ಲೋಕಸಭಾ ಚುನಾವಣೆ ಹೊಂದಾಣಿಕೆ ಕೇಂದ್ರಕ್ಕೆ ಬಿಟ್ಟದ್ದು: ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡ ಹೇಳಿಕೆ

Sadananda_Gowda
Published on

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದೇಶದ ರಾಜಕಾರಣ ನೋಡಿಕೊಂಡು ಹೊಂದಾಣಿಕೆ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ತೀರ್ಮಾನ ಮಾಡಲಾಗುವುದು. ಕಳೆದ ಬಾರಿ ಓರ್ವ ಬೆಂಬಲಿತ ಅಭ್ಯರ್ಥಿ ಹಾಗೂ 26 ಮಂದಿ ಗೆದ್ದಿದ್ದಾರೆ. ಹೊಂದಾಣಿಕೆ ಅಗತ್ಯ ಇದ್ಯಾ ಎಂದು ಪ್ರಶ್ನೆ ಮಾಡುವುದು ಸರಿಯಿದೆ. ಪಕ್ಷ ನಮ್ಮನ್ನು ಆ ಬಗ್ಗೆ ಕೇಳುತ್ತದೆ. ಕೇಳಿದಾಗ ನಾವು ಅದರ ಬಗ್ಗೆ ಮಾತನಾಡುತ್ತೇವೆ. ಮಾಧ್ಯಮಗಳ ಮುಂದೆ ಹೇಳಲು ಆಗಲ್ಲ ಎಂದು ಹೇಳಿದರು.

ವಿಧಾನಸಭಾ ಚುನಾವಣೆಯಲ್ಲಿ ಸೋಲಿಗೆ ಹೊಸ ಪ್ರಯೋಗ ಕಾರಣ. ಹೊಸ ಪ್ರಯೋಗದಲ್ಲಿ ನಾವು ಯಶಸ್ಸು ಕಾಣಲಿಲ್ಲ. ಗುಜರಾತ್, ಯುಪಿಯಲ್ಲಿ ನಡೆದ ಪ್ರಯೋಗ ದಕ್ಷಿಣ ಭಾರತದಲ್ಲಿ ನಡೆಯಲಿಲ್ಲ. ಅದು ನೂರಕ್ಕೆ ನೂರು ಸತ್ಯ. ಬಿ.ಎಸ್.ಯಡಿಯೂರಪ್ಪರನ್ನು ಬಿಜೆಪಿ ಹೈಕಮಾಂಡ್ ಕಡೆಗಣನೆ ಆರೋಪ ಸತ್ಯಕ್ಕೆ ದೂರವಾದದ್ದು. ದೇಶದಲ್ಲಿ ಅತ್ಯುನತ್ತ ಸ್ಥಾನಕ್ಕೆ ಯಡಿಯೂರಪ್ಪ ಅವರನ್ನ ಆಯ್ಕೆ ಮಾಡಿದೆ. ಕೇಂದ್ರ ಸಂಸದೀಯ ಮಂಡಳಿ ಸದಸ್ಯರನ್ನಾಗಿ ಮಾಡಿದೆ. ಪಕ್ಷ ಯಡಿಯೂರಪ್ಪರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಆದರೆ ನಮ್ಮಲ್ಲಿ ಬಿರುಕಿದೆ ಎಂದು ಬಿಂಬಿಸಲು ವಿರೋಧಿಗಳು ಯಶಸ್ವಿಯಾದರು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಅವೈಜ್ಞಾನಿಕ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಹೌದು, ಖಂಡಿತವಾಗಿಯೂ ಸ್ವಲ್ಪ ಸತ್ಯಾಂಶವಿದೆ. ಇವತ್ತಿಗೂ ಕೂಡ ಟೋಲ್ ವ್ಯವಸ್ಥೆ ಸರಿಯಿಲ್ಲ. ಒಳ ಮತ್ತು ಹೊರ ಪ್ರವೇಶ ಸರಿಯಾಗಿ ಮಾಡಲು ಆಗಿಲ್ಲ. ಈ ಅವೈಜ್ಞಾನಿಕದ ಬಗ್ಗೆ ಕೇಂದ್ರ ಸಚಿವ ಗಡ್ಕರಿ ಗಮನಕ್ಕೆ ತಂದಿದ್ದು, ಸಮಗ್ರ ಅಧ್ಯಯನ ಮಾಡಿ ಸರಿಪಡಿಸುವಂತೆ ಒತ್ತಾಯಿಸಿದ್ದೇವೆ. ಹೆದ್ದಾರಿ ಸರಿ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ವ್ಯತ್ಯಾಸಗಳನ್ನ ಸರಿ ಮಾಡುವ ಕೆಲಸ ಆಗುತ್ತದೆ. ಅವೈಜ್ಞಾನಿಕವಾಗಿರುವ ಹೆದ್ದಾರಿಯನ್ನು ಸರಿ ಮಾಡುವುದು ನಮ್ಮ ಮೊದಲ ಗುರಿ. ಆನಂತರ ಅವ್ಯವಹಾರದ ಬಗ್ಗೆ ತನಿಖೆಗೆ ನಡೆಸುತ್ತೇವೆ ಎಂದರು.

ಕಾಂಗ್ರೆಸ್ ಕೊಟ್ಟ ಭರವಸೆಯನ್ನು ಮೊದಲು ಈಡೇರಿಸಲಿ. ಒಬ್ಬ ಮಂತ್ರಿ ಸರ್ವರ್ ಹ್ಯಾಕ್ ಮಾಡಿದ್ದಾರೆ ಎಂಬ ಬಾಲಿಶಃ ಹೇಳಿಕೆ ನೀಡುತ್ತಾರೆ. ಅದೆಲ್ಲ ಸರಿಯಲ್ಲ. ಸಿದ್ದರಾಮಯ್ಯ ತಂಡ ಎರಡು ವರ್ಷ, ಬಳಿಕ ಬೇರೆ ತಂಡ ಮೂರು ವರ್ಷ ಇದು ಈಗ ಮುಖ್ಯವಲ್ಲ. ಜನಾದೇಶ ಕೊಟ್ಟಿರುವುದು ಖುರ್ಚಿ ಯಾರಿಗೆ ಐದು ವರ್ಷವೆಂದು ಅಲ್ಲ. ಜನರಿಗೆ ಅನ್ನ, ಮನೆ, ಉದ್ಯೋಗ ಕೊಡಬೇಕಿದೆ. ಅದು ಬಿಟ್ಟು ಬೊಗಳೆ ಬಿಟ್ಟರೆ ಇವರ ಅಧ್ಯಾಯ ಬೇಗ ಮುಗಿಯುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ಕೇಳಿದವರಿಗೆಲ್ಲ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೊಡಲು ಆಗಲ್ಲ. ತುಂಬಾ ಜನ ನಮಗೆ ಕೊಡಿ ಎಂದು ಕೇಳುತ್ತಿರುತ್ತಾರೆ. ಹಾಗಂತ ಎಲ್ಲರಿಗೂ ಕೊಡುವುದಕ್ಕೆ ಆಗುವುದಿಲ್ಲ. ರಾಜಕೀಯ ವಿದ್ಯಮಾನಗಳು, ವ್ಯತ್ಯಾಸಗಳನ್ನ ಸರಿಮಾಡುವಂತ ಒಬ್ಬ ಯಶಸ್ವಿ ಅಧ್ಯಕ್ಷನನ್ನ ಪಕ್ಷ ಕೊಡಬಹುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net