

ಆನೇಕಲ್: ಬನ್ನೇರುಟ್ಟ ಹಾಗೂ ಕೋಲಾರ ಸಮೀಪದ ಚಿಲ್ಲಪಲ್ಲಿ ಅಮಾನಿಕೆರೆ ವ್ಯಾಪ್ತಿಯ ಅರಣ್ಯದಲ್ಲಿ 9 ಜಿಂಕೆ ಹಾಗೂ 1 ಕಾಡು ಹಂದಿಯನ್ನು ಬೇಟೆಯಾಡಿದ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಬೇಟೆಗಾರರು ಕೋಲಾರ, ಬನ್ನೇರುಟ್ಟ ಮಾತ್ರವಲ್ಲದೆ ಬೇರೆ ಎಲ್ಲೆಲ್ಲಿ ಬೇಟೆ ಆಡುತ್ತಿದ್ದಾರೆ ಎನ್ನುವ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಪ್ರಕರಣದಲ್ಲಿ ಬನ್ನೇರುಟ್ಟ ಸಮೀಪದ ಗುಬ್ಬಲಾಳ ನಿವಾಸಿ ಪ್ರತಾಪ್ (31) ಬಂಧಿತನಾಗಿದ್ದು, ಪರಾರಿಯಾಗಿರುವ ಪ್ರಮುಖ ಆರೋಪಿಗಳಾದ ಬಾಲರಾಜ್ ಮತ್ತು ರಮೇಶ್ ಬಂಧನಕ್ಕೆ ಅರಣ್ಯಾಧಿಕಾರಿಗಳು ಬಲೆ ಬೀಸಿದ್ದಾರೆ.
ಜಿಂಕೆ ಮತ್ತು ಮಾಂಸಕ್ಕೆ ಬೇಡಿಕೆ ಹೆಚ್ಚಿದ್ದು, ಇವರ ನೆಟ್ವರ್ಕ್ ಇಟ್ಟುಕೊಂಡಿರುವ ಹಲವರು ಮಾಂಸಕ್ಕೆ ಬೇಡಿಕೆ ಇಡುತ್ತಿದ್ದರು. ಮಾಂಸಕ್ಕಾಗಿ ಪದೇಪದೆ ಕರೆಗಳು ಇವರಿಗೆ ಬರುತ್ತಿವೆ ಎಂದು ಕಗ್ಗಲಿಪುರ ವಲಯ ಅರಣ್ಯ ಅಧಿಕಾರಿ ಎನ್.ಆರ್.ಕಾಂಬ್ಳೆ ತಿಳಿಸಿದ್ದಾರೆ.
ಬನ್ನೇರುಟ್ಟ ಕಾಡಂಚಿನ ಸುತ್ತಮುತ್ತ ಜಿಂಕೆಗಳ ಸಂಖ್ಯೆ ದೊಡ್ಡ ಮಟ್ಟದಲ್ಲಿದ್ದು, ಕಾಡು ಹಂದಿಗಳು ಕೂಡ ಸಾಕಷ್ಟು ಇವೆ, ಈಗಾಗಲೇ ಬಂಧಿಸಲ್ಪಟ್ಟಿರುವ ಆರೋಪಿ ತನಿಖೆಯ ವೇಳೆ ನೀಡುತ್ತಿರುವ ಹೇಳಿಕೆಯನ್ನು ಆಧರಿಸಿ ಬನ್ನೇರುಟ್ಟ ಭಾಗದಲ್ಲಿಯೂ ಬೇಟೆ ಆಡಿದ್ದಾರೆಯೇ? ಅಥವಾ ಕೋಲಾರ ಭಾಗದಲ್ಲಿ ಮಾತ್ರವೇ ಬೇಟೆ ಆಡಿ ಮಾಂಸವನ್ನು ಈ ಭಾಗಕ್ಕೆ ತಂದು ಮಾರಾಟ ಮಾಡುತ್ತಿದ್ದರೆ? ಎನ್ನುವ ಬಗ್ಗೆಯೂ ತನಿಖೆ ಮುಂದುವರಿದಿದೆ.
ನೆಟ್ವರ್ಕ್ ದೊಡ್ಡದು : ಪ್ರತಿ ದಿನವೂ ಪ್ರಾಣಿಗಳನ್ನು ಬೇಟೆ ಆಡಿ ಮಾಂಸ ಮಾರಾಟ ಮಾಡಲಾಗುತ್ತಿತ್ತೇ ಎನ್ನುವ ಕುರಿತು ಹಿರಿಯ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಮಾಹಿತಿ ಕಲೆ ಹಾಕುತ್ತಿದ್ದು, ಆರೋಪಿ ಬಾಲರಾಜ್ ಇದೇ ದಂಧೆಯಲ್ಲಿ ಸಾಕಷ್ಟು ಹಣ ಮಾಡಿದ್ದಾನೆ ಹಾಗೂ ದೊಡ್ಡ ಮಟ್ಟದ ನೆಟ್ವರ್ಕ್ ಕೂಡ ಹೊಂದಿದ್ದಾನೆ ಎಂಬ ಮಾಹಿತಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗೊತ್ತಾಗಿದೆ.