

ಹರಿಪ್ರಸಾದ್ ನಂದಳಿಕೆ ಕಾರ್ಕಳ
ವಾಹನ ಸವಾರರ ಸುರಕ್ಷತೆಗೆ ಜಂಕ್ಷನ್ ಭಾಗದಲ್ಲಿ ರಸ್ತೆಗೆ ಇಟ್ಟಿದ್ದ ಬ್ಯಾರಿಕೇಡ್‌ಗಳು ಅಲ್ಲೋಲ ಕಲ್ಲೋಲವಾಗಿ ಅಪಘಾತಕ್ಕೆ ಎಡೆಮಾಡಿಕೊಡುವಂತಿದೆ. ಕಾರ್ಕಳ ನಗರದ ಕುಂಟಲ್ಪಾಡಿ ಜಂಕ್ಷನ್ ಭಾಗದ ರಸ್ತೆಯಲ್ಲಿ ಒಳರಸ್ತೆಯಿಂದ ಬರುವ ವಾಹನ ಹಾಗೂ ಸಾಣೂರು ಗ್ರಾಮ ಸಂಪರ್ಕಿಸುವ ರಸ್ತೆಯಿಂದ ಬರುವ ವಾಹನಗಳು ಸಡನ್ ಆಗಿ ರಾಜ್ಯ ಹೆದ್ದಾರಿಗೆ ಬರುವುದರಿಂದ ಅಪಘಾತಕ್ಕೆ ಕಾರಣವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕುಂಟಲ್ಪಾಡಿ ಜಂಕ್ಷನ್‌ನಲ್ಲಿ ರಾಜ್ಯ ಹೆದ್ದಾರಿಗೆ ನಾಲ್ಕು ಬ್ಯಾರಿಕೇಡ್ ಅಳವಡಿಸಲಾಗಿದ್ದು ವಾಹನದ ವೇಗ ತಡೆದು ಅಪಘಾತಕ್ಕೆ ಕಡಿವಾಣ ಹಾಕಲಾಗಿತ್ತು. ಆದರೆ ಇತ್ತೀಚಿನ ಕೆಲ ತಿಂಗಳಿಂದ ರಸ್ತೆಗೆ ಇಟ್ಟಿದ್ದ ಬ್ಯಾರಿಕೇಡ್ ರಸ್ತೆ ಬದಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ರಾತ್ರಿ ಹೊತ್ತಿನಲ್ಲಿ ಸಂಚರಿಸುವ ವಾಹನ ಸವಾರರಿಗೆ ಸಂಕಟ ತಂದೊಡ್ಡಿದೆ.
ಪಡುಬಿದ್ರಿ, ಬೆಳ್ಮಣ್, ನಿಟ್ಟೆ ಭಾಗದಿಂದ ರಾಜ್ಯ ಹೆದ್ದಾರಿಯಲ್ಲಿ ಬರುವ ವಾಹನಗಳು ಪುಲ್ಕೇರಿ ಬೈಪಾಸ್ ಆಗಿ ಮುಂದೆ ಧರ್ಮಸ್ಥಳ ಸುಬ್ರಹ್ಮಣ್ಯ, ಮೂಡುಬಿದಿರೆ ಭಾಗ ಸಂಪರ್ಕಿಸಲು ಇದೇ ರಸ್ತೆ ಅವಲಂಬಿಸಿದ್ದು, ಹೆಚ್ಚಿನ ವಾಹನಗಳು ಇದೇ ರಸ್ತೆಯಲ್ಲಿ ರಾತ್ರಿ, ಹಗಲು ಎನ್ನದೆ ಓಡಾಟ ನಡೆಸುತ್ತವೆೆ. ಅತೀ ಹೆಚ್ಚು ವಾಹನಗಳ ಓಡಾಟವಿರುವ ಪ್ರಮುಖ ಜಂಕ್ಷನ್ ಪ್ರದೇಶಗಳಲ್ಲಿ ಒಂದಾದ ಕುಂಟಲ್ಪಾಡಿ ಜಂಕ್ಷನ್‌ನಲ್ಲಿ ಬ್ಯಾರಿಕೇಡ್ ರಸ್ತೆ ಎರಡೂ ಬದಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಇರುವುದರಿಂದ ಅಪಘಾತಕ್ಕೆ ಕಾರಣವಾಗುತ್ತಿದೆ. ಕಳೆದ ಹಲವು ತಿಂಗಳಿಂದ ಸಮಸ್ಯೆಗಳಿದ್ದರೂ ಇಲ್ಲಿವರೆಗೂ ಬ್ಯಾರಿಕೇಡ್ ರಸ್ತೆಗೆ ಸರಿಯಾಗಿ ಇಡುವ ಇಲ್ಲವೇ ತೆರವುಗೊಳಿಸುವ ಕಾರ್ಯ ನಡೆದಿಲ್ಲ. ಹೀಗಾಗಿ ವಾಹನ ಸವಾರರಿಗೆ ನಿತ್ಯ ಸಮಸ್ಯೆ ತಪ್ಪಿದ್ದಲ್ಲ.
ರಾಜ್ಯ ಹೆದ್ದಾರಿಯಲ್ಲಿ ವೇಗವಾಗಿ ಬರುವ ವಾಹನಗಳು ಎದುರಿನಿಂದ ಬರುವ ವಾಹನಕ್ಕೆ ದಾರಿ ಕೊಡುವ ಭರದಲ್ಲಿ ಬ್ಯಾರಿಕೇಡ್‌ಗಳಿಗೆ ಡಿಕ್ಕಿ ಹೊಡೆಯುವಂತಾಗಿದೆ. ಈಗಾಗಲೇ ಈ ಪ್ರದೇಶದಲ್ಲಿ ಹಲವಾರು ವಾಹನಗಳು ಬ್ಯಾರಿಕೇಡ್‌ಗಳಿಗೆ ಬಡಿದು ಅಪಘಾತ ನಡೆದ ನಿದರ್ಶನ ಸಾಕಷ್ಟಿವೆ. ಜಂಕ್ಷನ್ ಸುರಕ್ಷತೆಗಾಗಿ ಇಟ್ಟಿದ್ದ ಬ್ಯಾರಿಕೇಡ್‌ಗಳು ಎರಡೂ ಬದಿಯಲ್ಲಿ ರಸ್ತೆಯಲ್ಲೇ ಉಳಿದುಕೊಂಡಿದ್ದು, ಬ್ಯಾರಿಕೇಡ್‌ಗಳಿಗೆ ಹುಲ್ಲು ಪೊದೆ ಆವರಿಸಿದರೂ ತೆರವುಗೊಳಿಸುವಲ್ಲಿ ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸಿಲ್ಲ. ಒಂದೆಡೆ ಬ್ಯಾರಿಕೇಡ್ ಸಮಸ್ಯೆಯಾದರೆ, ಕಳೆದೊಂದು ವಾರದಿಂದ ಈ ಭಾಗದಲ್ಲಿ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದ್ದು ಮಣ್ಣಿನ ರಾಶಿಯೂ ರಸ್ತೆಗೆ ಬೀಳುತ್ತಿರುವುದರಿಂದ ವಾಹನ ಸವಾರರು ಮತ್ತಷ್ಟು ಎಡವಟ್ಟು ಮಾಡಿಕೊಳ್ಳುವಂತಾಗಿದೆ. ಕುಂಟಲ್ಪಾಡಿ ಪರಿಸರ ತಿರುವಿನಿಂದ ಕೂಡಿದ ರಸ್ತೆಯಾಗಿದ್ದು, ಎರಡೂ ಬದಿಯಲ್ಲಿ ಬರುವ ವಾಹನಗಳ ಸಹಿತ ಒಳ ರಸ್ತೆಯಿಂದ ಬರುವ ವಾಹನ ಅಪಘಾತ ತಪ್ಪಿಸುವ ಸಲುವಾಗಿ ಅಳವಡಿಸಿದ ಬ್ಯಾರಿಕೇಡ್ ಇದೀಗ ಅಪಘಾತಕ್ಕೆ ಎಡೆ ಮಾಡಿಕೊಡುವಂತಿದೆ.
ಸುರಕ್ಷತೆಗಾಗಿ ಅಪಘಾತ ತಡೆಯುವ ನಿಟ್ಟಿನಲ್ಲಿ ಹಾಕಿದ ಬ್ಯಾರಿಕೇಡ್ ಈಗ ಚೆಲ್ಲಾಪಿಲ್ಲಿಯಾಗಿದ್ದು, ಮತ್ತಷ್ಟು ಅಪಘಾತಕ್ಕೆ ಕಾರಣವಾಗಿದೆ. ಉಪಯೋಗಕ್ಕೆ ಬಾರದ ಈ ಬ್ಯಾರಿಕೇಡ್ ತೆರವುಗೊಳಿಸುವಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕಾಗಿದೆ. ರಮಾನಂದ್ ಗ್ರಾಮಸ್ಥ ಬ್ಯಾರಿಕೇಡ್‌ಗಳು ಅಪಘಾತಗಳಿಗೆ ಕಾರಣವಾಗುತ್ತಿವೆೆ. ಹುಲ್ಲು ಪೊದೆ, ಬಳ್ಳಿಗಳು ರಸ್ತೆಗೆ ಆವರಿಸಿವೆ. ಈ ಬಗ್ಗೆ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸಿ, ಒಂದೋ ಬ್ಯಾರಿಕೇಡ್ ಸರಿಯಾಗಿ ಜೋಡಿಸಬೇಕು. ಇಲ್ಲವೇ ಇಲ್ಲಿಂದ ತೆರವುಗೊಳಿಸಬೇಕು. ಸಂಪತ್ ಸಾಣೂರು ವಾಹನ ಸವಾರ https://www.vijayavani.net/get-maximum-marks-by-making-good-use-of-time https://www.vijayavani.net/inauguration-of-kemthur-tulu-drama-competition