ಮುಖ್ಯಮಂತ್ರಿ ಸ್ಥಾನ ಬದಲಾವಣೆ ಸೂಚನೆ ನೀಡಿದ ಡಿ.ಕೆ. ಶಿವಕುಮಾರ್

D.K.Shivakumar 01
Published on

ಮೈಸೂರು: ದಿಲ್ಲಿಯಲ್ಲಿ ಏನು ಆಗ್ಬೇಕೋ, ಎಲ್ಲ ತೀರ್ಮನ ಆಗಿದೆ, ಸ್ವಲ್ಪ ದಿನ ಕಾಯಿರಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಹುದ್ದೆಯ ಬದಲಾವಣೆಯ ಸೂಚನೆ ನೀಡಿದ್ದಾರೆ.

ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಒಕ್ಕಲಿಗರ ಸಭೆಯಲ್ಲಿ ಮಾತನಾಡಿದ ಅವರು, ಇದೀಗ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ಬೇಡ. ಸ್ವಲ್ಪ ದಿನ ಕಾಯಿರಿ. ಸಂದರ್ಭ ಬಂದಾಗ ನೀವು ನನ್ನ ಬೆಂಬಲಕ್ಕೆ ನಿಲ್ಲಬೇಕು ಎಂದು ಹೇಳುವ ಮೂಲಕ ಸಮುದಾಯದ ಬೆಂಬಲವನ್ನು ಕೇಳಿದರು.

ಇದು ಐದು ವರ್ಷದ ಸರ್ಕಾರ ಅಲ್ಲ, 10 ವರ್ಷ ನಾವೇ ಆಡಳಿತ ನಡೆಸುತ್ತೇವೆ. ನಾನು ಈ ಹಂತಕ್ಕೆ ಏರಲು ಸಾಕಷ್ಟು ಕಷ್ಟ ಪಟ್ಟಿದ್ದೇನೆ, ಹಲವಾರು ಕಿರುಕುಳಗಳನ್ನು ಎದುರಿಸಿದ್ದೇನೆ. ನನ್ನ ಮೇಲೆ ಐಟಿ, ಇಡಿ ಎಲ್ಲ ದಾಳಿಗಳು ನಡೆದಿವೆ ಎಂದು ಬೇಸರ ತೋಡಿಕೊಂಡರು.

ಮೈಸೂರು ಭಾಗದಲ್ಲಿ ಒಕ್ಕಲಿಗ ಸಮಾಜದವರಿಗೆ ಸ್ವಲ್ಪ ಸಮಸ್ಯೆಯಾಗಿರುವುದು ನಿಜ. ಇದೀಗ ಸಚಿವ ಕೆ.ವೆಂಕಟೇಶ್, ಶಾಸಕ ಕೆ. ಹರೀಶ್ ಗೌಡ ಅವರಿಗೆ ನಾಯಕತ್ವ ವಹಿಸಲಾಗಿದೆ. ನಾನು ಸಹ ನಿಮ್ಮೂರಿನ ಅಳಿಯ. ನನಗೂ ಜವಾಬ್ದಾರಿ ಇದೆ. ನೀವು ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ, ಸ್ವಲ್ಪ ದಿನ ತಾಳ್ಮೆಯಿಂದ ಇರಿ ಎಂದು ಸಲಹೆ ನೀಡಿದ್ದಾರೆ.

ಬಿಜೆಪಿಯಲ್ಲಿ ಒಕ್ಕಲಿಗರು ಬೆಳೆಯಲು ಅವಕಾಶಗಳು ಇಲ್ಲ. ಜೆಡಿಎಸ್‌ನ ಆಯುಷ್ಯ ಮುಗಿದು ಹೋಗಿದೆ. ಹೀಗಾಗಿ ಒಕ್ಕಲಿಗ ಸಮುದಾಯ ನನ್ನ ನಾಯಕತ್ವಕ್ಕೆ ಶಕ್ತಿ ತುಂಬವ ಕಾರ್ಯ ಮಾಡಬೇಕು. ಮೈಸೂರು ಭಾಗದ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net