ದ.ಕ.ಲೋಕಸಭೆ ಕ್ಷೇತ್ರ : 47 ವರ್ಷಗಳ ಬಳಿಕ ಹೊಸಮುಖಗಳ ಹಣಾಹಣಿ

chowta-400x240
Published on


*ಪಿ.ಬಿ.ಹರೀಶ್ ರೈ


ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ (ಹಿಂದಿನ ಮಂಗಳೂರು ಕ್ಷೇತ್ರ)ದಲ್ಲಿ 47 ವರ್ಷಗಳ ಬಳಿಕ ಹೊಸಮುಖಗಳ ಹಣಾಹಣಿಗೆ ಅಖಾಡ ಸಿದ್ಧವಾಗುತ್ತಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಈ ಬಾರಿ ಯುವ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಿದ್ದು ಇಲ್ಲಿನ ವಿಶೇಷ.
1977ರ ಚುನಾವಣೆಯಲ್ಲಿ ರಾಜಕೀಯಕ್ಕೆ ಹೊಸಮುಖಗಳಾದ ಬಿ.ಜನಾರ್ದನ ಪೂಜಾರಿ ಮತ್ತು ಎ.ಕೆ.ಸುಬ್ಬಯ್ಯ (ಜನತಾ ಪಾರ್ಟಿ) ಸ್ಪರ್ಧಾ ಕಣದಲ್ಲಿದ್ದರು. ಆ ಬಳಿಕ ಇದೇ ಪ್ರಥಮ ಬಾರಿಗೆ ಹೊಸಮುಖಗಳಾದ ಕ್ಯಾ.ಬೃಜೇಶ್ ಚೌಟ (ಬಿಜೆಪಿ) ಮತ್ತು ಪದ್ಮರಾಜ್.ಆರ್.( ಕಾಂಗ್ರೆಸ್) ಚುನಾವಣಾ ಕಣಕ್ಕೆ ಇಳಿದಿದ್ದಾರೆ.
* ಹೊಸಮುಖ ಪ್ರಯೋಗ
1977ರಿಂದ 2014ರವರೆಗೆ ಮಂಗಳೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಕೇವಲ ಇಬ್ಬರು ನಾಯಕರು ಮಾತ್ರ. ಬಿ.ಜನಾರ್ದನ ಪೂಜಾರಿ ಅವರು ಒಟ್ಟು 9 ಬಾರಿ ಸ್ಪರ್ಧಿಸಿದರೆ , ಎಂ.ವೀರಪ್ಪ ಮೊಯ್ಲಿ ಅವರು 2 ಬಾರಿ ಸ್ಪರ್ಧಿಸಿ ಸೋಲು
ಅನುಭವಿಸಿದ್ದರು. 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಮೊದಲ ಬಾರಿಗೆ ಹೊಸ ಮುಖ ಪ್ರಯೋಗ ಮಾಡಲು ಮುಂದಾಯಿತು. ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ ಅವರನ್ನು ಕಣಕ್ಕಿಳಿಸಿತು. ಆದರೆ ಗೆಲುವು ಸಾಧ್ಯವಾಗಲಿಲ್ಲ. ಈ ಬಾರಿ ಸ್ಪರ್ಧೆಗೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಪ್ರಬಲ ಆಕಾಂಕ್ಷಿಯಾಗಿದ್ದರು, ಕಾಂಗ್ರೆಸ್ ಹೈಕಮಾಂಡ್ ಹೊಸಮುಖ ಕಣಕ್ಕಿಳಿಸಲು ನಿರ್ಧರಿಸಿದ ಕಾರಣ
ಯುವ ವಕೀಲ ಪದ್ಮರಾಜ್.ಆರ್.ಟಿಕೆಟ್ ಪಡೆಯಲು ಯಶಸ್ವಿಯಾಗಿದ್ದಾರೆ.
* ಬದಲಾವಣೆ ತಂತ್ರ
ಬಿಜೆಪಿಯಲ್ಲಿ ಅಭ್ಯರ್ಥಿ ಬದಲಾವಣೆ ತಂತ್ರ ಆಗಾಗ ನಡೆದಿದೆ. ಬಿಜೆಪಿ ರಚನೆಯಾದ ಬಳಿಕ ನಡೆದ 1984ರ
ಚುನಾವಣೆಯಲ್ಲಿ ಕೆ.ರಾಮ ಭಟ್ ಅಭ್ಯರ್ಥಿಯಾಗಿದ್ದರು. 89ರ ಚುನಾವಣೆಯಲ್ಲಿ ಯುವ ವಕೀಲ ವಿ.ಧನಂಜಯ ಕುಮಾರ್ ಅವಕಾಶ ಪಡೆದರು. ಮೊದಲ ಎರಡು ಚುನಾವಣೆಯಲ್ಲಿ ಸೋಲು ಅನುಭವಿಸಿದ ಬಿಜೆಪಿ 1991ರ ಚುನಾವಣೆಯಲ್ಲಿ ಜಯಭೇರಿ ಬಾರಿಸಿತು. ವಿ.ಧನಂಜಯ ಕುಮಾರ್ ನಿರಂತರ 4 ಬಾರಿ ಸಂಸದರಾದರೂ, 2004ರ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಲಾಯಿತು. ಡಿ.ವಿ.ಸದಾನಂದ ಗೌಡ ಅವಕಾಶ ಪಡೆದು ರಾಷ್ಟ್ರ ರಾಜಕೀಯ ಪ್ರವೇಶಿಸಿದರು. ಆದರೆ ಒಂದೇ ಅವಧಿಯಲ್ಲಿ ಅವರನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಶಿಫ್ಟ್ ಮಾಡಿ, ಹೊಸಮುಖ ನಳಿನ್‌ಕುಮಾರ್ ಕಟೀಲ್ ಅವರನ್ನು ಬಿಜೆಪಿ ಕಣಕ್ಕಿಳಿಸಿತು. ಬಳಿಕ ಹ್ಯಾಟ್ರಿಕ್ ಜಯ ಸಾಧಿಸಿದ ಕಟೀಲ್ ಈ ಬಾರಿ ಟಿಕೆಟ್ ವಂಚಿತರಾಗಿದ್ದಾರೆ. ಕ್ಯಾ.ಚೌಟ ಎಂಟ್ರಿ ಪಡೆದಿದ್ದಾರೆ.
* ಆಯ್ಕೆ ಹಿನ್ನೆಲೆ ಪೂರ್ವ ತಯಾರಿ
ವರ್ಷದ ಹಿಂದೆಯೇ ಪದ್ಮರಾಜ್ ಆರ್ ಅವರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು. ಕ್ಯಾ.ಬೃಜೇಶ್ ಚೌಟ ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ಇದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಹೊಸ ಅಭ್ಯರ್ಥಿ ಆಯ್ಕೆ ಹಿನ್ನೆಲೆಯಲ್ಲಿ ಪೂರ್ವ ತಯಾರಿ ನಡೆಸಿದ್ದು ಸ್ಪಷ್ಟವಾಗಿದೆ. ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಖಜಾಂಜಿಯಾಗಿರುವ ಪದ್ಮರಾಜ್ ಕೇಂದ್ರದ ಮಾಜಿ ಬಿ.ಜನಾರ್ದನ ಪೂಜಾರಿ ಅವರ ಶಿಷ್ಯ. ಮಾಜಿ ಯೋಧ ಕ್ಯಾ.ಬೃಜೇಶ್ ಚೌಟ ಆರ್‌ಎಸ್‌ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಈ ಇಬ್ಬರು ಯುವ ನಾಯಕರು ಇದುವರೆಗೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ನೇರವಾಗಿ ಲೋಕಸಭೆ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net