

ಮಂಗಳೂರು : ಯಾರಿಗೂ ಜಗ್ಗಲ್ಲ, ಬಗ್ಗಲ್ಲ ಎಂದು ಮೊಂಡುತನ ಪ್ರದರ್ಶಿಸುವ ಸಿದ್ದರಾಮಯ್ಯ ಅವರು ನ್ಯಾಯಾಲಯದ ತೀರ್ಮಾನಕ್ಕಾದರೂ ತಲೆ ಬಾಗಿ ತಕ್ಷಣ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ತನ್ಮೂಲಕ ಮುಖ್ಯಮಂತ್ರಿ ಸ್ಥಾನದ ಘನತೆಯನ್ನು ಎತ್ತಿ ಹಿಡಿಯ ಬೇಕು ಎಂದು ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಅಗ್ರಹಿಸಿದ್ದಾರೆ.
ಬ್ರಹ್ಮಾಂಡ ಭೃಷ್ಟಾಚಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿನ ದೂರನ್ನು ಪ್ರಾಸಿಕ್ಯೂಷನ್ಗೆ ನೀಡಿರುವ ರಾಜ್ಯಪಾಲರ ಕ್ರಮ ಸಮರ್ಥನೀಯ ವಾಗಿದೆ ಎಂದು ಹೈಕೋರ್ಟ್ ತೀರ್ಪು ನೀಡಿರುವುದು ಬಿಜೆಪಿ ಹೋರಾಟಕ್ಕೆ ಸಿಕ್ಕ ನ್ಯಾಯವಾಗಿದೆ.ಕುಟಿಲ ತಂತ್ರಗಳನ್ನು ಪ್ರಯೋಗಿಸಿದ ಸಿದ್ದರಾಮಯ್ಯ ಅವರಿಗೆ ಈಗ ಹೈಕೋರ್ಟ್ ಶಾಕ್ ನೀಡಿದ್ದು ಅವರ ಮುಖವಾಡ ಕಳಚಿ ಬಿದ್ದಿದೆ ಎಂದು
ಸತೀಶ್ ಕುಂಪಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*ಬಿಜೆಪಿ ಯುವ ಮೋರ್ಚಾ ಒತ್ತಾಯ
ಮುಡಾ ಹಗರಣದಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಮ್ಮ ಪದವಿಗೆ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು. ಕಳಂಕ ರಹಿತ ಆಡಳಿತ ಎಂದು ಜನರ ಕಣ್ಣಿಗೆ ಮಂಕುಬೂದಿ ಎರಚಿ ಈಗ ಸೈಟ್ ಕಬಳಿಕೆಯಲ್ಲಿ ಭಾಗಿಯಾಗಿರುವುದು ಬಹಿರಂಗವಾಗಿದೆ. ರಾಜ್ಯದ ಸಂಪತ್ತಿಗೆ ಕನ್ನ ಹಾಕಿದ ಎಲ್ಲರಿಗೂ ತಕ್ಕ ಶಿಕ್ಷೆಯಾಗಬೇಕು. ಕಾಂಗ್ರೆಸಿಗರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಕಿಂಚಿತ್ತಾದರೂ ಗೌರವವಿದ್ದರೆ ಸಿದ್ದರಾಮಯ್ಯ ಅವರಿಂದ ರಾಜೀನಾಮೆ ಕೊಡಿಸಲಿ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ ಒತ್ತಾಯಿಸಿದ್ದಾರೆ.