

*ಪಿ.ಬಿ.ಹರೀಶ್ ರೈ
ಮಂಗಳೂರು : ಬಿರುಬಿಸಿಲಿಗೆ ಕಡಲ ತಡಿಯ ದಕ್ಷಿಣ ಕನ್ನಡ ಜಿಲ್ಲೆ ಕಾವೇರಿದೆ. ಜತೆಗೆ ಚುನಾವಣೆಯ ಕಾವು ಕೂಡಾ ಏರುತ್ತಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಇಬ್ಬರು ಹೊಸಮುಖಗಳ ಹೋರಾಟಕ್ಕೆ ಅಖಾಡ ಸಿದ್ಧವಾಗಿದೆ. ಮಾಜಿ ಯೋಧ, ಸಂಘಪರಿವಾರದ ಗರಡಿಯಲ್ಲಿ ಪಳಗಿದ ಕ್ಯಾ.ಬ್ರಿಜೇಶ್ ಚೌಟ ಬಿಜೆಪಿಯಿಂದ , ಜನಾರ್ದನ ಪೂಜಾರಿ ಅವರ ಪಟ್ಟ ಶಿಷ್ಯ , ಯುವ ವಕೀಲ ಪದ್ಮರಾಜ್.ಆರ್. ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. ಇಬ್ಬರು ಕೂಡಾ ಯುವಕರು, ವಿದ್ಯಾವಂತರು ,ಸಜ್ಜನರು... ಇದುವರೆಗೆ
ಯಾವುದೇ ಚುನಾವಣೆಗೆ ಸ್ಪರ್ಧಿಸದೆ ನೇರ ಲೋಕಸಭೆಗೆ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಹಾಗಾಗಿ ನಿಕಟ ಸ್ಪರ್ಧೆ ನಿರೀಕ್ಷಿಸಲಾಗಿದೆ. ಪಕ್ಷೇತರರು ಸಹಿತ ಇತರ ಕೆಲವು ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿದ್ದರೂ ಅವರ ಸ್ಪರ್ಧೆ ನಗಣ್ಯ.
*ಗೆಲುವಿನ ದಾಖಲೆ
ಕ್ಷೇತ್ರ ಪುನರ್ ವಿಂಗಡಣೆ ಮೊದಲು ದ.ಕ.ಕ್ಷೇತ್ರ ಮಂಗಳೂರು ಕ್ಷೇತ್ರವಾಗಿತ್ತು. ಕೊಡಗು ಜಿಲ್ಲೆ ಈ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು. ಮೊದಲ 9 ಚುನಾವಣೆಯಲ್ಲಿ ಕಾಂಗ್ರೆಸ್‌ನದ್ದೇ ಪ್ರಾಬಲ್ಯ. ಈ ಪೈಕಿ ಜನಾರ್ದನ ಪೂಜಾರಿ ಅವರು ನಿರಂತರ 4 ಗೆಲುವು ದಾಖಲಿಸಿದ್ದರು. 90ರ ದಶಕದಲ್ಲಿ ಅಯೋಧ್ಯೆಯ ಹೋರಾಟ ಆರಂಭವಾದದ್ದೇ ತಡ ಕರಾವಳಿಯಲ್ಲಿ ಕಾಂಗ್ರೆಸ್ ಪತನ ಶುರುವಾಯಿತು. 1991ರಿಂದ ಸತತವಾಗಿ ಬಿಜೆಪಿಗೆ ಗೆಲುವು. ವಿ.ಧನಂಜಯ ಕುಮಾರ್ 4 ಬಾರಿ, ನಳಿನ್ ಕುಮಾರ್ ಕಟೀಲ್ 3 ಬಾರಿ ಹಾಗೂ ಡಿ.ವಿ.ಸದಾನಂದ ಗೌಡ ಅವರು ಗೆಲವು ದಾಖಲಿಸಿದ್ದರು.
* ಪಕ್ಷಗಳ ಲೆಕ್ಕಾಚಾರ
ಸತತ 8 ಬಾರಿ ಗೆಲುವು ಸಾಧಿಸಿದ್ದೇವೆ. ಜನಾರ್ದನ ಪೂಜಾರಿ ಅವರನ್ನೇ 5 ಬಾರಿ ಸೋಲಿಸಿದ್ದೇವೆ. ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ 6 ಕ್ಷೇತ್ರದಲ್ಲಿ ಗೆಲುವಾಗಿದೆ. ಮೋದಿ ಅಲೆ ಇನ್ನಷ್ಟು ಪ್ರಬಲವಾಗಿದೆ. ಅಭ್ಯರ್ಥಿ ಬದಲಾವಣೆಯಿಂದ ಪಕ್ಷದೊಳಗಿನ ಅಸಮಾಧಾನ ಶಮನವಾಗಿದೆ. ಅರುಣ್ ಪುತ್ತಿಲ ಪಕ್ಷಕ್ಕೆ ಮರಳಿ ಬಲ ತುಂಬಿದ್ದಾರೆ. ಜತೆಗೆ ಹಿಂದುತ್ವದ ಬಲವಿದೆ. ಹಾಗಾಗಿ ಸೋಲುವ ಪ್ರಶ್ನೆಯೇ ಇಲ್ಲ . ಎನ್ನುವ ಆತ್ಮ ವಿಶ್ವಾಸ ಬಿಜೆಪಿ ಪಾಳಯದಲ್ಲಿದೆ.
ಹಿಂದಿನ ಚುನಾವಣೆಗಳಲ್ಲಿ ಬೇರೆಬೇರೆ ಕಾರಣಗಳಿಂದ ಸೋಲು ಕಂಡಿರಬಹುದು. ಆದರೆ ಈಗ ಕರಾವಳಿಯ ಚಿತ್ರಣ ಸಂಪೂರ್ಣ ಬದಲಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 6 ಕ್ಷೇತ್ರ ಗೆದ್ದರೂ ಜಿಲ್ಲೆಯಲ್ಲಿ ಗೆಲುವಿನ ಅಂತರ ಕಡಿಮೆಯಾಗಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಬಲವಿದೆ. ಅಲ್ಪಸಂಖ್ಯಾತ ಮತದಾರರ ಜತೆ ಹೆಚ್ಚಿನ ಬಿಲ್ಲವ ಮತದಾರರು ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ. ಹಾಗಾಗಿ ಈ ಬಾರಿ ಬಿಜೆಪಿ ಪತನ ಖಚಿತ ಎನ್ನುವ ದೃಢ ವಿಶ್ವಾಸ ಕೈ ಪಾಳಯದಲ್ಲಿದೆ.
* ಮತ ಸೆಳೆಯಲು ಕಸರತ್ತು
ಕರಾವಳಿ ಹೇಳಿಕೇಳಿ ಕೋಮು ಸೂಕ್ಷ್ಮ ಪ್ರದೇಶ. ಇಲ್ಲಿ ಹಿಂದುತ್ವ ಮತ್ತು ಅಲ್ಪ ಸಂಖ್ಯಾತರ ರಕ್ಷಣೆಯೇ ಪ್ರತಿ ಬಾರಿ ಚುನಾವಣೆಯ ವಿಷಯ. ಆದರೆ ಈ ಬಾರಿ ಧರ್ಮದ ಬದಲು ಜಾತಿಯೇ ಇಲ್ಲಿ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್ ಬಿಲ್ಲವರ ಮತ ಸೆಳೆಯಲು ವ್ಯವಸ್ಥಿತ ತಂತ್ರ ಹೆಣೆದಿದೆ. ಬಿಜೆಪಿಯೂ ಬಿಲ್ಲವ ಮತದತ್ತ ತನ್ನ ಗಮನ ಕೇಂದ್ರೀಕರಿಸಿದೆ. ಇನ್ನು ನಿರ್ಣಾಯಕ ಸಂಖ್ಯೆಯಲ್ಲಿರುವ ಅಲ್ಪಸಂಖ್ಯಾತರ ಮತ ಬ್ಯಾಂಕ್ ಕಾಂಗ್ರೆಸ್‌ಗೆ ಶಕ್ತಿ ತುಂಬಿದರೆ, ಬಿಜೆಪಿಯ ಹಿಂದುತ್ವದ ಟ್ರಂಪ್ ಕಾರ್ಡ್ ಇನ್ನೂ ಭದ್ರವಾಗಿದೆ.
....................................................