

ಮಂಗಳೂರು : ಹೋಟೆಲ್,ವಸತಿ ಗೃಹ, ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರಿಗೆ ಸುರಕ್ಷಿತ ಕುಡಿಯುವ ನೀರು, ಆಹಾರ ಒದಗಿಸುವ ಮೂಲಕ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ
ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್.ಕೆ ಸೂಚಿಸಿದ್ದಾರೆ.
ಜಿಲ್ಲಾ ಪಂಚಾಯಿತಿಯಲ್ಲಿ ಗುರುವಾರ ನಡೆದ ಜಿಲ್ಲಾ ಕಣ್ಗಾವಲು ಮತ್ತು ಕಾರ್ಯಕಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ ಕುಡಿಯುವ ನೀರಿನ ಮಾದರಿಯನ್ನು ಕಾಲಕಾಲಕ್ಕೆ ಪರೀಕ್ಷಿಸಿ ಗುಣಮಟ್ಟವನ್ನು ದೃಢೀಕರಿಸಬೇಕು. ಶುದ್ಧೀಕರಣಕ್ಕೆ ಬೇಕಾದ ಮೌಲ್ಯಮಾಪನಾ ಕ್ರಮಗಳನ್ನು ಅನುಸರಿಸಬೇಕು ’ಎಂದರು.
ಸಾಕು ಪ್ರಾಣಿಗಳ ರೇಬಿಸ್ ವ್ಯಾಕ್ಸಿನೇಶನ್ ಪೂರ್ಣ ಪ್ರಮಾಣದಲ್ಲಿ ಕೈಗೊಳ್ಳಬೇಕು. ಸಂಶಯಾಸ್ಪದ ರೋಗ ಪ್ರಕರಣಗಳು ಕಂಡು ಬಂದಲ್ಲಿ ಇಲಾಖಾ ಅಧಿಕಾರಿಗಳೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು .ಕೃಷಿ ಕಾರ್ಮಿಕರಿಗೆ ಸೂಕ್ತವಾದ ಆರೋಗ್ಯ ಶಿಕ್ಷಣ ನೀಡಿ ಇಲಿಜ್ವರ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕೆ ಬೇಕಾದ ರಕ್ಷಣಾತ್ಮಕ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ತೋಟ,
ಕೃಷಿ ಕಾರ್ಯ ಮಾಡುವವರು ಯಾವುದೇ ಗಾಯಗಳನ್ನು ಹೊಂದಿದ್ದಲ್ಲಿ ವಾಟರ್ ಪ್ರೂಫ್ ಬ್ಯಾಂಡೇಜ್ ಬಳಸಲು ಸೂಚಿಸಬೇಕು. ರೈತ ಸಂಪರ್ಕ ಸಭೆಗಳಲ್ಲಿ ವಿಷಕಾರಿ ಹಾವುಗಳ ಬಗ್ಗೆ ಪ್ರಥಮ ಚಿಕಿತ್ಸೆಯ ಬಗ್ಗೆ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಎ.ಎಸ್.ವಿ ಲಸಿಕೆ ದೊರೆಯುವ ಬಗ್ಗೆ ಮಾಹಿತಿ ನೀಡಬೇಕು ಎಂದು ಡಾ. ಆನಂದ್.ಕೆ ಸೂಚಿಸಿದರು.
ಚರಂಡಿಗಳಲ್ಲಿ ನೀರು ನಿಲ್ಲುವುದನ್ನು ನಿರ್ವಹಣೆ ಮತ್ತು ದುರಸ್ತಿ ಮಾಡದೇ ಇರುವುದರಿಂದ ರೋಗ ಉತ್ಪತ್ತಿಯಾಗುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮವಹಿಸಬೇಕು ಎಂದು ಅವರು ಸೂಚಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನವೀನ್‌ಚಂದ್ರ ಕುಲಾಲ್,ವೆನ್ಲಾಕ್ ಅಧೀಕ್ಷಕ ಡಾ. ಶಿವಪ್ರಕಾಶ್, ಡಾ.ಜಗದೀಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ.ಕೆ ಉಳೆಪಾಡಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ದೀಪಾ ಪ್ರಭು, ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಯ್ ಉಪಸ್ಥಿತರಿದ್ದರು.