

ಮಂಗಳೂರು : ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರನ್ನು ಅಪಮಾನ ಮಾಡಿರುವ ಕಾಂಗ್ರೆಸ್ ಸಚಿವ ಎಂ.ಬಿ. ಪಾಟೀಲ್ ಅವರು ಪರಿಶಿಷ್ಟ ಸಮುದಾಯದವರಲ್ಲಿ ಬೇಷರತ್ ಕ್ಷಮೆ ಯಾಚಿಸಬೇಕೆಂದು ದ.ಕ.ಜಿಲ್ಲಾ ಬಿಜೆಪಿ ಕಾರ್ಯದರ್ಶಿ ದಿನೇಶ್ ಅಮ್ಟೂರ್ ಆಗ್ರಹಿಸಿದ್ದಾರೆ.
ಸಾಂವಿಧಾನಿಕ ಹುದ್ದೆಯಲ್ಲಿರುವ ಛಲವಾದಿ ನಾರಾಯಣ ಸ್ವಾಮಿ ಅವರು ಪರಿಶಿಷ್ಟ ಸಮುದಾಯದವರು ಎನ್ನುವ ಕಾರಣಕ್ಕಾಗಿ ಅವಹೇಳನಕಾರಿ ಪದ ಬಳಸಿ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅಪಮಾನ ಮಾಡಿದ್ದಾರೆ. ಕೆಐಎಡಿಬಿಯಲ್ಲಿ ನಡೆದಿರುವ ನಿವೇಶನಗಳ ನಿಯಮ ಬಾಹಿರ ಹಾಗೂ ಅಕ್ರಮ ಮಂಜೂರಾತಿ ಕುರಿತು ಛಲವಾದಿಯವರು ಗಮನ ಸೆಳೆದಿದ್ದಾರೆ. ಇದನ್ನು ಸಹಿಸದ
ಎಂ.ಬಿ ಪಾಟೀಲ್ ಅವರು ಪ್ರತಿಕ್ರಿಯೆ ನೀಡುವ ಭರದಲ್ಲಿ ಅವಮಾನ ಮಾಡಿರುವ ಪರಿಯನ್ನು ನೋಡಿದಾಗ ಪರಿಶಿಷ್ಟರ ಬಗ್ಗೆ ಅವರಿಗಿರುವ ಗೌರವ ಯಾವ ಮಟ್ಟದ್ದು ಎನ್ನುವುದು ಬಹಿರಂಗವಾಗಿದೆ. ಶೋಷಿತ ಸಮುದಾಯದಿಂದ ಮೇಲೆದ್ದು ಬಂದ ನಾಯಕನನ್ನು ಅವಹೇಳನ ಮಾಡಿರುವುದು ಇಡೀ ಪರಿಶಿಷ್ಟ ಸಮುದಾಯವನ್ನೇ ಅಪಮಾನಿಸಿದಂತಾಗಿದೆ. ಎಂ.ಬಿ ಪಾಟೀಲರ ಈ ವರ್ತನೆಯನ್ನು ತೀವ್ರವಾಗಿ ಖಂಡಿಸುವುದಾಗಿ ದಿನೇಶ್ ಅಮ್ಟೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.