

ಉಡುಪಿ: ಶನಿವಾರ... ಮನೆಯಲ್ಲಿ ಪುಟ್ಟ ಮಕ್ಕಳು ಕೆಲಸಕ್ಕೆ ಹೋದ ತಮ್ಮ ತಂದೆ, ತಾಯಿ ಏನಾದರೂ ತಿಂಡಿ ತರುವರೋ ಎಂದು ಕಾತರದಿಂದ ಕಾಯುವ ದಿನ. ವಾರದ ದಿನಸಿ ತರಲು ಹಣ ಹೊಂದಿಸಲು ಹೆಣಗಾಡುವ, ಆರು ದಿನ ತಾವು ಮಾಡಿದ ಕೆಲಸದ ವೇತನ ಪಡೆಯುವ ದಿನ. ಆದರೆ ವೀಕೆಂಡ್ ಕರ್ಫ್ಯೂ ಘೋಷಣೆಯಾಗಿದ್ದರಿಂದ ಶನಿವಾರದ ಖುಷಿ ಹಲವರಲ್ಲಿ ಮಾಯವಾಗುತ್ತಿದೆ.
ಕರೊನಾ ಎರಡನೇ ಅಲೆ ನಿಯಂತ್ರಿಸಲು ಸರ್ಕಾರ ರಾತ್ರಿ ಕರ್ಫ್ಯೂ ಜತೆಗೆ ಶನಿವಾರ, ಭಾನುವಾರ ಎರಡು ದಿನ ಪೂರ್ತಿ ಲಾಕ್‌ಡೌನ್ ಘೋಷಿಸಿದೆ. ಇದರಿಂದ ಪರೋಕ್ಷವಾಗಿ ವಾರದ ವೇತನ ಪಡೆಯುವ ಕಾರ್ಮಿಕರಿಗೆ ಹೊಡೆತ ಬಿದ್ದಂತಾಗಿದೆ. ಕಾರ್ಮಿಕರು ಒಂದು ದಿನದ ಕೆಲಸ ಕಳೆದುಕೊಳ್ಳುವ ಜತೆಗೆ ಆ ದಿನದ ವೇತನದಿಂದ ನೆಚ್ಚಿಕೊಂಡಿರುವ ಯಾವುದಾದರೂ ಖರೀದಿ, ಸಾಲ ಇತ್ಯಾದಿಗಳಿಗೆ ಹೆಣಗಾಡಬೇಕಾದ ಸ್ಥಿತಿ ಬರಲಿದೆ. ಇದೇ ವೇಳೆ ಗುತ್ತಿಗೆದಾರರೂ ಕಷ್ಟಕ್ಕೆ ಸಿಲುಕಲಿದ್ದು ಕಾರ್ಮಿಕರು ಒಂದು ದಿನ ಕೆಲಸ ಮಾಡದೆ ಹೋದರೆ ಆ ದಿನದ ನಷ್ಟದ ಪಾಲು ತಾವೇ ಹೊರಬೇಕಾಗುತ್ತದೆ.
ರಾಜ್ಯ ಸರ್ಕಾರದ ಹೊಸ ಕೋವಿಡ್ ಮಾರ್ಗಸೂಚಿ ಪ್ರಕಾರ ಕಟ್ಟಡ ನಿರ್ಮಾಣ ಕಾಮಗಾರಿಗೆ ಅವಕಾಶ ನೀಡಲಾಗಿದೆ. ಇದರಿಂದ ಕಾರ್ಮಿಕರಿಗೆ ಅನುಕೂಲವಾಗಿದ್ದರೂ ಶನಿವಾರ ಮತ್ತು ಭಾನುವಾರ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ರಜೆ ಅನಿವಾರ್ಯವಾಗಿದೆ.
ವಾರಾಂತ್ಯ ಕರ್ಫ್ಯೂ ಹೇರಿದ್ದರೂ ಕಟ್ಟಡ ನಿರ್ಮಾಣ ಕಾಮಗಾರಿ ಮತ್ತು ದುರಸ್ತಿ ಚಟುವಟಿಕೆಗಳಿಗೆ ಅವಕಾಶವಿದೆ. ಆದರೆ ಕಾರ್ಮಿಕರು ಗಮ್ಯ ಸ್ಥಾನಕ್ಕೆ ಹೋಗುವುದು ಹೇಗೆ? ವಾರಾಂತ್ಯ ಕರ್ಫ್ಯೂ ಎಂದ ಮೇಲೆ ಬಸ್ ಸಂಚಾರ ಬಹುತೇಕ ಬಂದ್ ಆಗುತ್ತದೆ. ಇತರೆ ಖಾಸಗಿ ವಾಹನಗಳೂ ಸಾಗುವಂತಿಲ್ಲ. ಹೀಗಾದರೆ ದಿನಗೂಲಿ ನೌಕರರು ಕೆಲಸಕ್ಕೆ ಹೋಗುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಬಸ್ ಇಲ್ಲದ ಕಾರಣ ಗಮ್ಯ ಸ್ಥಾನಕ್ಕೆ ಬಾಡಿಗೆ ವಾಹನಗಳಲ್ಲಿ ಕರೆದುಕೊಂಡು ಬರಬೇಕು. ಬಾಡಿಗೆ ವಾಹನದಲ್ಲೂ ಹೆಚ್ಚುವರಿ ಕಾರ್ಮಿಕರನ್ನು ಹಾಕುವಂತಿಲ್ಲ. ಹೆಚ್ಚು ಕಾರ್ಮಿಕರು ಸೇರುವುದಕ್ಕೆ ನಿರ್ಬಂಧವೂ ಇರುವುದರಿಂದ ಸೀಮಿತ ಸಂಖ್ಯೆಯಲ್ಲಿ ಕಾಮಗಾರಿ ನಡೆಸುವುದು ಅನಿವಾರ್ಯ. ಶಾಲಾ ಕಾಲೇಜುಗಳಿಗೆ ರಜೆ, ಇತರ ಕಚೇರಿಗಳಲ್ಲಿ ಶೇ.50ರಷ್ಟು ಸಿಬ್ಬಂದಿಗೆ ಕೆಲಸಕ್ಕೆ ಅವಕಾಶ ಇರುವುದರಿಂದ ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಾದರೆ ಅನೇಕ ಮಾರ್ಗಗಳಲ್ಲಿ ಬಸ್ ಸಂಚಾರವೂ ಕಡಿಮೆಯಾಗಲಿದೆ.
ಸಂಬಳ ಪಾವತಿ ಸಮಸ್ಯೆ
ಪ್ರತಿ ಶನಿವಾರ ಕಟ್ಟಡ ಮತ್ತು ನಿರ್ಮಾಣ ಕಾಮಗಾರಿ ಕೈಗೊಳ್ಳುವ ಕಾರ್ಮಿಕರಿಗೆ ಸಂಬಳ ನೀಡುವ ಪದ್ಧತಿ ಇದ್ದು, ಗುತ್ತಿಗೆದಾರರು ಶುಕ್ರವಾರವೇ ಹಣ ಪಾವತಿಸಬೇಕಿದೆ. ಬ್ಯಾಂಕ್ ಖಾತೆ ಹೊಂದಿರುವವರಿಗೆ ಸಂಬಳ ಹಣ ನೇರ ಖಾತೆಗೆ ಜಮೆ ಮಾಡಲು ಕೆಲವು ಗುತ್ತಿಗೆದಾರರು ಚಿಂತನೆ ನಡೆಸುತ್ತಿದ್ದಾರೆ. ಗೋಡಂಬಿ ಕಾರ್ಖಾನೆಗೆ ತೆರಳುವವರು, ಬೀಡಿ ಕಟ್ಟುವವರು, ವಾರದ ಸಂಬಳದ ಮೇಲೆ ಅವಲಂಬಿತವಾಗಿರುವ ಇತರೆ ಕೆಲವರು ಈ ಬಾರಿ ಶನಿವಾರದ ದಿನ ಕೆಲಸಕ್ಕೆ ಹೋಗಲಾಗದೆ ಚಡಪಡಿಸುವಂತಾಗಿದೆ.
ಕೋವಿಡ್ ಮಾರ್ಗಸೂಚಿ ಸವಾಲು
ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಕೆಲಸದ ಸ್ಥಳದಲ್ಲಿ ಕೋವಿಡ್ ಮಾರ್ಗಸೂಚಿ ಪಾಲಿಸುವುದು ಸವಾಲಿನ ಕೆಲಸ. ಹೊರಜಿಲ್ಲೆಯ ಕಾರ್ಮಿಕರೇ ಹೆಚ್ಚಾಗಿ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಕೊಂಡಿದ್ದು, ಅನೇಕ ಮಂದಿ ಲಾಕ್‌ಡೌನ್ ಹೆದರಿಕೆಯಿಂದ ಊರಿಗೆ ತೆರಳಿದರೆ ಈ ಹಿಂದಿನಂತೆ ಕಾರ್ಮಿಕರ ಕೊರತೆಯಾಗಲಿದೆ ಎಂಬ ಆತಂಕ ಸಿವಿಲ್ ಗುತ್ತಿಗೆದಾರರನ್ನು ಕಾಡುತ್ತಿದೆ.
ವಾರಾಂತ್ಯ ಕರ್ಫ್ಯೂ ವಿಧಿಸಲಾಗಿದ್ದರೂ ಕಟ್ಟಡ ಮತ್ತು ನಿರ್ಮಾಣ ಕಾಮಗಾರಿಗಳಿಗೆ ವಿನಾಯಿತಿ ನೀಡಲಾಗಿದೆ. ಆದರೆ ಬಸ್ ವ್ಯವಸ್ಥೆ ಇಲ್ಲದಿದ್ದರೆ ಕಾರ್ಮಿಕರನ್ನು ಕೆಲಸದ ಸ್ಥಳಕ್ಕೆ ಕರೆತರಲು ಮತ್ತು ವಾಪಸ್ ಕಳುಹಿಸಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾಗಬಹುದು. ಹೆಚ್ಚಿನ ಕಾರ್ಮಿಕರಿಗೆ ಶನಿವಾರ ಸಂಬಳ ನೀಡುವ ಪದ್ಧತಿ ಇದ್ದು, ಶುಕ್ರವಾರ ಅಥವಾ ಸೋಮವಾರ ಹಣ ಪಾವತಿಸುತ್ತೇವೆ. ಆನ್‌ಲೈನ್ ಮೂಲಕವೂ ಸಂಬಳ ನೀಡಬಹುದು.
ದಯಾನಂದ, ಸಿವಿಲ್ ಗುತ್ತಿಗೆದಾರ, ಪರ್ಕಳ
ಶಾಲಾ ಕಾಲೇಜುಗಳಿಗೆ ರಜೆ ಮತ್ತು ಇತರ ಕಚೇರಿಗಳಲ್ಲಿ ಶೇ.50ರಷ್ಟು ಸಿಬ್ಬಂದಿಗೆ ಕೆಲಸಕ್ಕೆ ಅವಕಾಶ ಇರುವುದರಿಂದ ಬಸ್‌ಗಳಲ್ಲಿ ತೆರಳುವ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಬಹುದು. ಹೀಗಾದರೆ ಬಸ್‌ಗಳ ಓಡಾಟ ನಡೆಸುವುದು ತೀರ ಕಷ್ಟ. ಡಿಸೇಲ್ ಹಣವೂ ಬರುತ್ತಿಲ್ಲ. ಹೀಗಾಗಿ ಅನೇಕ ಮಾರ್ಗಗಳಲ್ಲಿ ಬಸ್ ಸಂಚಾರ ಸ್ಥಗಿತವಾಗಲಿದೆ.
ಕುಯಿಲಾಡಿ ಸುರೇಶ ನಾಯಕ್, ಅಧ್ಯಕ್ಷ ಸಿಟಿ ಬಸ್ ಮಾಲೀಕರ ಸಂಘ, ಉಡುಪಿ