾದಕರಿಗೆ ಸರ್ಕಾರ ಸಂಪೂರ್ಣ ಪ್ರೋತ್ಸಾಹ ನೀಡುವ ಅವಶ್ಯಕತೆ ಇದೆ.
ಕೊಡಪಾಲು ತೀರ್ಥ ಗಣಪತಿ, ಕೃಷಿಕ ಮಹಿಳೆ, ಕಾರುಗುಂದ ಗ್ರಾಮ
ಕಳೆದ 15 ವರ್ಷದಿಂದ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಮಾಲ್ದಾರೆ ಸುತ್ತಮುತ್ತಲಿನ ಮನೆ, ಹೊಟೇಲ್, ಕ್ಯಾಂಟೀನ್‌ಗಳಿಗೆ ಹಾಲು ಪೂರೈಸುತ್ತಿದ್ದೇನೆ. ಈ ಭಾಗದಲ್ಲಿ ಹಾಲು ಒಕ್ಕೂಟ ಸ್ಥಾಪಿಸಿದಲ್ಲಿ ಈ ವ್ಯಾಪ್ತಿಯ ರೈತರಿಗೆ ಹೆಚ್ಚು ಅನುಕೂಲವಾಗಲಿದೆ.
ಪುಷ್ಪ್ಪಾ, ಮಾಲ್ದಾರೆ ಗ್ರಾಮ
ಕೊಡಗಿನ ಗಡಿಯಾದ ಮಾಲ್ದಾರೆ ಗ್ರಾಮದಲ್ಲಿ ಹೆಚ್ಚು ರೈತರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಮಾಲ್ದಾರೆ ಭಾಗದಲ್ಲಿ ಪಶು ಆಸ್ಪತ್ರೆ ಇದ್ದರೂ, ವೈದ್ಯರಿಲ್ಲದಿರುವುದು ಸಮಸ್ಯೆಯಾಗಿದೆ. ಅನಾರೋಗ್ಯ ಸಂಭವಿಸಿದಾಗ 25 ಕಿಲೋ ಮೀಟರ್ ದೂರದ ವಿರಾಜಪೇಟೆ ತಾಲೂಕು ಆಸ್ಪತ್ರೆಗೆ ಕರೆದೊಯ್ಯಬೇಕಾಗಿದೆ. ಕೆಲವೊಮ್ಮೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಒಕ್ಕೂಟ ಮೂಲಕ ಇದಕ್ಕೆಲ್ಲಾ ಪರಿಹಾರ ಸಿಗುವ ನಿರೀಕ್ಷೆ ಇದೆ.
ಚಮ್ಮಂಡ ಜಿಮ್ಮಿ, ರೈತ ಮಾಲ್ದಾರೆ
ಹಾಲಿನ ಮಾರಾಟದಿಂದ ರೈತರಿಗೆ ಆದಾಯ ಬರುತ್ತಿದ್ದು, ಇದರಿಂದ ಅನೇಕ ರೈತ ಕುಟುಂಬಗಳು ಅಭಿವೃದ್ಧಿ ಹೊಂದಿವೆ. ರೈತರು ಗುಣಮಟ್ಟದ ಹಾಲಿನ ಉತ್ಪಾದನೆಗೆ ಹೆಚ್ಚಿನ ಗಮನ ಹರಿಸಬೇಕು. ಹಾಲಿನ ಉತ್ಪಾದನೆ ಹೆಚ್ಚಳದಿಂದ ರೈತರಿಗೆ ಲಾಭವಾಗುತ್ತದೆ. ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಉತ್ಪಾದಕರ ಒಕ್ಕೂಟ ಸ್ಥಾಪನೆಯಾಗಬೇಕು ಎಂಬುದು ನನ್ನ ಆಶಯವಾಗಿದೆ.
ಡಾ. ಮಂತರ್ ಗೌಡ, ಮಡಿಕೇರಿ ಶಾಸಕ